ಮರವನ್ನೇ ಐಸೋಲೇಶನ್ ಸೆಂಟರ್ ಮಾಡಿಕೊಂಡು 11 ದಿನ ಮರದಲ್ಲೇ ಕಳೆದ ವಿದ್ಯಾರ್ಥಿ
ಕಳೆದೊಂದು ವರ್ಷದಿಂದ ಕೊರೋನ ಹಾವಳಿಯಿಂದ ಬಹುತೇಕ ಶಾಲೆಗಳು ಆನ್ಲೈನ್ ಕ್ಲಾಸ್ ನಡೆಸುತ್ತಿದ್ದ ಸಂದರ್ಭದಲ್ಲಿ ಶಿಕ್ಷಕರು ವಿದ್ಯಾರ್ಥಿಗಳು ಮರದ ಮೇಲೆ ಕುಳಿತು ನೆಟ್ವರ್ಕ್ ನ ಕುಟ್ಟಿ ಹುಡುಕುತ್ತಿದ್ದರು. ಈಗಲೂ ಅದನ್ನೇ ಮಾಡುತ್ತಿದ್ದಾರೆ. ಹಾಗೆಯೇ ಇಲ್ಲೊಬ್ಬ ವಿದ್ಯಾರ್ಥಿ ಮನೆಯಲ್ಲಿ ಜಾಗವಿಲ್ಲದೆ ಐಸೋಲೇಶನ್ ಗಾಗಿ ಮರವನ್ನೇರಿ ಕುಳಿತ ಘಟನೆ ವರದಿಯಾಗಿದೆ.
ಕೊರೋನಾ ಸೋಂಕು ತಗುಲಿದ ಕೂಡಲೇ ಸಾಮಾನ್ಯವಾಗಿ ಹೋಂ ಐಸೋಲೇಷನ್ ಗೆ ಒಳಗಾಗಲು ಆರೋಗ್ಯ ಕಾರ್ಯಕರ್ತರು ಸೂಚಿಸುತ್ತಾರೆ. ಹೋಂ ಐಸೋಲೇಷನ್ ಅನ್ನು ಸರಿಯಾದ ರೀತಿಯಲ್ಲಿ ಮಾಡಲು ಎಷ್ಟೋ ಕುಟುಂಬಗಳು ಜಾಗದ ತೀವ್ರ ಅಭಾವವನ್ನು ಎದುರಿಸುತ್ತಿವೆ.
ಇದನ್ನರಿತು 18 ವರ್ಷದ ಶಿವ ಎಂಬ ವಿದ್ಯಾರ್ಥಿ ತನ್ನ ನಿವಾಸದ ಕಾಂಪೌಂಡ್ ನ ಮೂಲೆಯಲ್ಲಿರುವ ಮರದ ಮೇಲೆ ಬಿದಿರಿನಿಂದ ಮಾಡಿದ ಕೋವಿಡ್ ‘ವಾರ್ಡ್’ ನಿರ್ಮಿಸಿದ್ದಾನೆ. ಮತ್ತು ಅಲ್ಲೇ 11 ದಿನಗಳ ಕಾಲ ಐಸೋಲೇಷನ್ ಗೆ ಒಳಗಾಗಿದ್ದಾನೆ.
ತೆಲಂಗಾಣದ ನಲಗೊಂಡ ಜಿಲ್ಲೆಯ ಹಲವು ಕುಟುಂಬಗಳು ಅಡುಗೆ ಕೋಣೆ ಸೇರಿದಂತೆ ಒಂದೇ ಕೊಠಡಿಯಲ್ಲಿ ಜೀವಿಸುತ್ತಿದ್ದಾರೆ. ಇಲ್ಲಿ ಕೊರೋನಾ ಸೋಂಕಿಗೆ ಒಳಗಾದರೆ ಐಸೋಲೇಷನ್ ಗೆ ಒಳಗಾಗಲು ಯಾವುದೇ ಸೌಲಭ್ಯ ಇಲ್ಲ. ಜಿಲ್ಲೆಯ ಬುಡಕಟ್ಟು ಕುಗ್ರಾಮ ಕೊತ್ತನಂದಿಕೊಂಡದಲ್ಲಿ ಒಟ್ಟಾರೆ 350 ಕ್ಕೂ ಕುಟುಂಬಗಳು ವಾಸಿಸುತ್ತಿದ್ದು, ಅಲ್ಲಿ ವಾಸವಾಗಿರುವ ಶಿವನಿಗೆ ಮೇ 4 ರಂದು ಕೊರೋನಾ ಪಾಸಿಟೀವ್ ದೃಢಪಟ್ಟಿತ್ತು.
ಅಲ್ಲಿ ಕೋರೋನಾ ಸೋಂಕಿತರಿಗೆ ಜಿಲ್ಲಾಡಳಿತವು
ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಹಾಸ್ಟೆಲ್ ಅನ್ನು ಐಸೋಲೇಷನ್ ಕೇಂದ್ರವಾಗಿ ಪರಿವರ್ತಿಸಿತ್ತು. ಆದರೆ ಶಿವ ವಾಸವಿದ್ದ ಪ್ರದೇಶದ ಪಕ್ಕದಲ್ಲಿ ಐಸೋಲೇಷನ್ ಗಾಗಿ ಯಾವುದೇ ಸೌಲಭ್ಯ ಇರಲಿಲ್ಲ. ಇತರ ಗ್ರಾಮಗಳಲ್ಲಿ ಇಂತಹ ಕೇಂದ್ರಗಳು ಇವೆ ಎಂಬುದೇ ಆತನಿಗೆ ತಿಳಿದಿರಲಿಲ್ಲವಂತೆ. ಹಾಗಾಗಿ ಆತ ಅನಿವಾರ್ಯವಾಗಿ ಮರವನ್ನು ಆಶ್ರಯಿಸಬೇಕಾಯಿತು.
ಆತ ಬಡತನ ಮತ್ತು ಮೂಲ ಸೌಕರ್ಯಗಳ ಕೊರತೆಯ ನಡುವೆಯೂ ಸಾಮಾಜಿಕ ಅಂತರ ಕಾಯ್ದುಕೊಂಡ ಹಳ್ಳಿಯ ಹುಡುಗನೊಬ್ಬ ಪ್ರಜ್ಞಾವಂತಿಕೆ ಮೆರೆದಿದ್ದು ಪ್ರಶಂಸನೀಯ ಹಾಗೂ ಅನುಕರಣೀಯ.