ಓಲಾ ಕ್ಯಾಬ್ ಮೂಲಕ ಮನೆ ಬಾಗಿಲಿಗೆ ಆಮ್ಲಜನಕ ಸಾಂದ್ರಕ |ಕಾರ್ಯಕ್ರಮಕ್ಕೆ ಡಿಸಿಎಂ ಅಶ್ವಥ್ ನಾರಾಯಣ್ ಚಾಲನೆ
ಆಮ್ಲಜನಕ ಕೊರತೆ ಎದುರಿಸುತ್ತಿರುವ ಕೋವಿಡ್ ಸೋಂಕಿತರ ಮನೆ ಬಾಗಿಲಿಗೆ ಓಲಾ ಕ್ಯಾಬ್ಗಳ ಮೂಲಕ ಆಮ್ಲಜನಕ ಸಾಂದ್ರಕಗಳನ್ನು (Oxygen Concentrator) ಒದಗಿಸುವ ವಿಶೇಷ ಕಾರ್ಯಕ್ರಮಕ್ಕೆ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವಥ್ ನಾರಾಯಣ್ ಇಂದು ಚಾಲನೆ ನೀಡಿದರು.
ಮೊದಲು ಬೆಂಗಳೂರಿನಲ್ಲಿ ಈ ವ್ಯವಸ್ಥೆ ಆರಂಭವಾಗುತ್ತಿದ್ದು, ಕ್ರಮೇಣ ರಾಜ್ಯಾದ್ಯಂತ ವಿಸ್ತರಣೆಯಾಗಲಿದೆ. ಈ ಕೆಲಸದಲ್ಲಿ ಸರಕಾರದ ಜತೆ ಗಿವ್ ಇಂಡಿಯಾ ಹಾಗೂ ಓಲಾ ಕ್ಯಾಬ್ ಕಂಪನಿಗಳು ಕೈಜೋಡಿಸಿವೆ. ಇಡೀ ರಾಜ್ಯದಲ್ಲಿಯೇ ಮೊತ್ತ ಮೊದಲಿಗೆ ಮಲ್ಲೇಶ್ವರ ವಿಧಾನಸಭೆ ಕ್ಷೇತ್ರದಲ್ಲಿ ಮನೆ ಬಾಗಿಲಿಗೆ ಆಮ್ಲಜನಕ ಸಾಂದ್ರಕಗಳನ್ನು ಒದಗಿಸುವ ಕೆಲಸವನ್ನು ನಾನು ಆರಂಭ ಆಗಿದ್ದು, ಅದಕ್ಕೆ ಉತ್ತಮ ಫಲಿತಾಂಶ ಸಿಕ್ಕಿತು. ಈಗ ಇಡೀ ಬೆಂಗಳೂರಿಗೆ ವಿಸ್ತರಿಸುತ್ತಿದ್ದು, ಅದಕ್ಕೆ ಓಲಾ ಸಹಕಾರ ನೀಡುತ್ತಿರುವುದು ಖುಷಿಯ ವಿಚಾರ ಎಂದರು.
ಈಗ ಹೋಮ್ ಐಸೋಲೇಷನ್ ಆಗಿರುವ ಯಾರೇ ಸೋಂಕಿತರಲ್ಲಿ ಆಮ್ಲಜನಕದ ಸ್ಯಾಚುರೇಶನ್ ಮಟ್ಟವು ಶೇ.94 ಗಿಂತ ಕಡಿಮೆ ಇದ್ದರೆ ಅಂಥವರಿಗೆ ಆಮ್ಲಜನಕ ಸಾಂದ್ರಕಗಳನ್ನು ನೀಡಲಾಗುವುದು. ಅವರು ಓಲಾ ಆಪ್ ಮೂಲಕ ಆನ್ಲೈನ್ನಲ್ಲಿ ಬೇಡಿಕೆ ಸಲ್ಲಿಸಿದ 30 ನಿಮಿಷದೊಳಗೆ ಅವರಿಗೆ ಈ ವ್ಯವಸ್ಥೆ ತಲುಪುತ್ತದೆ. ಸೋಂಕಿತರು 5,000 ರೂ. ಭದ್ರತಾ ಠೇವಣಿ (ಡಿಜಿಟಲ್ ಮೂಲಕ) ಇಟ್ಟು ಇವುಗಳನ್ನು ಪಡೆಯಬೇಕು. ಈ ಸಾಂದ್ರಕಗಳನ್ನು ವಾಪಸ್ ಪಡೆಯುವಾಗ ಈ ಮೊತ್ತವನ್ನು ಹಿಂದಿರುಗಿಸಲಾಗುವುದು. ಜೊತೆಗೆ ಸೋಂಕಿತರಿಗೆ ಈ ಯಂತ್ರವನ್ನು ಹೇಗೆ ಬಳಕೆ ಮಾಡಬೇಕು ಎಂಬುದನ್ನೂ ಹೇಳಿಕೊಡಲಾಗುವುದು ಎಂದು ಡಿಸಿಎಂ ಮಾಹಿತಿ ನೀಡಿದರು.
ಸದ್ಯಕ್ಕೆ 500 ಆಮ್ಲಜನಕ ಸಾಂದ್ರಕ ಮಾತ್ರ ಲಭ್ಯ ಇದೆ. ಮೂಲಕ ಈ ನೆಟ್ವರ್ಕ್ ಮಾಡಲಾಗಿದೆ. ಇಂದು ಮಲ್ಲೇಶ್ವರ ಮತ್ತು ಕೋರಮಂಗಲದಲ್ಲಿ ವಿದ್ಯುಕ್ತವಾಗಿ ಆರಂಭ ಮಾಡಲಾಗಿದೆ. ಕ್ರಮೇಣ ಮತ್ತಷ್ಟು ಪ್ರಮಾಣದಲ್ಲಿ ವಿಸ್ತರಣೆ ಮಾಡಲಾಗುವುದು. ಈ ಸೇವೆ ಸಂಪೂರ್ಣ ಉಚಿತವಾಗಿರುತ್ತದೆ. ಇದರ ಜೊತೆಯಲ್ಲೇ ಟೆಲಿಕನ್ಸಲ್ಟೆನ್ಸಿ ಕೊಡುವ ಚಿಂತನೆಯೂ ಇದೆ. ಅಗತ್ಯಬಿದ್ದರೆ ಅಂಥ ಸೋಂಕಿತರಿಗೆ ಔಷಧೋಪಾಚಾರವನ್ನೂ ಒದಗಿಸಲಾಗುವುದು ಎಂದು ಅವರು ಮಾಹಿತಿ ನೀಡಿದರು.
ಓಲಾ ಕಂಪನಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗೌರವ್ ಪೋರ್ವಾಲ್ ಮಾತನಾಡಿ, ಇಂತಹ ಸಂಕಷ್ಟ ಸಂದರ್ಭದಲ್ಲಿ ಸರ್ಕಾರದ ಜೊತೆ ಕೈಜೋಡಿಸಿ ಜನರ ಸೇವೆ ಮಾಡಲು ಅವಕಾಶ ಸಿಕ್ಕಿದ್ದು ನಮ್ಮ ಪುಣ್ಯ. ಈ ಯೋಜನೆಯನ್ನು ಬೆಂಗಳೂರು ಮಾತ್ರವಲ್ಲದೆ, ಇಡೀ ದೇಶದಲ್ಲಿ ವಿಸ್ತರಿಸಲಾಗುವುದು. 10,000 ಆಮ್ಲಜನಕ ಸಾಂದ್ರಕಗಳನ್ನು ಜನ ಬಳಕೆ ನೀಡುವ ಉದ್ದೇಶ ಇದೆ ಎಂದರು.