ಕೊರೋನಾ ಲಸಿಕೆ ಅಭಾವದ ಹಿಂದೆ ಕಾಂಗ್ರೆಸ್ ನಾಯಕರ ಕೈವಾಡ | ಹೆಚ್ ಡಿ ಕುಮಾರಸ್ವಾಮಿ
ದೇಶದಲ್ಲಿ ಲಸಿಕೆ ಅಭಾವದ ಹಿಂದೆ ಕಾಂಗ್ರೆಸ್ ನಾಯಕರ ಸಣ್ಣತನದ ರಾಜಕಾರಣವೂ ಪ್ರಮುಖ ಕಾರಣ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಟೀಕಿಸಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ಕುಮಾರಸ್ವಾಮಿ, ‘100 ಕೋಟಿ ಲಸಿಕೆಗಾಗಿ ದುಡ್ಡು ಕೊಡುತ್ತೇನೆ ಎಂದು ಹೇಳುವ ಕಾಂಗ್ರೆಸ್ ನಾಯಕರು, ಮನೆಯಿಂದ ದುಡ್ಡು ತಂದು ಕೊಡುವುದಿಲ್ಲ. ಈಗ ಸರಕಾರದಿಂದ ಸಿಗುತ್ತಿರುವ ಫಂಡ್ ನಿಂದ ಕೊಡಲು ಹೊರಟಿದ್ದಾರೆ ‘ ಎಂದು ಲೇವಡಿ ಮಾಡಿದರು.
ಹಿಂದೆ ಇದೇ ಕಾಂಗ್ರೆಸ್ಸಿನ ನಾಯಕರು, ಭಾರತದಲ್ಲಿ ಲಸಿಕೆ ಕಂಡು ಹಿಡಿದಂತಹ ಸಂದರ್ಭದಲ್ಲಿ ಮತ್ತು ಕೇಂದ್ರ ಸರಕಾರ ಅಂತಿಮ ತೀರ್ಮಾನ ತೆಗೆದುಕೊಳ್ಳಲು ಹೋದಾಗ, ‘ ಇದು ವ್ಯಾಕ್ಸಿನ್ ಅಲ್ಲ, ಡ್ರಾಮಾ ಮಾಡುತ್ತಿದ್ದಾರೆಂದು’ ಕಾಂಗ್ರೆಸ್ ನಾಯಕರು ದೂರಿದ್ದರು ಎಂದು ಕುಮಾರಸ್ವಾಮಿ ಕಿಡಿಕಾರಿದರು.
‘ ಈಗ ಕಂಡು ಹಿಡಿದಂತಹ ಲಸಿಕೆ ಡಿಸ್ಟಿಲರಿ ವಾಟರಿಗೆ ಸಮ. ಇದನ್ನು ಯಾರೂ ತೆಗೆದುಕೊಳ್ಳಬೇಡಿ ಎಂದು ಅಪಪ್ರಚಾರ ಮಾಡಿದರು. ಇದೇ ಕಾಂಗ್ರೆಸ್ ನಾಯಕರು ಮೊನ್ನೆ ಗಾಂಧಿ ಪ್ರತಿಮೆಯ ಬಳಿ ಪ್ರತಿಭಟನೆಯ ನಾಟಕವಾಡುತ್ತಿದ್ದಾರೆ ‘ ಎಂದು ಕುಮಾರಸ್ವಾಮಿ ವ್ಯಂಗ್ಯವಾಡಿದ್ದಾರೆ. “ಆರಂಭದಲ್ಲಿ ವ್ಯಾಕ್ಸಿನ್ ತೆಗೆದುಕೊಳ್ಳಬೇಡಿ, ಮೋದಿ ನಿದ್ದೆ ಮಾಡುತ್ತಿದ್ದಾರೆಂದು ಪ್ರಚಾರ ಮಾಡಿದವರು ನೀವು. ನಿಮ್ಮ ಅಪಪ್ರಚಾರದಿಂದ ಅಂದು ಉತ್ಪಾದನೆಯಾಗಿದ್ದ ಲಸಿಕೆಯನ್ನು ಪಡೆಯಲು ಯಾರೂ ಮುಂದಾಗಲಿಲ್ಲ”ಎಂದು ಕುಮಾರಸ್ವಾಮಿ, ಕಾಂಗ್ರೆಸ್ ನಾಯಕರನ್ನು ತೀವ್ರ ತರಾಟೆಗೆ ತೆಗೆದುಕೊಂಡರು.
‘ ಅಂದು ಪ್ರೊಡಕ್ಷನ್ ಆಗಿದ್ದ ಲಸಿಕೆ ವೇಸ್ಟ್ ಆಗಬಾರದು ಎನ್ನುವ ಕಾರಣಕ್ಕಾಗಿ ಕೇಂದ್ರ ಸರಕಾರ ವಿದೇಶಕ್ಕೆ ಕಳುಹಿಸುವ ತೀರ್ಮಾನಕ್ಕೆ ಬಂತು. ಕಾಂಗ್ರೆಸ್ ನಾಯಕರ ಅಂದಿನ ಸಣ್ಣತನದ ರಾಜಕಾರಣದ ಎಫೆಕ್ಟ್ ಈಗಿನ ಲಸಿಕೆ ಅಭಾವಕ್ಕೆ ಕಾರಣ. ಹಾಗಾಗಿ ಲಸಿಕೆ ಹಾಹಾಕಾರಕ್ಕೆ ಕಾಂಗ್ರೆಸ್ಸಿನ ಮೂಲವೂ ಇದೆ ‘ ಎಂದು ಎಚ್.ಡಿ.ಕುಮಾರಸ್ವಾಮಿ ವ್ಯಾಖ್ಯಾನಿಸಿದ್ದಾರೆ.