ಅಂತ್ಯ ಸಂಸ್ಕಾರಕ್ಕೆ ಸಿದ್ಧತೆ ನಡೆಸುತ್ತಿದ್ದಾಗ, ಕೊನೆಯ ಕ್ಷಣದಲ್ಲಿ ಏಕಾಏಕಿ ಎದ್ದು ಕುಳಿತ ವೃದ್ಧೆ
ಅಂತ್ಯ ಸಂಸ್ಕಾರಕ್ಕೆ ಸಿದ್ದತೆ ನಡೆಸುವಾಗ ಕೊನೆ ಕ್ಷಣದಲ್ಲಿ ವೃದ್ಧೆ ಕಣ್ಣುಬಿಟ್ಟು ಎದ್ದು ಕುಳಿತಿರುವ ವಿಸ್ಮಯ ಘಟನೆ ನಡೆದಿದೆ.
76 ವರ್ಷ ವಯಸ್ಸಿನ ಶಾಕುಂತಲಾ ಕೊರೊನಾದಿಂದ ಮೃತಪಟ್ಟಿದ್ದರು. ಮಹಾರಾಷ್ಟ್ರದ ಬಾರಾಮತಿ ಜಿಲ್ಲೆಯ ಮುಧಲೆ ಗ್ರಾಮದ ನಿವಾಸಿಯಾಗಿದ್ದು, ಕಳೆದ ಕೆಲ ದಿನಗಳ ಹಿಂದೆ ಕೊರೊನಾ ಸೋಂಕಿಗೆ ಒಳಗಾಗಿದ್ದರು. ಈ ಹಿನ್ನೆಲೆಯಲ್ಲಿ ಮನೆಯಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗಿತ್ತು. ಆದರೆ ಆಕೆಯ ಆರೋಗ್ಯ ಸ್ಥಿತಿ ಹದಗೆಟ್ಟಿತ್ತು. ಆ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಿಸಲು ಬಾರಾಮತಿಗೆ ಕರೆದುಕೊಂಡು ಬಂದಿದ್ದರು. ಆದರೆ ಆಸ್ಪತ್ರೆಗೆ ದಾಖಲಿಸುವಷ್ಟರಲ್ಲಿ ಶಾಕುಂತಲಾ ಮೃತಪಟ್ಟಿದ್ದರು. ಆಕೆಯ ದೇಹದಲ್ಲಿ ಯಾವುದೇ ಸ್ಪಂದನೆಯನ್ನೂ ಅವರು ಬಹುಸಮಯದವರೆಗೆ ಗುರುತಿಸಲಿಲ್ಲ.
ಆಗ ಕುಟುಂಬಸ್ಥರು ಶಾಕುಂತಲಾ ಸಾವನ್ನಪ್ಪಿದಳು ಎಂದು ಇತರ ಕುಟುಂಬಸ್ಥರಿಗೆ ಮತ್ತು ಗ್ರಾಮದವರಿಗೆ ತಿಳಿಸಿದರು. ಅದರಂತೆ ಗ್ರಾಮದಲ್ಲಿ ಅಂತಿಮ ಸಂಸ್ಕಾರಕ್ಕೆ ಎಲ್ಲಾ ಸಿದ್ದತೆ ನಡೆದಿತ್ತು. ಎಲ್ಲಾ ನೆಂಟರಿಷ್ಟರು ಬಂದು ದೂರದಿಂದಲೇ ಆಕೆಯನ್ನು ದರ್ಶನ ಮಾಡಿದ್ದರು. ಇನ್ನೇನು ಆಕೆಯನ್ನು ಎತ್ತಿ ಚಿತೆಯತ್ತ ಕೊಂಡೊಯ್ಯಬೇಕೆಂದುಕೊಳ್ಳುವಶ್ಟರಲ್ಲಿ ಆಕೆಯೇ ನಿದ್ದೆಯಿಂದ ಎದ್ದಂತೆ ಧಿಗಲ್ಲನೆ ಎದ್ದು ಕೂತಿದ್ದಳು.
ಸುತ್ತಮುತ್ತ ನೆರೆದಿದ್ದ ಜನರನ್ನು ಕಂಡು ಶಕುಂತಲಾ ಕಣ್ಣೀರು ಹಾಕಿದ್ದಾರೆ. ಕುಟುಂಬಸ್ಥರು ಶಕುಂತಲಾ ಎದ್ದು ಕುಳಿತಿರುವುದನ್ನು ಆಶ್ಚರ್ಯ ಪಟ್ಟಿದ್ದಾರೆ. ತಕ್ಷಣ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿದ್ದಾರೆ ಎಂದು ವರದಿಯಾಗಿದೆ.