ಕೊರೊನಾ ಮುಕ್ತ ಗ್ರಾಮಕ್ಕೆ ಅಭಿನಂದನಾ ಪತ್ರ, ನಗದು ಬಹುಮಾನ
ಕೊರೊನಾ ಸೋಂಕು ನಿಯಂತ್ರಣಕ್ಕೆ ಮೈಸೂರು ಜಿಲ್ಲಾಡಳಿತ ವಿನೂತನ ಯೋಜನೆಯೊಂದನ್ನು ಮಾಡಿದೆ.
ಕೊರೊನಾ ಮುಕ್ತ ಗ್ರಾಮಗಳಿಗೆ ಅಭಿನಂದನಾ ಪತ್ರದ ಜತೆಗೆ ನಗದು ಬಹುಮಾನ ಕೊಟ್ಟು ಅಭಿನಂದಿಸುವುದಾಗಿ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಘೋಷಿಸಿದ್ದಾರೆ.
ಆ ಮೂಲಕ ಗ್ರಾಮ ಪಂಚಾಯತ್ಗಳ ನಡುವೆ ಸೋಂಕು ನಿಯಂತ್ರಣಾ ಸ್ಪರ್ಧೆಯನ್ನ ಪರೋಕ್ಷವಾಗಿ ಹುಟ್ಟು ಹಾಕಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರೊಂದಿಗಿನ ವಿಡಿಯೋ ಕಾನ್ಫರೆನ್ಸ್ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ರೋಹಿಣಿ ಸಿಂಧೂರಿ, ಗ್ರಾಪಂ ವ್ಯಾಪ್ತಿಯಲ್ಲಿ ಕೋವಿಡ್ ಮುಕ್ತ ಮಾಡಿದರೆ ಅವರಿಗೆ ಪ್ರಶಸ್ತಿ ಕೊಡಲಾಗುವುದು.
ಜಿಲ್ಲೆಯಲ್ಲಿ ವಿಶೇಷ ಕಾರ್ಯಕ್ರಮ ಮಾಡಿದರೆ ಮಾಹಿತಿ ನೀಡುವಂತೆ ಪ್ರಧಾನಿ ಕೇಳಿದ್ದಾರೆ. ನಾವು ಶುರು ಮಾಡಿರುವ ಕೋವಿಡ್ ಮಿತ್ರ ಪರಿಕಲ್ಪನೆಯನ್ನು ಮೈಸೂರಿನಿಂದ ಕಳುಹಿಸುತ್ತೇವೆ.
ಜಿಲ್ಲೆಯ 175 ಪ್ರಾಥಮಿಕ ಕೇಂದ್ರಗಳು ಕೋವಿಡ್ ಮಿತ್ರ ಆಗಿದೆ. ಸೋಂಕಿನ ಲಕ್ಷಣ ಇದ್ದವರು ಅಲ್ಲಿ ಹೋಗಿ ಪರೀಕ್ಷೆ ಮಾಡಿಸಿಕೊಳ್ಳುತ್ತಿದ್ದಾರೆ. ಸೋಂಕಿತರಿಗೆ ಮೊದಲ 5 ದಿನ ಮುಖ್ಯವಾದದ್ದು. ತಕ್ಷಣ ಅಗತ್ಯ ಮೆಡಿಸಿನ್ ಕೊಡುವ ಕೆಲಸವಾಗುತ್ತಿದೆ.
ಇದರಿಂದ ನಗರದ ಆಸ್ಪತ್ರೆಗಳ ಅವಲಂಬನೆ ಕಡಿಮೆಯಾಗಿದೆ. ಇದೇ ರೀತಿ ನಗರದಲ್ಲೂ ಕೋವಿಡ್ ಮಿತ್ರ ಸೆಂಟರ್ ತೆರೆಯುತ್ತಿದ್ದೇವೆ ಎಂದರು.
ಜಿಲ್ಲೆಯಲ್ಲಿ ಟೆಲಿ ಮೆಡಿಸಿನ್ ಚೆನ್ನಾಗಿ ಕೆಲಸ ಆಗುತ್ತಿದೆ. ಯುಕೆ ಯಲ್ಲಿರುವ ಮೈಸೂರಿನ ವೈದ್ಯರು ಭಾಗಿಯಾಗುತ್ತಿದ್ದಾರೆ. ನುರಿತ ವೈದ್ಯರಿಂದ ಜನರಿಗೆ ಟೆಲಿ ಟ್ರೀಟ್ಮೆಂಟ್ ಕೊಡುವ ಕೆಲಸವಾಗುತ್ತಿದೆ. ಜನರು ಇದರ ಸದುಪಯೋಗ ಪಡೆದುಕೊಳ್ಳಬೇಕು. ಟೆಲಿ ಮೆಡಿಸನ್ ಮೂಲಕ ಜನರ ಆತ್ಮವಿಶ್ವಾಸ ತುಂಬುವ ಕೆಲಸವಾಗುತ್ತಿದೆ ಎಂದು ರೋಹಿಣಿ ಸಿಂಧೂರಿ ಹೇಳಿದರು.