ಮಂಗಗಳ ರುಂಡ-ಮುಂಡ ಬೇರ್ಪಡಿಸಿ ನೇತು ಹಾಕಿದರೆ ಜಿಲ್ಲಾ ಪಂಚಾಯಿತಿ ಟಿಕೆಟ್ ಗ್ಯಾರಂಟಿ | ಏನಿದು ಲಾಜಿಕ್..?!
ಇಲ್ಲೊಬ್ಬನ ಪ್ರಕಾರ ಮಂಗಗಳ ರುಂಡ-ಮುಂಡ ಬೇರ್ಪಡಿಸಿ ನೇತು ಹಾಕಿದರೆ ಜಿಲ್ಲಾ ಪಂಚಾಯತ್ ಟಿಕೆಟ್ಟು ಸಿಗುತ್ತಂತೆ. ಸದ್ಯಕ್ಕೆ ಆ ದುರಾತ್ಮ ಯಾವ ಪಕ್ಷಕ್ಕೆ ಸೇರಿದವನೆಂದು ತಿಳಿದುಬಂದಿಲ್ಲ. ಆದರೆ ಆ ಲಾಜಿಕ್ ಇಟ್ಟುಕೊಂಡು ಆತ ಮಂಗಗಳನ್ನು ಕೊಂದು ನೇತುಹಾಕಿ, ಇದೀಗ ಜಿಲ್ಲಾ ಪಂಚಾಯತ್ ಟಿಕೆಟ್ ನ ನಿರೀಕ್ಷೆಯಲ್ಲಿದ್ದಾನೆ.
ಜಿಲ್ಲಾ ಪಂಚಾಯಿತಿಯ ಟಿಕೆಟ್‌ಗಾಗಿ ಎರಡು ಮಂಗ ತಲೆಗಳನ್ನು ತುಂಡರಿಸಿ ನೇತು ಹಾಕಿರುವ ಮೌಢ್ಯದ ಮತ್ತು ಹೀನ ಘಟನೆ ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನ ತಿಪಲಾಪುರ ಗ್ರಾಮದ ನಡೆದಿದೆ.
ಲಾಕ್ ಡೌನ್ ಮಧ್ಯೆಯೇ ಬ್ಯಾಡಗಿಯಲ್ಲಿ ಇಂಥದ್ದೊಂದು ಹೇಯ ಕೃತ್ಯ ನಡೆದಿದ್ದು, ಮಂಗಗಳ ರುಂಡ ಮಂಡ ಚೆಂಡಾಡಿ ಅವುಗಳನ್ನು ಆಂಜನೇಯ ದೇವಸ್ಥಾನದಲ್ಲಿ ನೇತು ಹಾಕಲಾಗಿದೆ. ಎರಡು ವಾರಗಳ ಹಿಂದೆ ಈ ಘಟನೆ ನಡೆದಿದ್ದು ಇದೀಗ ಬೆಳಕಿಗೆ ಬಂದಿದೆ.
2 ಮಂಗಗಳ ರುಂಡ ಕತ್ತರಿಸಿ, ಹುಗಿದು ಪೂಜೆ ಮಾಡಿದ್ದ ಗ್ರಾಮದ ರಾಜಕೀಯ ಧುರೀಣನೊಬ್ಬ, ರಾಜಕೀಯ ಉನ್ನತ ಭವಿಷ್ಯಕ್ಕಾಗಿ ಈ ರೀತಿ ಮಾಡಿದ್ದಾನೆ ಎನ್ನಲಾಗಿದೆ. ಹೀಗೆ ಮಾಡಿದರೆ ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ಟಿಕೆಟ್ ಸಿಗುತ್ತದೆ ಎಂದು ವಾಮಾಚಾರಿಯೊಬ್ಬ ಈತನಿಗೆ ಹೇಳಿರುವ ಕಾರಣ, ಇಂಥ ಕೃತ್ಯ ಎಸಗಿದ್ದಾನೆ ಎನ್ನುವುದು ಗ್ರಾಮದಲ್ಲಿ ಜನರು ಮಾತಾಡುತ್ತಿರುವ ಈ ಕ್ಷಣದ ಸತ್ಯ.
ಘಟನೆಯ ವಿಷಯ ತಿಳಿದು ಸ್ಥಳಕ್ಕೆ ಬಂದ ಅರಣ್ಯ ಅಧಿಕಾರಿಗಳು ಮಾಹಿತಿ ಕಲೆ ಹಾಕುತ್ತಿದ್ದಾರೆ. ಆದರೆ ಈ ಘಟನೆಯ ಕುರಿತು ಸತ್ಯಾಂಶ ಬಾಯಿ ಬಿಡಲು ಗ್ರಾಮಸ್ಥರು ಭಯ ಪಡುತ್ತಿದ್ದಾರೆ ಎನ್ನಲಾಗಿದೆ. ಸದ್ಯ ವನ್ಯಜೀವಿ ಸಂರಕ್ಷಣಾ ಕಾಯ್ದೆ 1972 ಅಡಿ ಸ್ವಯಂ ಪ್ರೇರಿತವಾಗಿ ಕೇಸ್ ದಾಖಲಿಸಿಕೊಂಡ ಅರಣ್ಯ ಇಲಾಖೆ ಅಧಿಕಾರಿಗಳು ತನಿಖೆ ಮುಂದುವರೆಸಿದ್ದಾರೆ.
ಮಂಗಗಳನ್ನು ಕೊಂದವ ಮಾತ್ರವಲ್ಲದೇ, ಅದಕ್ಕೆ ಸಹಾಯ ಮಾಡಿದ ಯಾರನ್ನೂ ಸುಮ್ಮನೇ ಬಿಡುವುದಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ. ಜಿಲ್ಲಾ ಪಂಚಾಯತ್ ಟಿಕೆಟ್ಗಾಗಿ ಮಂಗಗಳನ್ನು ಕೊಂದವನು ಗೆದ್ದು ಬರಲು ಏನೇನು ಮಾಡಿಯಾನು ಎಂಬುದು ಭಯಗ್ರಸ್ತ ಚಿಂತಾ ಪ್ರಶ್ನೆಯಾಗಿದೆ.