ಕೋವಿಡ್ ಸೋಂಕು ನಿಯಂತ್ರಿಸಲು ಟಾಸ್ಕ್ಫೋರ್ಸ್ ಮುಂದಾಗಬೇಕು: ಸಚಿವ ಕೋಟ ಶ್ರೀನಿವಾಸ ಪೂಜಾರಿ
ಗ್ರಾಮೀಣ ಭಾಗದಲ್ಲಿ ಕೋವಿಡ್ ಸೋಂಕು ಹರಡುವಿಕೆಯನ್ನು ನಿಯಂತ್ರಣ ಮಾಡುವ ಜವಾಬ್ದಾರಿ ಗ್ರಾಮಮಟ್ಟದ ಟಾಸ್ಕ್ಫೋರ್ಸ್ ಸಮಿತಿಯದ್ದಾಗಿದೆ. ಹಾಗಾಗಿ ಅದನ್ನು ಚಾಚೂ ತಪ್ಪದೆ ಪಾಲಿಸಬೇಕು ಎಂದು ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.
ಕೋವಿಡ್ -19 ನಿಯಂತ್ರಣ ಕುರಿತು ಸುಳ್ಯ ತಾಲೂಕು ವ್ಯಾಪ್ತಿಯ ಗ್ರಾಪಂ ಅಧ್ಯಕ್ಷರು, ಉಪಾಧ್ಯಕ್ಷರು, ಪಿಡಿಒ ಸಹಿತ ಗ್ರಾಮಮಟ್ಟದ ಟಾಸ್ಕ್ ಫೋರ್ಸ್ ಸಮಿತಿಯೊಂದಿಗೆ ದ.ಕ.ಜಿಪಂ ಕಚೇರಿಯ ವೀಡಿಯೋ ಕಾನ್ಫರೆನ್ಸ್ ಮೂಲಕ ಪ್ರಗತಿ ಪರಿಶೀಲನಾ ಸಭೆ ನಡೆಸಿ ಅವರು ಮಾತನಾಡಿದರು.
ಕೋವಿಡ್ನ ಮೊದಲನೆ ಅಲೆಗೆ ಹೋಲಿಸಿದರೆ 2ನೇ ಅಲೆಯು ಹರಡುವ ಪ್ರಮಾಣವು ಹೆಚ್ಚು ಇದೆ. ಈ ಬಾರಿ ಕೊರೋನ ಸೋಂಕು ಗ್ರಾಮೀಣ ಭಾಗದಲ್ಲಿ ವ್ಯಾಪಕವಾಗಿ ಹರಡಲು ಪ್ರಾರಂಭಿಸಿದೆ. ಸೋಂಕು ಹರಡುವಿಕೆಯ ಸರಪಳಿಯನ್ನು ಕಡಿತಗೊಳಿಸುವ ಕಾರ್ಯವನ್ನು ಗ್ರಾಮಮಟ್ಟದ ಟಾಸ್ಕ್ ಫೋರ್ಸ್ ಸಮಿತಿಯಿಂದ ಆಗಬೇಕು ಎಂದರು ಸಚಿವ ಕೋಟ ಶ್ರೀನಿವಾಸ ಪೂಜಾರಿ.
ಮೀನುಗಾರಿಕಾ ಸಚಿವ ಎಸ್. ಅಂಗಾರ ಮಾತನಾಡಿ, ಗ್ರಾಮೀಣ ಭಾಗದ ಸೋಂಕಿತರ ಮನೆಯಲ್ಲಿ ಪ್ರತ್ಯೇಕ ಕೊಠಡಿ ಸೇರಿದಂತೆ ಶೌಚಾಲಯದ ವ್ಯವಸ್ಥೆ ಕಡಿಮೆ ಇದೆ.ಈ ಹಿನ್ನೆಲೆಯಲ್ಲಿ ಸೋಂಕಿತರಿಗೆ ಹೋಂ ಕ್ವಾರಂಟೈನ್ಗೆ ಹೆಚ್ಚು ಅವಕಾಶ ನೀಡದೆ ಹತ್ತಿರದ ಕೋವಿಡ್ ಕೇರ್ ಸೆಂಟರ್ಗೆ ಅಥವಾ ಅವಶ್ಯವಿದ್ದಲ್ಲಿ ಆಸ್ಪತ್ರೆಗೆ ವರ್ಗಾಯಿಸಬೇಕು ಎಂದರು.
ಸಂಸದ ನಳಿನ್ ಕುಮಾರ್ ಕಟೀಲ್, ಜಿಪಂ ಸಿಇಒ ಡಾ. ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.