ಪೊಲೀಸರ ಲಾಠಿ ಏಟಿಗೆ ತರಕಾರಿ ಮಾರುತ್ತಿದ್ದ ಅಪ್ರಾಪ್ತ ಬಾಲಕ ಬಲಿ
ಕೊರೊನಾ ಕರ್ಫ್ಯೂ ಬಿಗುಗೊಳಿಸುವ ಕಾರ್ಯದಲ್ಲಿ ಪೊಲೀಸರು 17 ವರ್ಷ ವಯಸ್ಸಿನ ಬಾಲಕನೊಬ್ಬನ ಪ್ರಾಣ ತೆಗೆದಿರುವ ಘಟನೆ ನಡೆದಿದೆ. ಮನೆಯ ಮುಂದೆ ತರಕಾರಿ ಮಾರುತ್ತಿದ್ದ ಬಾಲಕನೊಬ್ಬ ಪೊಲೀಸರ ಲಾಠಿ ಏಟು ತಿಂದು ಮೃತಪಟ್ಟಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ಉನ್ನಾವ್ ಜಿಲ್ಲೆಯ ಬಂಗಾರ್‌ಮಾವ್ ಪ್ರದೇಶದ ಭಟ್‌ಪುರಿ ಬಡಾವಣೆಯಲ್ಲಿ ಬಾಲಕನೊಬ್ಬ ಮನೆಯ ಹೊರಗೆ ತರಕಾರಿ ಮಾರುತ್ತಿದ್ದ. ಕರೊನಾ ಕರ್ಪ್ಯೂ ಉಲ್ಲಂಘಿಸಿದ್ದಕ್ಕಾಗಿ ಅವನನ್ನು ಹಿಡಿದ ಪೊಲೀಸ್ ಪೇದೆ ಲಾಠಿಯಿಂದ ಹೊಡೆದರು. ನಂತರ ಪೊಲೀಸ್ ಠಾಣೆಗೆ ಕರೆದೊಯ್ದು ಅಲ್ಲೂ ಥಳಿಸಿದರು. ಬಾಲಕನ ಪರಿಸ್ಥಿತಿ ಬಿಗಡಾಯಿಸಿದಾಗ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯುವ ವೇಳೆಗಾಗಲೇ ಬಾಲಕ ಮೃತಪಟ್ಟಿದ್ದ ಎನ್ನಲಾಗಿದೆ.
ಬಳಿಕ “ಘಟನೆಗೆ ಕಾರಣರಾದ ಪೇದೆ ವಿಜಯ್ ಚೌಧರಿಯನ್ನು ತಕ್ಷಣವೇ ಸಸ್ಪೆಂಡ್ ಮಾಡಿದ್ದು, ಹೋಮ್‌ಗಾರ್ಡ್ ಸತ್ಯಪ್ರಕಾಶ್‌ರನ ಕೆಲಸದಿಂದ ತೆಗೆಯಲಾಗಿದೆ. ಇಡೀ ಪ್ರಕರಣದ ತನಿಖೆ ನಡೆಯಲಿದ್ದು, ಪೊಲೀಸರ ವಿರುದ್ಧ ಎಫ್.ಐ.ಆರ್. ದಾಖಲಿಸಲಾಗಿದೆ” ಎಂದು ಪೊಲೀಸ್ ಇಲಾಖೆ ಹೇಳಿಕೆ ನೀಡಿದೆ.
ಪೊಲೀಸರ ಈ ವರ್ತನೆಯಿಂದ ಸಿಟ್ಟುಗೊಂಡಿರುವ ಸ್ಥಳೀಯರು ಲಖನೌ ರೋಡ್ ಕ್ರಾಸಿಂಗ್‌ನಲ್ಲಿ ವಾಹನಗಳನ್ನು ಅಡ್ಡಗಟ್ಟಿ ತಪ್ಪಿತಸ್ಥರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಹಾಗೂ ಸಂತ್ರಸ್ತರ ಕುಟುಂಬಕ್ಕೆ ಪರಿಹಾರ ನೀಡಬೇಕೆಂದು ಪ್ರತಿಭಟನೆ ನಡೆಸಿದರು ಎನ್ನಲಾಗಿದೆ.