ಬೆಳಗ್ಗೆ 7 ರಿಂದ ಪಡಿತರ ವಿತರಣೆ, ತಂಬ್ ಗೆ ಒತ್ತಾಯಿಸುವಂತಿಲ್ಲ | ದ.ಕ. ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ.
ದ.ಕ.ಜಿಲ್ಲೆಯ ನ್ಯಾಯಬೆಲೆ ಅಂಗಡಿದಾರರು ಬೆಳಗ್ಗೆ ಏಳು ಗಂಟೆಗೆ ಪಡಿತರ ವಿತರಣೆ ಮಾಡಬೇಕು ಎಂದು ದ.ಕ. ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ಸೂಚಿಸಿದ್ದಾರೆ.
ಪಡಿತರ ಚೀಟಿದಾರರು ಅಧಿಕ ಸಂಖ್ಯೆಯಲ್ಲಿ ಬಂದರೆ ಆದ್ಯತೆಯ ಮೇರೆಗೆ ಸಾಲಿನಲ್ಲಿ ನಿಲ್ಲಲು ಟೋಕನ್ ಗಳನ್ನು ನೀಡಿ ಪಡಿತರ ವಿತರಿಸುವುದು. 10 ಗಂಟೆಯ ನಂತರವೂ ಕ್ಯೂನಲ್ಲಿದ್ದ ಪಡಿತರ ಚೀಟಿದಾರರನ್ನು ಹಿಂದಕ್ಕೆ ಕಳುಹಿಸದೆ ಕಡ್ಡಾಯವಾಗಿ ಪಡಿತರ ವಿತರಿಸಬೇಕು ಎಂದು ತಿಳಿಸಿದ್ದಾರೆ.
ಪಡಿತರ ವಿತರಣೆಯ ಸಂದರ್ಭ ಸುರಕ್ಷಿತ ಅಂತರ ಕಾಯ್ದುಕೊಳ್ಳಬೇಕು. ಸಾನಿಟೈಸರ್ ಹಾಗೂ ನೀರಿನ ವ್ಯವಸ್ಥೆಯನ್ನು ಮಾಡಿಕೊಳ್ಳಬೇಕು. ಆಧಾರ್ ಒಟಿಪಿ ಸೌಲಭ್ಯವನ್ನು ಒದಗಿಸಿರುವುದರಿಂದ ಯಾವುದೇ ಗೊಂದಲಕ್ಕೆ ಒಳಗಾಗದೆ ಪಡಿತರ ವಿತರಿಸಬೇಕು ಮತ್ತು ಪಡಿತರ ಚೀಟಿದಾರರನ್ನು ಬಯೋ ಮೆಟ್ರಿಕ್ ಕೊಡಲು ಒತ್ತಾಯಿಸಬಾರದು ಎಂದು ಡಿಸಿ ಸೂಚಿಸಿದ್ದಾರೆ.
ಪಡಿತರ ಚೀಟಿಗಳಿಗೆ ನಿಗದಿಪಡಿಸಲಾದ ಪ್ರಮಾಣದಲ್ಲಿ ಪಡಿತರ ವಿತರಿಸಬೇಕು. ಯಾವುದೇ ಕಾರಣಕ್ಕೂ ಕಡಿಮೆ ಪ್ರಮಾಣದಲ್ಲಿ ಪಡಿತರ ವಿತರಿಸಬಾರದು.
ಜಿಲ್ಲೆಯಲ್ಲಿ ವಿತರಿಸುವ ಪಡಿತರದಲ್ಲಿ ಬೆಳ್ತಿಗೆ ಹಾಗೂ ಕುಚ್ಚಿಲಕ್ಕಿಯನ್ನು ಸಮ ಪ್ರಮಾಣದಲ್ಲಿ ವಿತರಿಸಬೇಕು. ಯಾವುದೇ ಕಾರಣಕ್ಕೂ ಕಾನೂನು ಬಾಹಿರವಾಗಿ ಹಣ ಪಡೆಯಬಾರದು ಎಂದು ತಿಳಿಸಿದ್ದಾರೆ.
ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರ ವಿತರಣೆಗೆ ಜನ ದಟ್ಟಣೆಯಾಗದಂತೆ ಹಾಗೂ ಸುವ್ಯವಸ್ಥೆ ಕಾಪಾಡಲು ಈಗಾಗಲೇ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಿದೆ.
ಹೊರ ಜಿಲ್ಲೆಯ ಪಡಿತರ ಚೀಟಿದಾರರು ದಾಸ್ತಾನು ಇರುವ ಸಮೀಪದ ನ್ಯಾಯಬೆಲೆ ಅಂಗಡಿಗಳಿಂದ ಪಡಿತರ ಪಡೆಯಬಹುದು ಎಂದು ತಿಳಿಸಿದ್ದಾರೆ.