ಕೊರೋನಾ ಸೋಂಕು ಮತ್ತಷ್ಟು ಹರಡದಂತೆ ವಹಿಸಬೇಕಾದ ಮನ್ನೆಚ್ಚೆರಿಕೆಯ ಬಗ್ಗೆ ಧಾರ್ಮಿಕ ಮತ್ತು ಸಾಮಾಜಿಕ ಗಣ್ಯರ ಸಲಹೆ ಕೋರಿದ ಶಾಸಕ ಹರೀಶ್ ಪೂಂಜ
ಬೆಳ್ತಂಗಡಿ ತಾಲೂಕಿನಲ್ಲಿ ಕೊರೋನಾ ಸೋಂಕು ಮತ್ತಷ್ಟು ಹರಡದಂತೆ ವಹಿಸಬೇಕಾದ ಮನ್ನೆಚ್ಚೆರಿಕೆಯ ಬಗ್ಗೆ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ತಾಲೂಕಿನ ಪ್ರಮುಖರನ್ನು ಭೇಟಿಯಾಗಿ ಸಲಹೆ ಸೂಚನೆ ಪಡೆದುಕೊಂಡರು.
ಧಾರ್ಮಿಕ ಮತ್ತು ಸಾಮಾಜಿಕ ಮುಖಂಡರುಗಳನ್ನು ಭೇಟಿಮಾಡಿ ಮಾತುಕತೆ ನಡೆಸಿದ ಅವರು ಮೊದಲಿಗೆ
ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ.ಡಿ.ವೀರೇಂದ್ರ ಹೆಗ್ಗಡೆಯವನ್ನು ಭೇಟಿ ಮಾಡಿ ಆಶೀರ್ವಾದ ಪಡೆದು ಕೊರೊನಾ ಸೋಂಕು ಹರಡದಂತೆ ತೆಗೆದುಕೊಳ್ಳಬೇಕಾದ ಮುಂಜಾಗರೂಕತೆ ಮತ್ತು ಕ್ರಮಗಳ ಬಗ್ಗೆ ಚರ್ಚಿಸಿದರು.
ಮುಂದೆಯೂ ಇದೇ ರೀತಿಯ ಸಹಕಾರವನ್ನು ಧರ್ಮಸ್ಥಳದ ವತಿಯಿಂದ ನೀಡುವ ಭರವಸೆಯನ್ನು ಹೆಗ್ಗಡೆಯವರು ಶಾಸಕರಿಗೆ ಭರವಸೆ ನೀಡಿದರು.
ನಂತರ ಕನ್ಯಾಡಿ ಶ್ರೀ ರಾಮ ಕ್ಷೇತ್ರದ ಶ್ರೀ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ,ಅವರಲ್ಲಿ ಆಶೀರ್ವಾದ ಪಡೆದು ಅವರಲ್ಲಿಯೂ ಸಲಹೆ ಸೂಚನೆಗಳನ್ನು ಪಡೆದ ಶಾಸಕರು ಆನಂತರ ಉಜಿರೆ ಜನಾರ್ದನ ಸ್ವಾಮಿ ದೇವಸ್ಥಾನ ಆಡಳಿತ ಮೊಕ್ತಸರ ವಿಜಯರಾಘವ ಪಡ್ವಟ್ನಾಯ ಮತ್ತು ಶರತ್ ಕೃಷ್ಣ ಪಡೈಟ್ನಾಯ, ತಿಮ್ಮಣ್ಣರಸರಾದ ಡಾ ಪದ್ಮ ಪ್ರಸಾದ್ ಅಜಿಲರು ಅಳದಂಗಡಿ ಅರಮನೆ, ಬೆಳ್ತಂಗಡಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಬಿಷಪ್ ಲಾರೆನ್ಸ್ ಮುಕ್ಕುಯಿ,ಬೆಳ್ತಂಗಡಿ ತಾಲೂಕು ಸುನ್ನೀ ಸಂಯುಕ್ತ ಜಮಾಅತ್ ನ ಅಧ್ಯಕ್ಷರು ಸಯ್ಯದ್ ಇಸ್ಮಾಯಿಲ್ ತಂಜಳ್ ಅವರ ಸಲಹೆಪಡೆದರು. ಆಮೇಲೆ ಬರೋಡ ತುಳು ಸಂಘದ ಅಧ್ಯಕ್ಷರೂ ಖ್ಯಾತ ಉದ್ಯಮಿಗಳಾದ ಶಶಿಧರ್ ಶೆಟ್ಟಿ ನವಶಕ್ತಿ ಗುರುವಾಯನಕೆರೆ, ಬದುಕು ಕಟ್ಟೋಣ ಬನ್ನಿ ತಂಡದ ಮೋಹನ್ ಲಕ್ಷ್ಮಿ ಗ್ರೂಪ್ ಮತ್ತು ರಾಜೇಶ್ ಪೈ ಉಜಿರೆ ಸಂದ್ಯಾ ಟ್ರೇಡರ್ಸ್, ಬೆಳ್ತಂಗಡಿ ರೋಟರಿ ಕ್ಲಬ್ ಅಧ್ಯಕ್ಷ ಬಿ.ಕೆ. ಧನಂಜಯ್ ರಾವ್, ವಾಣಿ ವಿದ್ಯಾಸಂಸ್ಥೆಗಳ ಗೌರವಾಧ್ಯಕ್ಷ ಪದ್ಮ ಗೌಡ ಬೆಳಾಲು ಹಾಗೂ ಬೆಳ್ತಂಗಡಿ ವಕೀಲರ ಸಂಘದ ಅಧ್ಯಕ್ಷ ಅಲೋಶಿಯಸ್ ಲೋಬೊ ಮುಂತಾದ ಗಣ್ಯರನ್ನು ಸಂದರ್ಶಿಸಿ ಎಲ್ಲರ ಸೂಚನೆಗಳನ್ನು ಕೂಡ ಪಡೆದ ನಂತರ ಮಾತನಾಡಿದ ಶಾಸಕರು ತಾಲೂಕಿನಲ್ಲಿ ಕೊರೋನಾದ ವಿರುದ್ಧ ಹೋರಾಟವನ್ನು ಒಗ್ಗಟ್ಟಿನಿಂದ ಎದುರಿಸುವ ನಿಟ್ಟಿನಲ್ಲಿ ಎಲ್ಲಾ ಸಂಸ್ಥೆಗಳ, ಅಧಿಕಾರಿಗಳ ಮತ್ತು ಜನಸಾಮಾನ್ಯರ ಸಹಕಾರವನ್ನು ಕೋರುವುದಾಗಿ ಹೇಳಿದರು.