ಮೈ ತುಂಬಾ ಹನಿ ? ಬೀ ಬಿಟ್ಟುಕೊಂಡು ಫೋಟೋ ಶೂಟ್ ಮಾಡಿಕೊಂಡ ಹಾಲಿವುಡ್ ಹನಿ !
ಹೆಸರಾಂತ ಹಾಲಿವುಡ್ ತಾರೆ ಸೌಂದರ್ಯದ ಗಣಿ ಆ್ಯಂಜಲೀನಾ ಜೋಲೀ ಅವರು ಇತ್ತೀಚೆಗೆ ಹೊಸರೂಪದಲ್ಲಿ ಕ್ಯಾಮೆರಾ ಮುಂದೆ ಕಾಣಿಸಿಕೊಂಡಿದ್ದಳು. ತನ್ನ 45 ನೆಯ ವಯಸ್ಸಿನಲ್ಲಿಯೂ 22 ರ ಬೆಡಗಿಯ ಬಳುಕುವ ಮೈ ಮಾಟದ ಈಕೆ ಜಗತ್ತಿನಲ್ಲಿ ಕೋಟ್ಯಂತರ ಚಿತ್ರ ರಸಿಕರ ಕನಸು. ಅಂತಹ ಜೋಲಿಯ ಒಂದು ಭೇಟಿಗಾಗಿ ಕಾಯುತ್ತಿರುವವರೇಷ್ಟೋ.ಆದರೆ ಆ ಅವಕಾಶ ಸಾಮಾನ್ಯರಿಗೆ ದುರ್ಲಭ.
ಆದರೆ ಇದೀಗ ಸಾವಿರಾರು ಜನರಿಗೆ ಒಟ್ಟಿಗೆ ಆಕೆಯನ್ನು ಭೇಟಿ ಮಾಡಲು ಅವಕಾಶ ಸಿಕ್ಕಿತ್ತು. ಅಷ್ಟೇ ಅಲ್ಲ, ಆಕೆಯ ಭುಜವನ್ನು ಮುಟ್ಟುವ, ಕೆನ್ನೆ ಸವರುವ, ಹಣೆಯ ಮೇಲೆ ಹರಿಯುವ ಮತ್ತು ಕೊರಳ ಬಾಚಿ ತಬ್ಬಿಕೊಂಡು ಸಂಭ್ರಮಿಸುವ ಅವಕಾಶ ಅಷ್ಟೂ ಮಂದಿಗೆ ಸಿಕ್ಕಿತ್ತು. ಆ 18 ನಿಮಿಷಗಳ ಕಾಲ ಈ ಹಾಲಿವುಡ್ ಹನಿಯೊಂದಿಗೆ ಮಧುರ ಕ್ಷಣಗಳನ್ನು ಕಳೆಯುವ ಭಾಗ್ಯ ಅವರದಾಗಿತ್ತು. ಅವರು ಬೇರಾರೂ ಅಲ್ಲ, ಜೇನು ಹುಳುಗಳು.
ಅಷ್ಟಕ್ಕೂ ಇದು ಯಾವುದೇ ಸಿನಿಮಾ ಶೂಟಿಂಗ್ ಅಲ್ಲ. ಜೇನುಹುಳಗಳೊಂದಿಗೆ ಇದ್ದು, ವಿಡಿಯೋ ಮತ್ತು ಫೋಟೋಗಳನ್ನು ತೆಗೆಸಿಕೊಂಡಿದ್ದಾರೆ! ‘ವಿಶ್ವ ಜೇನುಹುಳಗಳ ದಿನ’ವಾದ ಮೇ 20 ರಂದು ಜೇನುಹುಳಗಳ ಸಂಖ್ಯೆಯನ್ನು ಹೆಚ್ಚಿಸಬೇಕೆಂಬ ಸಂದೇಶ ನೀಡಲು ಮಾಡಿದ ಫೋಟೋಶೂಟ್.
ಜೇನುಹುಳಗಳು ಭೂಮಿಯ ಪರಿಸರದಲ್ಲಿ ಪ್ರಮುಖ ಜೀವಿಗಳು. ಗಿಡಮರಗಳ ವಂಶವೃದ್ಧಿಯಲ್ಲಿ ಅವು ವಹಿಸುವ ಪಾತ್ರ ದೊಡ್ಡದು. ಆದರೆ, ಜೇನು ಕಂಡರೆ ಎಲ್ಲಿ ಕಚ್ಚಿಬಿಡುತ್ತದೋ ಎಂದು ಹೆದರುವುದು ಸಾಮಾನ್ಯವಾದ ಪ್ರತಿಕ್ರಿಯೆಯಾಗಿರುತ್ತದೆ. ಅಂತಹುದರಲ್ಲಿ ನೂರಾರು ಜೇನುಹುಳಗಳ ನಡುವೆ ಬಿಳಿಯ ಬಣ್ಣದ ಉಡುಗೆ ತೊಟ್ಟು ಪೋಸ್ ನೀಡಿದ್ದಾರೆ ಜೋಲಿ. ಅನೇಕ ಜೇನುಹುಳಗಳು ತಮ್ಮ ಮುಖ ಮತ್ತು ಮೈಮೇಲೆ ಹರಿದಾಡುತ್ತಿದ್ದರೂ ನಗುಮುಖದೊಂದಿಗೆ ನಿಂತಿರುವ ಅವರ ಸಾಹಸವನ್ನು ಮೆಚ್ಚಲೇಬೇಕು.
“ಜೇನುಹುಳಗಳು ಆಕರ್ಷಿತರಾಗಬೇಕು. ಆದರೆ ಗುಂಪುಗಟ್ಟಬಾರದು. ಅದಕ್ಕಾಗಿ ಫೆರೊಮೋನ್ ಎಂಬ ದ್ರವವನ್ನು ಆ್ಯಂಜಲೀನಾ ಅವರ ಬಟ್ಟೆ, ಮುಖ, ಮೈಗಳ ಮೇಲೆ ಹಚ್ಚಲಾಗಿತ್ತು. ಅವರನ್ನು ಬಿಟ್ಟು ಸೆಟ್‌ನಲ್ಲಿದ್ದವರೆಲ್ಲರೂ ಸಂರಕ್ಷಕ ಸೂಟ್‌ಗಳನ್ನು ತೊಟ್ಟಿದ್ದೆವು. ಸ್ಟುಡಿಯೋದಲ್ಲಿ ಸಾಧ್ಯವಾದಷ್ಟು ನಿಶ್ಯಬ್ದತೆ ಮತ್ತು ಕತ್ತಲು ಇರುವಹಾಗೆ ಮಾಡಿದ್ದೆವು” ಎಂದು ಛಾಯಾಗ್ರಾಹಕ ಮತ್ತು ಖುದ್ದು ಜೇನುಹುಳ ಸಾಗಣೆಕಾರರಾದ ಡ್ಯಾನ್ ವಿಂಟರ್ಸ್ ವಿವರಿಸಿದ್ದಾರೆ. ಅಂದಹಾಗೆ ಜೋಲಿ ಅವರೊಂದಿಗೆ ಚಿತ್ರದಲ್ಲಿ ಕಾಣಿಸಿಕೊಂಡಿರುವ ಜೇನುಹುಳಗಳು ಕೊನಾಡ್ ಬೌಫರ್ಡ್ ಎಂಬ ಮಾಸ್ಟರ್ ಬೀಕೀಪರ್‌ಗೆ ಸೇರಿದ್ದವು ಎನ್ನಲಾಗಿದೆ.
ಆ್ಯಂಜಲೀನಾ ಜೋಲೀ ಅವರು ಯುನೆಸ್ಕೊ ಮತ್ತು ಗುಯೆರ್ಲೈನ್‌ನೊಂದಿಗೆ “ವುಮೆನ್ ಫಾರ್ ಬೀಸ್” ಎಂಬ ಯೋಜನೆಯಡಿ ಸ್ವಯಂಸೇವಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಈ ಯೋಜನೆಯಡಿ 2,500 ಜೇನುಗೂಡುಗಳನ್ನು ಕಟ್ಟಿಸಿ, 2025 ರ ವೇಳೆಗೆ 125 ಮಿಲಿಯನ್ ಜೇನುಹುಳಗಳನ್ನು ರೀಸ್ಟಾಕ್ ಮಾಡಬೇಕೆಂಬ ಗುರಿ ಇದ್ದು, 50 ಮಹಿಳೆಯರಿಗೆ ಬೀಕೀಪರ್ ತರಬೇತಿ ನೀಡಿ ಬೆಂಬಲಿಸುವ ಉದ್ದೇಶ ಕೂಡ ಇದೆ. ಈ ಆಶಯಕ್ಕೆ ಪ್ರಚಾರ ನೀಡಲು ನ್ಯಾಷನಲ್ ಜಿಯಾಗ್ರಾಫಿಕ್‌ನ ಸಹಯೋಗದೊಂದಿಗೆ ಜೋಲಿ, ಜೇನುಹುಳಗಳಿಂದ ಆವೃತವಾದ ತಮ್ಮದೊಂದು ಪೋರ್ಟ್‌ರೈಟ್ ಮಾಡಬೇಕೆಂದು ತೀರ್ಮಾನಿಸಿದರು ಎನ್ನಲಾಗಿದೆ.
ಹಾಗೆಯೇ ಎಷ್ಟೋ ಜನರಿಗೆ ಸಿಗದ ಅವಕಾಶ ಜೇನು ಹುಳುಗಳಿಗೆ ದೊರಕಿದ್ದು ಹಲವರಿಗೆ ಹೊಟ್ಟೆ ಕಿಚ್ಚು ತರಿಸಿರಲೂ ಬಹುದು. ಏನೇ ಆಗಲಿ ಈ ರೀತಿಯ ಫೋಟೋಶೂಟ್ ನಡೆಸಿ ನಟಿಯು ಜೇನುಹುಳುಗಳ ವಂಶಾಭಿವೃದ್ಧಿಗೆ ದೊಡ್ಡ ಬೆಂಬಲವನ್ನೇ ನೀಡಿದ್ದಾರೆ. ಈ ಮೂಲಕ ತಾನೂ ಕೂಡ ನಿಜವಾದ ಪರಿಸರ ಪ್ರೇಮಿ ಎಂದು ಸಾಬೀತುಪಡಿಸಿದ್ದಾರೆ.