ಚಾಮರಾಜನಗರ ಜಿಲ್ಲಾಧಿಕಾರಿ ಡಾ.ಎಂ.ಆರ್. ರವಿ ಅವರನ್ನು ಬುಧವಾರ ರಾತ್ರಿ ವರ್ಗಾವಣೆ ಮಾಡಲಾಗಿದ್ದು, ಆದರೆ ಗುರುವಾರ ಬೆಳಗ್ಗೆ ರವಿ ಅವರ ವರ್ಗಾವಣೆ ಆದೇಶ ರದ್ದಾಗಿದೆ. ಮೂರು ತಿಂಗಳ ಅಂತರದಲ್ಲಿ ಎರಡು ಬಾರಿ ವರ್ಗಾವಣೆ ಆಗಿದ್ದರೂ ಕೂಡಾ ಎರಡು ಬಾರಿಯೂ ಅವರ ವರ್ಗಾವಣೆ ಆದೇಶ ರದ್ದು ಮಾಡಲಾಗಿದೆ.
ಚಾಮರಾಜನಗರ ಕೋವಿಡ್ ಆಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆಯಿಂದ 37 ಮಂದಿ ಸೋಂಕಿತರು ಸಾವನ್ನಪ್ಪಿದ ಪ್ರಕರಣದಲ್ಲಿ ಜಿಲ್ಲಾಧಿಕಾರಿಗಳ ಕರ್ತವ್ಯ ಲೋಪವನ್ನು ನ್ಯಾಯಾದೀಶರ ಸತ್ಯಶೋಧನಾ ಸಮಿತಿಯ ವರದಿಯಲ್ಲಿ ಉಲ್ಲೇಖಿಸಲಾಗಿದ್ದು, ಬಳಿಕ ಹೈಕೋರ್ಟ್ ಸೂಚನೆಯಂತೆ ರಾಜ್ಯ ಸರ್ಕಾರವು ಜಿಲ್ಲಾಧಿಕಾರಿ ಡಾ.ಎಂ.ಆರ್. ರವಿ ರವರನ್ನು ಬುಧವಾರ ರಾತ್ರಿ ವರ್ಗಾವಣೆ ಮಾಡಿತ್ತು. ಆದರೆ ವರ್ಗಾವಣೆ ಆದೇಶಕ್ಕೆ ಮತ್ತೆ ತಡೆ ನೀಡಿದ್ದು ಚರ್ಚೆಗೆ ಗ್ರಾಸವಾಗಿದೆ.
ಹೈಕೋರ್ಟ್ ಸೂಚನೆಯಂತೆ ರಾಜ್ಯ ಸರ್ಕಾರವು ಬುಧವಾರ ಚಾಮರಾಜನಗರ ಜಿಲ್ಲಾಧಿಕಾರಿಯಾಗಿ ಜಲಾನಯನ ಇಲಾಖೆಯಲ್ಲಿದ್ದ ಡಾ. ಬಿ.ಸಿ. ಸತೀಶ್ ರವರನ್ನು ನಿಯೋಜನೆ ಮಾಡಿ ಆದೇಶ ಹೊರಡಿಸಿತ್ತು. ವರ್ಗಾವಣೆಯ ಮಾಹಿತಿ ಪಡೆದರೂ ಜಿಲ್ಲಾಧಿಕಾರಿ ಡಾ.ಎಂ.ಆರ್. ರವಿ ಜಿಲ್ಲೆಯಲ್ಲೇ ಉಳಿದುಕೊಂಡಿದ್ದರು.
ಕೋವಿಡ್ ಆಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆಯಿಂದ 37 ಮಂದಿ ಸಾವನ್ನಪ್ಪಿದ ಬಳಿಕ ಜಿಲ್ಲಾಡಳಿತದ ಕಾರ್ಯವೈಖರಿ ವ್ಯಾಪಕ ಟೀಕೆಗೆ ಗುರಿಯಾಗಿತ್ತು. ಜಿಲ್ಲಾಧಿಕಾರಿ ರವಿ ಅವರ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಗಳ ಕರ್ತವ್ಯ ಲೋಪವನ್ನು ನ್ಯಾಯಾಧೀಶರ ಸತ್ಯಶೋಧನಾ ಸಮಿತಿಯ ವರದಿಯಲ್ಲಿ ಉಲ್ಲೇಖಿಸಲಾಗಿತ್ತು. ಹೀಗಾಗಿ ಡಾ.ರವಿ ಅವರನ್ನು ವರ್ಗಾವಣೆ ಮಾಡಬೇಕು ಎಂಬ ಆಗ್ರಹ ಕೇಳಿಬಂದಿತ್ತು. ಆದರೆ ಬುಧವಾರ ರಾತ್ರಿ ವರ್ಗಾವಣೆ ಆದೇಶ ಹೊರಡಿಸಿ, ಗುರುವಾರ ಬೆಳಗ್ಗೆ ಆದೇಶವನ್ನು ರದ್ದು ಮಾಡಲಾಗಿದೆ.
37 ಮಂದಿ ಸಾವನ್ನಪ್ಪಿದ ಘಟನೆಯಲ್ಲಿ ಸರಕಾರ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಮೇಲೆ ಶಿಸ್ತು ಕ್ರಮ ಕೈಗೊಳ್ಳಲಿದೆ ಎಂಬ ಹಲವರು ನಿರೀಕ್ಷಿಸಿದ್ದರು. ಆದರೆ ಪ್ರಭಾವಿಗಳ ಒತ್ತಡದಿಂದ ವರ್ಗಾವಣೆ ಆದೇಶಕ್ಕೆ ತಡೆ ಹಿಡಿಯಲಾಗಿದ್ದು ಚರ್ಚೆಗೆ ಗ್ರಾಸವಾಗಿದೆ.
ಚಾಮರಾಜನಗರ ಜಿಲ್ಲಾಧಿಕಾರಿಯಾಗಿ ನನಗೆ ವರ್ಗಾವಣೆ ಆಗಿಲ್ಲ ಎಂದು ಐಎಎಸ್ ಅಧಿಕಾರಿ ಡಾ.ಬಿ.ಸಿ.ಸತೀಶ್ ತಿಳಿಸಿದ್ದಾರೆ.