ವಾಟ್ಸ್ ಆ್ಯಪ್ ಗೆ 7 ದಿನಗಳ ಗಡುವು ಕೊಟ್ಟ ಕೇಂದ್ರ | ಗೌಪ್ಯತಾ ನೀತಿ ಯಲ್ಲಿ ಬದಲಾವಣೆ ಮಾಡದಿದ್ದಲ್ಲಿ ಬಂದ್ ಆಗುತ್ತಾ ವಾಟ್ಸಾಪ್ ?!
ಈ ಡಿಜಿಟಲ್ ಯುಗದಲ್ಲಿ ವಾಟ್ಸ್ಆ್ಯಪ್ ಇಲ್ಲದೆ ದಿನ ಕಳೆಯಲು ಸಾಧ್ಯವಿಲ್ಲ. ಎಲ್ಲರ ಮನೆಯಲ್ಲೂ ವಾಟ್ಸ್ ಆ್ಯಪ್ ಬಳಕೆ ಇದ್ದೇ ಇದೆ. ಆದರೆ ಇದೀಗ ವಾಟ್ಸ್ಆ್ಯಪ್ ಅನ್ನು ಬಳಸದೆ ಇರುವಂತಹ ಸ್ಥಿತಿ ನಿರ್ಮಾಣವಾಗುತ್ತಿದೆ. ಹೌದು ವಾಟ್ಸ್ಆ್ಯಪ್ ನಿಂದ ಹೊಸ ಗೌಪ್ಯತಾ ನೀತಿ ಹೊರಬಿದ್ದಿದೆ.
ವಾಟ್ಸ್‌ಆ್ಯಪ್ ಬಳಕೆ ಮಾಡುವುದಿದ್ದರೆ ಕಡ್ಡಾಯವಾಗಿ ಹೊಸ ಗೋಪ್ಯತಾ ನೀತಿಗೆ ಒಪ್ಪಿಕೊಳ್ಳಲೇಬೇಕು. ಇಲ್ಲದಿದ್ದರೆ ಹಂತಹಂತವಾಗಿ ವಾಟ್ಸ್‌ಆ್ಯಪ್ ಸೇವೆ ಕಳೆದುಹೋಗಲಿದೆ. ಇದಾಗಲೇ ಇದರ ಡೆಡ್‌ಲೈನ್ ಕೂಡ ಮುಗಿದಿದ್ದು, ಓಕೆ ಅನ್ನದವರು ಕ್ರಮೇಣ ಮೆಸೇಜ್, ವಿಡಿಯೋ ಸೌಲಭ್ಯವನ್ನು ಕಳೆದುಕೊಳ್ಳಲಿದ್ದಾರೆ.
ಈ ಕುರಿತು ಇದೀಗ ಕೇಂದ್ರದ ಮಾಹಿತಿ ತಂತ್ರಜ್ಞಾನ ಸಚಿವಾಲಯ ಆಕ್ರೋಶ ವ್ಯಕ್ತಪಡಿಸಿದ್ದು, ವಾಟ್ಸ್ ಆ್ಯಪ್ ಸಂಸ್ಥೆಗೆ ನೋಟಿಸ್ ಜಾರಿ ಮಾಡಿದೆ. ಈ ಹೊಸ ಗೌಪ್ಯತಾ ನೀತಿಯನ್ನು ಹಿಂದಕ್ಕೆ ಪಡೆದುಕೊಳ್ಳುವಂತೆ ಅದು ಸೂಚಿಸಿದೆ. ಹಾಗೆಯೇ ಈ ನೋಟಿಸ್‌ಗೆ ಪ್ರತಿಕ್ರಿಯಿಸಲು ಏಳು ದಿನಗಳ ಕಾಲಾವಕಾಶ ನೀಡಿದೆ.ಭಾರತೀಯ ಬಳಕೆದಾರರ ಮೇಲೆ ಅನ್ಯಾಯದ ನಿಯಮಗಳು ಮತ್ತು ಷರತ್ತುಗಳನ್ನ ಹೇರಲು ವಾಟ್ಸ್ ಆ್ಯಪ್ ಮುಂದಾಗಿರುವುದು ಅತ್ಯಂತ ಖೇದಕರ ಸಂಗತಿ ಎಂದು ಸಚಿವಾಲಯ ನೋಟಿಸ್‌ನಲ್ಲಿ ಹೇಳಿದೆ.
ಕೆಲ ತಿಂಗಳ ಹಿಂದಷ್ಟೇ ವಾಟ್ಸ್ ಆ್ಯಪ್ ಕೆಲವೊಂದು ಷರತ್ತುಗಳನ್ನು ವಿಧಿಸಿತ್ತು. ಇದನ್ನು ಅಕ್ಸೆಪ್ಟ್ ಮಾಡಿದರಷ್ಟೇ ಬಳಕೆ ಮಾಡಲು ಸಾಧ್ಯ ಎಂದಿತ್ತು. ಆದರೆ ಕೆಲವೊಂದು ಕಾರಣಗಳಿಂದ ಈ ಷರತ್ತು ವಿಧಿಸುವ ಪ್ರಕ್ರಿಯೆಯನ್ನು ಮುಂದೂಡಿತ್ತು. ಆದರೆ ಇದೀಗ ಮತ್ತೆ ಷರತ್ತುಗಳನ್ನು ಅನ್ವಯವಾಗುತ್ತದೆ ಎಂದು ಹೇಳಿದೆ. ವಾಟ್ಸ್ ಆ್ಯಪ್ ಬೇಕೆಂದರೆ ನೂತನ ನೀತಿಯನ್ನು ಒಪ್ಪಿಕೊಳ್ಳಲೇಬೇಕಿದೆ.
ಒಂದು ವೇಳೆ ನೀವು ಒಪ್ಪದೇ ಅದರ ಬಳಕೆ ಮುಂದುವರಿಸಿದರೆ ಒಮ್ಮೆಲೇ ಖಾತೆ ಡಿಲೀಟ್ ಆಗುವುದಿಲ್ಲ. ಆದರೆ ಆರಂಭದಲ್ಲಿ ಧ್ವನಿ ಸಂದೇಶ ಹಾಗೂ ವಿಡಿಯೋ ಕಾಲ್‌ಗಳನ್ನು ಮಾಡಲು ಅವಕಾಶ ಮುಂದುವರೆಯುತ್ತದೆ. ಆದರೆ ಮೆಸೇಜ್ ನೋಡಲು ಸಾಧ್ಯವಾಗುವುದಿಲ್ಲ. ಬದಲಾಗಿ ನೋಟಿಫಿಕೇಶನ್‌ಗಳ ಮೂಲಕ ಮಾತ್ರ ಸಂದೇಶಗಳು ಕಾಣಿಸಲಿವೆ. ನೋಟಿಫಿಕೇಶನ್‌ನಲ್ಲಿರುವ ಮಿಸ್ ಕಾಲ್ ಅಥವಾ ವಿಡಿಯೋ ಕಾಲ್‌ಗಳಿಗೆ ಪ್ರತಿಕ್ರಿಯೆ ನೀಡಬಹುದಾಗಿದೆ. ಆದರೆ, ನೇರವಾಗಿ ಚಾಟ್ ಲೀಸ್ಟ್ ಬಳಸಲು ಸಾಧ್ಯವಾಗುವುದಿಲ್ಲ. ನಂತರ ಸಂದೇಶ ಕಳುಹಿಸುವ ಸೇವೆಯೂ ರದ್ದಾಗುತ್ತದೆ. ನಂತರ ಕಾಲ್ ಕೂಡ ಸಾಧ್ಯವಾಗುವುದಿಲ್ಲ.
ಒಂದು ವೇಳೆ ಈಗಾಗಲೇ ನೂತನ ನೀತಿಯನ್ನು ಒಪ್ಪಿದ್ದರೆ, ಗ್ರಾಹಕರಿಗೆ ನೂತನ ನೀತಿಯಿಂದ ಯಾವುದೇ ಪರಿಣಾಮ ಆಗುವುದಿಲ್ಲ. ಒಂದು ವೇಳೆ ನಿಮಗೆ ಹೊಸ ನೀತಿ ಅಕ್ಸೆಪ್ಟ್ ಮಾಡಿ ಎಂದು ಪಾಪ್ ಅಪ್ ಮೆಸೇಜ್ ಬರಲಿಲ್ಲ ಎಂದಾದರೆ ನೀವು ಅದನ್ನು ಈಗಲೇ ಒಪ್ಪಿಕೊಂಡಿರುವಿರಿ ಎಂದು ಅರ್ಥ ಎಂದಿದೆ ವಾಟ್ಸ್‌ಆ್ಯಪ್.
ಇನ್ನು ಏಳು ದಿನಗಳಲ್ಲಿ ಕೇಂದ್ರ ಸಚಿವಾಲಯ ಕಳುಹಿಸಿದ ನೋಟಿಸ್ಗೆ ವಾಟ್ಸ್ಆ್ಯಪ್ ನಿಂದ ಯಾವ ರೀತಿಯ ಉತ್ತರ ಬರಬಹುದೆಂಬುದರ ಮೇಲೆ ಕೇಂದ್ರ ಸರ್ಕಾರದ ಹೆಜ್ಜೆ ನಿರ್ಧಾರವಾಗಲಿದೆ.