ಕೋವಿಡ್ ಲಸಿಕೆ ಹಾಕಿಸಿಕೊಂಡವರಲ್ಲಿ 97.38 % ರಷ್ಟು ಜನರು ಸೇಫ್ !
ಕೋವಿಡ್ ವ್ಯಾಕ್ಸಿನೇಷನ್ ಮಾಡಿಸಿಕೊಂಡರೆ ಕೇವಲ ಶೇಕಡ 0.06 ಜನರಿಗೆ ಮಾತ್ರ ಆಸ್ಪತ್ರೆ ಅಗತ್ಯವಿರುತ್ತದೆ. ಲಸಿಕೆ ಹಾಕಿಸಿಕೊಂಡವರಲ್ಲಿ ಶೇಕಡ 97.38 ರಷ್ಟು ಜನರು ವೈರಸ್ ನಿಂದ ರಕ್ಷಿಸಲ್ಪಟ್ಟಿದ್ದಾರೆ ಎಂದು ಇಂದ್ರಪ್ರಸ್ಥ ಅಪೋಲೊ ಆಸ್ಪತ್ರೆಯ ಅಧ್ಯಯನ ಸಂಸ್ಥೆ ನಡೆಸಿದ ಸರ್ವೇಯಿಂದ ಬಹಿರಂಗವಾಗಿದೆ.
ಕೋವಿಡ್-19 ವ್ಯಾಕ್ಸಿನೇಷನ್ ನಂತರ ಸೋಂಕುಗಳು(ಬ್ರೇಕ್ ಥ್ರೂ ಸೋಂಕು) ಆವರ್ತನ ಮೌಲ್ಯಮಾಪನ ಮಾಡಿದ ಅಧ್ಯಯನದ ಫಲಿತಾಂಶಗಳನ್ನು ಆಸ್ಪತ್ರೆ ಬಿಡುಗಡೆ ಮಾಡಿದೆ. ಅಪೋಲೋ ಆಸ್ಪತ್ರೆಗಳ ಸಮೂಹದ ವೈದ್ಯಕೀಯ ನಿರ್ದೇಶಕ ಡಾ. ಅನುಪಮ್ ಸಿಬಲ್ ಸುದ್ದಿ ಸಂಸ್ಥೆಯೊಂದಕ್ಕೆ ಈ ಬಗ್ಗೆ ಮಾಹಿತಿ ನೀಡಿ ಮಾತನಾಡಿ ಭಾರತದಲ್ಲಿ ವ್ಯಾಕ್ಸಿನೇಷನ್ ಡ್ರೈವ್ ಪ್ರಗತಿಯಲ್ಲಿದೆ. ಕೆಲವೇ ಕೆಲವು ವ್ಯಕ್ತಿಗಳಲ್ಲಿ ಭಾಗಶಃ ಮತ್ತು ಪೂರ್ಣ ವ್ಯಾಕ್ಸಿನೇಷನ್ ಮಾಡಿದ ನಂತರ ಈ ಸೋಂಕುಗಳು ಸಂಭವಿಸಬಹುದಾಗಿದೆ ಎಂದು ತಿಳಿಸಿದ್ದಾರೆ. ಆದರೆ ಅದರ ಪ್ರೊಬ್ಯಾಬಿಲಿಟಿ ತುಂಬಾ ಕಮ್ಮಿ ಎಂದಿದೆ.
ಪೀಡಿಯಾಟ್ರಿಕ್ ಗ್ಯಾಸ್ಟೋಎಂಟರಾಲಜಿಯ ಹಿರಿಯ ಸಲಹೆಗಾರರು ಆಗಿರುವ ಸಿಬಲ್ ಅವರು, ಕೋವಿಡ್ 19 ವ್ಯಾಕ್ಸಿನೇಷನ್ ಶೇಕಡ 100 ರಷ್ಟು ರೋಗನಿರೋಧಕ ಶಕ್ತಿಯನ್ನು ಒದಗಿಸುವುದಿಲ್ಲ ಎಂದು ಅಧ್ಯಯನಗಳಲ್ಲಿ ಕಂಡುಬಂದಿದೆ. ಗಂಭೀರ ಸೋಂಕುಗಳಿಂದ ರಕ್ಷಣೆ ನೀಡುತ್ತದೆ. ಆಸ್ಪತ್ರೆಗೆ ದಾಖಲಾಗುವವರ ಪ್ರಮಾಣ ಕೇವಲ ಶೇಕಡ 0.06 ರಷ್ಟು ಇದೆ ಎಂದು ಹೇಳಲಾಗಿದೆ.
ವ್ಯಾಕ್ಸಿನೇಷನ್ ನಂತರದಲ್ಲಿ ಸೋಂಕುಗಳು ಅಲ್ಪ ಪ್ರಮಾಣದಲ್ಲಿ ಮಾತ್ರ ಕಾಣಿಸುತ್ತವೆ. ತೀವ್ರತರ ಕಾಯಿಲೆಗೆ ಕಾರಣವಾಗದ ಪ್ರಾಥಮಿಕ ಸಣ್ಣ ಸೋಂಕುಗಳು ಇವಾಗಿವೆ ಎನ್ನುವುದು ಅಧ್ಯಯನದಲ್ಲಿ ಗೊತ್ತಾಗಿದೆ. ಇಂತಹವವರಿಗೆ ಐಸಿಯು ಅಗತ್ಯವಿರುವುದಿಲ್ಲ ಅಥವಾ ಸಾವು ಸಂಭವಿಸಲ್ಲ. ಅಧ್ಯಯನದಲ್ಲಿ ಕಂಡುಕೊಂಡ ಮಾಹಿತಿಯಂತೆ ವ್ಯಾಕ್ಸಿನೇಷನ್ ರಕ್ಷಣೆ ಒದಗಿಸುತ್ತದೆ.
ಒಟ್ಟು 3,235 ಆರೋಗ್ಯ ಕಾರ್ಯಕರ್ತರ ಮೇಲೆ ಅಧ್ಯಯನ ನಡೆಸಲಾಗಿದೆ. ಇವರಲ್ಲಿ 85 ಮಂದಿ ಅಧ್ಯಯನದ ಅವಧಿಯಲ್ಲಿ ಸೋಂಕಿಗೆ ಒಳಗಾಗಿದ್ದಾರೆ. ಇವರ ಪೈಕಿ 65 ಜನರಿಗೆ ಸಂಪೂರ್ಣವಾಗಿ ಲಸಿಕೆ ನೀಡಲಾಗಿತ್ತು. 20 ಮಂದಿಗೆ ಭಾಗಶಃ ಲಸಿಕೆ ನೀಡಲಾಗಿತ್ತು ಎಂದು ಅಧ್ಯಯನದ ವಿವರವನ್ನು ನೀಡಲಾಗಿದೆ.