ಒಂದೇ ಮಂಟಪದಲ್ಲಿ ಅಕ್ಕ ತಂಗಿ ಇಬ್ಬರನ್ನೂ ವರಿಸಿದ ಮುದ್ದಿನ ಹೆಂಡಿರ ಗಂಡ ಉಮಾಪತಿ ಜೈಲು ಪಾಲು
ಒಂದೇ ಮಂಟಪದಲ್ಲಿ ವ್ಯಕ್ತಿಯೊಬ್ಬ ಅಕ್ಕ ತಂಗಿ ಇಬ್ಬರನ್ನೂ ವರಿಸಿದ ಫೋಟೋ ಮತ್ತು ಅವರ ಮದುವೆಯ ಆಮಂತ್ರಣ ಪತ್ರ ಇತ್ತೀಚೆಗೆ ವೈರಲ್ ಆಗಿತ್ತು. ಆದರೆ ಇದೀಗ ಕಥೆ ಬಿಗ್ ಟ್ವಿಸ್ಟ್ ಪಡೆದುಕೊಂಡಿದೆ. ಡಬ್ಬಲ್ ಹೆಂಡತಿಯರನ್ನು ಪಡೆದು ಸಂತಸದಲ್ಲಿದ್ದ ವರ ಉಮಾಪತಿ ಇದೀಗ ಪೊಲೀಸರ ಆತಿಥ್ಯದಲ್ಲಿದ್ದಾನೆ.
ಕೋಲಾರ ಜಿಲ್ಲೆಯ ಮುಳಬಾಗಿಲು ತಾಲ್ಲೂಕು ವೇಗಮಡಗು ಗ್ರಾಮದ ಉಮಾಪತಿ ತನ್ನ ಅಕ್ಕನ ಮಕ್ಕಳಾದ ಸುಪ್ರಿಯಾ ಮತ್ತು ಲಲಿತಾಳನ್ನು ಮದುವೆಯಾಗಿದ್ದ. ಹಿರಿಯಾಕೆ ಸುಪ್ರಿಯಾ ಹುಟ್ಟು ಮೂಕಿಯಾಗಿದ್ದರಿಂದ ಆಕೆಗೆ ವರ ಸಿಗದ ಹಿನ್ನೆಲೆಯಲ್ಲಿ ಆಕೆಯನ್ನು ಮತ್ತು ತಂಗಿಯನ್ನು – ಇಬ್ಬರನ್ನೂ ಆತನೇ ವರಿಸಿದ್ದ ಎನ್ನಲಾಗಿತ್ತು. ಆದರೆ ಉಮಾಪತಿಯ ಚಿಕ್ಕ ಪತ್ನಿಯಾಗಿ ಆತನ ಮನೆ ಸೇರಿರುವ ಲಲಿತಾಳ ವಯಸ್ಸು ಇನ್ನೂ 18 ವರ್ಷ ತುಂಬಿಕೊಂಡಿಲ್ಲ. ಹಾಗಾಗಿ ಅಪ್ರಾಪ್ತ ಬಾಲಕಿಯನ್ನು ಮದುವೆಯಾಗಿರುವ ಆರೋಪದಲ್ಲಿ ಉಪಾಪತಿಯನ್ನು ಬಂಧಿಸಲಾಗಿದೆ.
ಮೊನ್ನೆ ದುವೆಯ ಪೋಟೋ ವೈರಲ್ ಆದ ಹಿನ್ನೆಲೆಯಲ್ಲಿ ಮದುವೆಯ ಕುರಿತು ಪರಿಶೀಲನೆ ಮಾಡಲು ಡಿಸಿ ಆರ್.ಸೆಲ್ವಮಣಿ ಅವರು ಆದೇಶಿಸಿದ್ದರು. ಈ ವೇಳೆ ಲಲಿತಾಳ ಅಪ್ರಾಪ್ತ ವಯಸ್ಸಿನ ವಿಚಾರ ತಿಳಿದುಬಂದಿದೆ. ಉಮಾಪತಿ ಸೇರಿ ಏಳು ಜನರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ನಂಗಲಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.