ವಿಶ್ವ ಸುಂದರಿ ಸ್ಪರ್ಧೆಯಲ್ಲಿ ಮೂರನೇ ರನ್ನರ್ ಅಪ್ ಆಗಿ ಮೂಡಿಬಂದ ಕರಾವಳಿಯ ಬೆಡಗಿ
ವಿಶ್ವ ಸುಂದರಿ ಪಟ್ಟ ಮುಡಿಗೇರೀಸಿಕೊಳ್ಳುವುದು ಹಲವಾರು ಯುವತಿಯರ ಕನಸು. ಅದನ್ನು ನನಸು ಮಾಡಿಕೊಳ್ಳಲು ಹಗಲು-ರಾತ್ರಿ ತುಂಬಾ ಕಷ್ಟ ಪಡುತ್ತಿರುತ್ತಾರೆ. ಹಾಗೆಯೇ ಕಳೆದ ವರ್ಷ ಅಂದರೆ 2021 ರ ವಿಶ್ವ ಸುಂದರಿ ಫಲಿತಾಂಶ ಹೊರಬಿದ್ದಿದೆ.
ವಿಶ್ವದ ಬೇರೆ ಬೇರೆ ದೇಶಗಳಿಂದ ಬಂದಿದ್ದ 73 ಸ್ಪರ್ಧಿಗಳ ಜೊತೆ ಸ್ಪರ್ಧಿಸಿ ಆಂಡ್ರಿಯಾ ಕಿರೀಟ ತನ್ನ ಮುಡಿಗೇರಿಸಿಕೊಂಡಿದ್ದಾರೆ.
ಟಾಪ್ 5 ಸ್ಥಾನದಲ್ಲಿ ಭಾರತದ ಸ್ಪರ್ಧಿ ಆಡ್ಲೈನ್ ಕ್ಯಾಸ್ಟೆಲಿನೊ ಜಾಗ ಪಡೆದಿದ್ದಾರೆ. ಮೊದಲ ರನ್ನರ್ ಅಪ್ ಆಗಿ ಜೂಲಿಯಾ ಗಾಮಾ ಮತ್ತು 2ನೇ ರನ್ನರ್ ಆಗಿ ಪೆರುವಿನ ಜೆನಿಕ್ ಮಸೆಟಾ ಸ್ಥಾನ ಪಡೆದಿದ್ದಾರೆ.
ಪ್ರತಿಷ್ಠಿತ ಸೌಂದರ್ಯ ಸ್ಪರ್ಧೆಯಲ್ಲಿ 4ನೇ ಸ್ಥಾನ ಪಡೆದ ಭಾರತದ ಸ್ಪರ್ಧಿ ಆಡ್ಲೈನ್ ಕ್ಯಾಸ್ಟೆಲಿನೊ ಕರ್ನಾಟಕದ ಕರಾವಳಿ ಮೂಲದವರು ಎನ್ನುವುದೇ ಕನ್ನಡಿಗರಿಗೆ ಹೆಮ್ಮೆ. 3ನೇ ರನ್ನರ್ ಅಪ್ ಆಗಿರುವ ಆಡ್ಲೈನ್‌ಗೆ ಪ್ರಶಂಸೆಗಳ ಸುರಿಮಳೆಯೇ ಹರಿದುಬರುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಆಡ್ಲೈನ್ ಫೋಟೋ ಶೇರ್ ಮಾಡಿ ಅಭಿನಂದನೆ ಸಲ್ಲಿಸುತ್ತಿದ್ದಾರೆ.
1998ರಲ್ಲಿ ಆಡ್ಲೈನ್ ಕರ್ನಾಟಕದ ಉಡುಪಿ ಮೂಲದ ಕ್ಯಾಥೋಲಿಕ್ ಪೋಷಕರಿಗೆ ಜನಿಸಿದರು. ಕುವೈತ್ ನಲ್ಲಿ ಬೆಳೆದ ಆಡ್ಲೈನ್ ಪ್ರಾಥಮಿಕ ವಿದ್ಯಾಭ್ಯಾಸವನ್ನು ಕುವೈತ್‌ನಲ್ಲೇ ಮುಗಿಸಿ ಬಳಿಕ 15ನೇ ವಯಸ್ಸಿಗೆ ಮುಂಬೈ ಬಂದ ಆಕೆ ಮುಂದಿನ ವಿದ್ಯಾಭ್ಯಾಸವನ್ನು ಮುಂಬೈನಲ್ಲಿ ಮುಗಿಸಿದರು. ವಿಲ್ಸನ್ ಕಾಲೇಜ್ ಆಫ್ ಬಿಸಿನೆಸ್ ಅಡ್ಮಿನಿಸ್ಟ್ರೇಶನ್‌ನಿಂದ ಪದವಿ ಪಡೆದರು.
ಸಾಮಾಜಿಕ ಕೆಲಸಗಳಲ್ಲೂ ತೊಡಗಿಸಿಕೊಂಡಿರುವ ಆಡ್ಲೈನ್ ಕ್ಯಾಸ್ಟೆಲಿನೊ ವಿಕಾಸ್ ಸಹಯೋಗ್ ಪ್ರತಿಷ್ಠಾನ್ ಎಂಬ ಕಲ್ಯಾಣ ಸಂಸ್ಥೆಯಲ್ಲಿ ಕೆಲಸ ಮಾಡಿದ್ದಾರೆ. ರೈತರ ಯೋಗಕ್ಷೇಮ ಮತ್ತು ಆತ್ಮಹತ್ಯೆ ನಿಗ್ರಹಿಸುವಲ್ಲಿ ತನ್ನ ಪ್ರಯತ್ನ ಮಾಡಿದ್ದಾರೆ. ಡ್ಯಾನ್ಸ್ ಇಷ್ಟ ಪಡುವ ಈಕೆ ನೃತ್ಯ ನಿರ್ದೇಶಕಿಯಾಗಿಯೂ ಕೆಲಸ ಮಾಡಿದ್ದಾರೆ.
2020ರಲ್ಲಿ ಲಿವಾ ಮಿಸ್ ದಿವಾ ಯೂನಿವರ್ಸ್ ಕಿರೀಟ ಕೂಡ ಗೆದ್ದಿದ್ದರು. ಈ ಸಮಯದಲ್ಲಿ ಹುಟ್ಟೂರು ಉಡುಪಿಗೆ ಆಗಮಿಸಿದ್ದ ಆಡ್ಲೈನ್ ಅವರಿಗೆ ಅದ್ಧೂರಿ ಸ್ವಾಗತ ಮಾಡಲಾಗಿತ್ತು. ಮೆರವಣಿಗೆ ಮೂಲಕ ಹುಟ್ಟೂರಿಗೆ ಬರಮಾಡಿಕೊಳ್ಳಲಾಗಿತ್ತು.
ಸದ್ಯ ಮಿಸ್ ಯೂನಿವರ್ಸ್ ಸ್ಪರ್ಧೆಯಲ್ಲಿ ಭಾಗಿಯಾಗಿ 4ನೇ ಸ್ಥಾನ ಪಡೆದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿರುವ ಆಡ್ಲೈನ್ ತನ್ನ ಹುಟ್ಟೂರಿಗೆ ಯಾವಾಗ ಆಗಮಿಸಲಿದ್ದಾರೆ? ಈ ಬಾರಿ ಹೇಗೆ ಸ್ವಾಗತ ಮಾಡಲಿದೆ ಊರು? ಎನ್ನುವುದು ಕುತೂಹಲ ಮೂಡಿಸಿದೆ. ಆಡ್ಲೈನ್ ಸಾಧನೆಗೆ ಹುಟ್ಟೂರು ಉಡುಪಿಯಲ್ಲೂ ಸಂತಸ ಮನೆ ಮಾಡಿದೆ.ಕನ್ನಡತಿ ವಿಶ್ವ ಮಟ್ಟದಲ್ಲಿ ಇಂತಹ ಸಾಧನೆ ಮಾಡಿದ್ದು ನಮ್ಮೆಲ್ಲರಿಗೂ ಹೆಮ್ಮೆಯ ಸಂಗತಿ.