ಲಾಕ್ ಡೌನ್ ಲಾಠಿ ಚಾರ್ಜ್ | ಪೊಲೀಸರ ಮೇಲೆ ಕ್ರಮಕೈಗೊಳ್ಳುವಂತೆ ಸಲ್ಲಿಸಿದ್ದ ಅರ್ಜಿಯನ್ನು ತಳ್ಳಿ ಹಾಕಿ ಅರ್ಜಿದಾರರಿಗೆ ದಂಡ ವಿಧಿಸಿದ ಹೈಕೋರ್ಟ್
ಬೆಂಗಳೂರು : ಲಾಕ್ ಡೌನ್ ಜಾರಿ ಸಂದರ್ಭದಲ್ಲಿ ಜನರ ಮೇಲೆ ಖಾಕಿ ಪಡೆ ಮನಬಂದಂತೆ ಲಾಠಿ ಬೀಸಿದೆ ಎಂಬ ಆರೋಪ ಕೇಳಿಬಂದಿತ್ತು. ಪೊಲೀಸರ ಈ ವರ್ತನೆ ತುಂಬಾ ಅಮಾನವೀಯ ಎಂದು ಓರ್ವ ಅರ್ಜಿದಾರರು ಹೈಕೋರ್ಟ್ ಮೊರೆ ಹೋಗಿದ್ದರು. ಇದೀಗ ಹೈಕೋರ್ಟ್ ಅರ್ಜಿದಾರರ ವಿರುದ್ಧ ಗರಂ ಆಗಿದ್ದು, ಅವರಿಗೆ ದಂಡ ವಿಧಿಸಿದೆ.
ಲಾಕ್ ಡೌನ್ ಸಂದರ್ಭದಲ್ಲಿ ಹೊರಗಡೆ ಓಡಾಡಿದ್ದ ಜನರ ಮೇಲೆ ಅಮಾನವೀಯವಾಗಿ ಲಾಠಿ ಬೀಸಿದ ಪೊಲೀಸರ ವಿರುದ್ಧ ಎಫ್ಆಮ್ಆರ್ ದಾಖಲಿಸಬೇಕೆಂದು ಕಾರ್ಮಿಕರ ಪರ ನ್ಯಾಯವಾದಿ ಬಾಲಕೃಷ್ಣನ್ ಅರ್ಜಿ ಸಲ್ಲಿಸಿದ್ದರು.
ಬಾಲಕೃಷ್ಣನ್ ಅವರ ಅರ್ಜಿ ವಿಚಾರಣೆ ನಡೆಸಿದ್ದ ಹೈಕೋರ್ಟ್ ನ ನ್ಯಾಯಮೂರ್ತಿ ಸತೀಶ್ ಚಂದ್ರ ಶರ್ಮಾ ಹಾಗೂ ಎಂ.ನಾಗಪ್ರಸನ್ನ ಅವರ ನ್ಯಾಯಪೀಠ ಕೋವಿಡ್ ನಿರ್ವಹಣೆ ವೇಳೆ ಎಷ್ಟು ಪೊಲೀಸರು ಸತ್ತಿದ್ದಾರೆ ನಿಮಗೆ ತಿಳಿದಿದೆಯೇ ಎಂದು ಅರ್ಜಿದಾರರನ್ನು ಪ್ರಶ್ನಿಸಿದೆ. ಅಲ್ಲದೆ, ಪೊಲೀಸರು ಬಾಯಿ ಮಾತಿನಲ್ಲಿ ಹೇಳಿದರೇ ಜನ ಅರ್ಥ ಮಾಡಿಕೊಳ್ಳುತ್ತಾರಾ? ನಮ್ಮ ಜನರು ಅಷ್ಟು ನಾಗರೀಕರಾಗಿದ್ದಾರಾ ಎಂದು ಅರ್ಜಿದಾರರಿಗೆ ಹೈಕೋರ್ಟ್ ಪೀಠ ಪ್ರಶ್ನಿಸಿದೆ. ಕೆಲ ಪೊಲೀಸರು ತಾಳ್ಮೆಮೀರಿ ವರ್ತಿಸಿರಬಹುದು. ಆದರೆ ಈ ಕಾರಣಕ್ಕಾಗಿ ಎಲ್ಲರ ವಿರುದ್ಧ ಪ್ರಕರಣ ದಾಖಲಿಸಲು ಸಾಧ್ಯವಿಲ್ಲ ಎಂದಿದೆ ಘನ ನ್ಯಾಯಾಲಯ.
ಈ ಪ್ರಕರಣದ ವಿಚಾರಣೆ ಸಾಧ್ಯವಿಲ್ಲವೆಂದು ಅಭಿಪ್ರಾಯಿಸಿದ ನ್ಯಾಯಾಲಯ ಅರ್ಜಿ ವಜಾಗೊಳಿಸಿದ್ದಲ್ಲದೇ, ಅರ್ಜಿದಾರರಿಗೆ 1 ಸಾವಿರ ರೂಪಾಯಿ ದಂಡ ವಿಧಿಸಿದೆ.
Good verdict??