ಬೆಳ್ತಂಗಡಿ : ಲಾಯಿಲ ಬಜೆಕ್ರೆಸಾಲು ತಾತ್ಕಾಲಿಕ ಸೇತುವೆ ನೀರು ಪಾಲು
ತೌಕ್ತೆ ಚಂಡಮಾರುತದಿಂದ ಕಳೆದ ಎರಡು ದಿನಗಳಿಂದ ಕರಾವಳಿಯಾದ್ಯಂತ ಅಕಾಲಿಕ ಮಳೆಯಾಗುತ್ತಿದ್ದು ಇದರಿಂದ ಬೆಳ್ತಂಗಡಿ ತಾಲೂಕಿನ ಲಾಯಿಲ ಗ್ರಾಮದ ಬಜಕ್ರೆಸಾಲು ಹಳ್ಳ ಎಂಬಲ್ಲಿ ಹೊಸ ಸೇತುವೆಯ ಕಾಮಗಾರಿ ನಡೆಯುತ್ತಿದ್ದ ಸ್ಥಳದಲ್ಲಿ ಜನರ ಅನುಕೂಲತೆಗಾಗಿ ನಿರ್ಮಿಸಲಾದ ತಾತ್ಕಾಲಿಕ ಮಣ್ಣಿನ ಸೇತುವೆ ಮಳೆಯ ನೀರಿಗೆ ಕೊಚ್ಚಿಕೊಂಡು ಹೋಗಿದೆ.
ಲಾಯಿಲ-ಕನ್ನಾಜೆ-ಕರ್ನೋಡಿ-ಮುಂಡೂರು ಸಂಪರ್ಕ ರಸ್ತೆ ಕಾಮಗಾರಿ ನಡೆಯುತ್ತಿದ್ದು, ಇದರ ಮಧ್ಯೆ ಲಾಯಿಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಜೆಕ್ರೆಸಾಲು ಎಂಬಲ್ಲಿ ಸೇತುವೆ ನಿರ್ಮಾಣಕ್ಕೆ ಕಾಮಗಾರಿಗಳು ಆರಂಭವಾಗಿದ್ದವು.
ಇಲ್ಲಿನ ಹಳೆಯ ಕಿಂಡಿ ಅಣೆಕಟ್ಟಿನ ಸೇತುವೆಯನ್ನು ಕೆಡವಿ ಜನರ ಬಹು ವರ್ಷದ ಬೇಡಿಕೆಯಾಗಿ ವಾಹನ ಸಂಚಾರದ ನೂತನ ಸೇತುವೆ ನಿರ್ಮಾಣವಾಗುತ್ತಿದೆ. ಇಲ್ಲಿನ ಸೋಮವತಿ ನದಿಯ ಉಪ ನದಿ ಬಜಕ್ರೆಸಾಲು ಹಳ್ಳಕ್ಕೆ ಮಣ್ಣು ಹಾಕಿ ತಾತ್ಕಾಲಿಕ ಸಂಪರ್ಕ ರಸ್ತೆಯನ್ನು ನಿರ್ಮಿಸಲಾಗಿತ್ತು.
ಅದರೆ ಕಳೆದ ಎರಡು ದಿನಗಳಿಂದ ಸುರಿದ ಮಳೆಗೆ ಈ ರಸ್ತೆ ಕೊಚ್ಚಿಕೊಂಡು ಹೋಗಿ ನದಿಯ ಇನ್ನೊಂದು ಬದಿಗೆ ಹೋಗುವ ಸಂಪರ್ಕ ಕಡಿತಗೊಂಡಿದೆ.