ತಾಯಿಯನ್ನು ಕಳೆದುಕೊಂಡ ದುಖದಲ್ಲಿದ್ದ ಮಗಳು ತಕ್ಷಣ ಅಮ್ಮನ ಮೊಬೈಲ್ ಫೋನ್ ಗೆ ತಡಕಾಡಿ ಹುಡುಕಿಕೊಡಿ ಎಂದು ಬೇಡಿಕೊಂಡಿದ್ದೇಕೆ ?!

ಮಡಿಕೇರಿಯ ಕೋವಿಡ್​ ಆಸ್ಪತ್ರೆಯಲ್ಲಿ ಇತ್ತೀಚೆಗೆ ಕೋವಿಡ್‌ನಿಂದ ತನ್ನ ತಾಯಿಯನ್ನು ಕಳೆದುಕೊಂಡ ಪುಟ್ಟ ಬಾಲಕಿ ಆಕೆಯ ಮೊಬೈಲ್​ಅನ್ನು ಕಳೆದುಕೊಂಡು ಕಣ್ಣೀರಿಡುತ್ತಿದ್ದಾಳೆ.

 

ಬಾರದ ಊರಿಗೆ ತೆರಳಿರುವ ಅಮ್ಮನ ನೆನಪುಗಳಿರುವ ಮೊಬೈಲ್​ಅನ್ನು ಹುಡುಕಿಕೊಡಿ ಎಂಬ ಅವಳ ಅಹವಾಲು ಕರುಳು ಹಿಂಡುವಂತಿದೆ.

ಕೊಡಗು ಜಿಲ್ಲೆ ಕುಶಾಲನಗರದ ನಿವಾಸಿ ಪುಟ್ಟ ಬಾಲಕಿ ಹೃತಿಕ್ಷಳಿಗೆ ಮತ್ತು ಅವಳ ತಂದೆತಾಯಿಗೆ ಇತ್ತೀಚೆಗೆ ಕರೊನಾ ಸೋಂಕು ತಗುಲಿತು.

ಅವಳೂ ಮತ್ತು ದಿನಗೂಲಿ ನೌಕರರಾದ ತಂದೆ ಮನೆಯಲ್ಲೇ ಕ್ವಾರಂಟೈನ್ ಮಾಡಿಕೊಂಡು ಚಿಕಿತ್ಸೆ ಪಡೆದರೆ, ತಾಯಿಯನ್ನು ಮಡಿಕೇರಿ ಕೋವಿಡ್ ಆಸ್ಪತ್ರೆಗೆ ಸೇರಿಸಲಾಗಿತ್ತು.

ಮೇ 16 ರಂದು ಚಿಕಿತ್ಸೆ ಫಲಿಸದೆ ಆಕೆಯ ತಾಯಿ ಮೃತಪಟ್ಟರು. ಆ ವೇಳೆ ತಾಯಿಯ ಜೊತೆಗಿದ್ದ ಮೊಬೈಲ್ ವಾಪಸ್ ಸಿಕ್ಕಿರಲಿಲ್ಲ.

ಆ ಮೊಬೈಲ್​ನಲ್ಲಿ ತನ್ನ ಮತ್ತು ತಾಯಿಯ ಫೋಟೋಗಳು ಮತ್ತು ಇತರ ನೆನಪುಗಳು ಇವೆ ಎಂಬ ಕಾರಣಕ್ಕೆ ಇದೀಗ ಹೃತಿಕ್ಷ ಅದನ್ನು ವಾಪಸ್​ ಪಡೆಯುವ ಕಾತರದಲ್ಲಿದ್ದಾಳೆ.

ಇದಕ್ಕಾಗಿ ಹೃತಿಕ್ಷ ಜಿಲ್ಲಾಧಿಕಾರಿಗಳಿಗೆ, ಶಾಸಕರಿಗೆ ಮತ್ತು ಮಡಿಕೇರಿ ಕೋವಿಡ್ ಆಸ್ಪತ್ರೆಯ ಸಿಬ್ಬಂದಿಗೆ ಬಹಿರಂಗ ಪತ್ರವೊಂದನ್ನು ಬರೆದಿದ್ದಾಳೆ.

“ನಾನು ತಾಯಿಯನ್ನು ಕಳೆದುಕೊಂಡು ತಬ್ಬಲಿಯಾಗಿದ್ದೇನೆ. ನನ್ನ ತಾಯಿಯ ನೆನಪುಗಳು ಆ ಮೊಬೈಲ್‌ನಲ್ಲಿರುತ್ತದೆ. ಆದ್ದರಿಂದ ಯಾರಾದರೂ ತೆಗೆದುಕೊಂಡಿದ್ದರೆ ಅಥವಾ ಯಾರಿಗಾದ್ರೂ ಸಿಕ್ಕಿದ್ದರೆ ದಯವಿಟ್ಟು ಈ ತಬ್ಬಲಿಗೆ ಅದನ್ನು ತಲುಪಿಸಿ” ಎಂದು ಸಾರ್ವಜನಿಕವಾಗಿ ಮನವಿ ಮಾಡಿದ್ದಾಳೆ. ಇದೀಗ ಬಂದ ಸುದ್ದಿ ಏನೆಂದರೆ ಪೊಲೀಸ್ ಇಲಾಖೆ ಕೂಡ ಆಕೆಯ ಮನವಿಯನ್ನು ಗಂಭೀರವಾಗಿ ಪರಿಗಣಿಸಿ, ಆ ಹುಡುಗಿಗೆ ಸಹಾಯ ಮಾಡುವ ದೃಷ್ಟಿಯಿಂದ ಆಕೆಯ ತಾಯಿಯ ಮೊಬೈಲನ್ನು ಹುಡುಕಿಕೊಡುವ ಪ್ರಯತ್ನ ಮಾಡುವುದಾಗಿ ಹೇಳಿಕೊಂಡಿದೆ.

Leave A Reply

Your email address will not be published.