ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನಿಂದ ಪೊಲೀಸರಿಗೆ ಮಾಸ್ಕ್, ಸ್ಯಾನಿಟೈಸ್ ಹಸ್ತಾಂತರ
ಕೊರೋನ ವಾರಿಯರ್ಸ್ಗಳಾಗಿರುವ ಪೊಲೀಸ್ ಸಿಬ್ಬಂದಿಯ ಸುರಕ್ಷತೆಯ ದೃಷ್ಟಿಯಿಂದ ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ವತಿಯಿಂದ ಮಂಗಳೂರು ಕಮಿಷನರೇಟ್ ವ್ಯಾಪ್ತಿಯ ಪೊಲೀಸರಿಗೆ ಮಾಸ್ಕ್, ಸ್ಯಾನಿಟರ್ ಹಸ್ತಾಂತರಿಸಲಾಯಿತು.
ಮಂಗಳೂರಿನಲ್ಲಿರುವ ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಪ್ರಧಾನ ಕಚೇರಿಯಲ್ಲಿ ಬ್ಯಾಂಕ್ನ ಅಧ್ಯಕ್ಷ ಡಾ.ಎಂ.ಎನ್. ರಾಜೇಂದ್ರ ಕುಮಾರ್ ಅವರಿಂದ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಸಾಂಕೇತಿಕವಾಗಿ ಸ್ಯಾನಿಟೈಸರ್ ಹಾಗೂ ಮಾಸ್ಕ್ಗಳನ್ನು ಪಡೆದುಕೊಂಡರು.
ಮಂಗಳೂರು ನಗರ ವ್ಯಾಪ್ತಿಯ ಪ್ರತಿ ಠಾಣೆಗಳಿಗೆ ತಲಾ 5 ಲೀಟರ್ನಂತೆ ಸ್ಯಾನಿಟೈಸರ್ ಹಾಗೂ ಒಟ್ಟು 5000 ಮಾಸ್ಕ್ಗಳನ್ನು ಇಂದು ವಿತರಿಸಲಾಗಿದ್ದು, ಮುಂದೆ ಮತ್ತೆ 5000 ಮಾಸ್ಕ್ಗಳನ್ನು ಎಸ್ಸಿಡಿಸಿಸಿ ವತಿಯಿಂದ ವಿತರಿಸಲು ನಿರ್ಧರಿಸಲಾಗಿದೆ.
ಈ ಸಂದರ್ಭ ಪ್ರತಿಕ್ರಿಯಿಸಿದ ಕಮೀಷನರ್ ಎನ್. ಶಶಿಕುಮಾರ್ ಈ ಕೊಡುಗೆ ಪೊಲೀಸ್ ಸಿಬ್ಬಂದಿಗೆ ಅನುಕೂಲವಾಗಲಿದೆ ಎಂದರು.
ಕೊರೋನದ ಈ ಸಂದರ್ಭದಲ್ಲಿ ಬಹಳಷ್ಟು ಸಂಘ ಸಂಸ್ಥೆಗಳು ಈಗಾಗಲೇ ಪೊಲೀಸ್ ಇಲಾಖೆಗೆ ಹಲವಾರು ರೀತಿಯಲ್ಲಿ ಸಹಕಾರ ನೀಡುತ್ತಿ ದ್ದಾರೆ. ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ನಿಂದ ಇನ್ನಷ್ಟು ಸಮಾಜಮುಖಿ ಕಾರ್ಯ ಮುಂದುವರಿಯಲಿ ಎಂದು ಅವರು ಹೇಳಿದರು.
ಈ ಸಂದರ್ಭ ಡಿಸಿಪಿ ಹರಿರಾಂ ಶಂಕರ್, ಲೀಡ್ ಬ್ಯಾಂಕ್ ಮ್ಯಾನೇಜರ್ ಪ್ರವೀಣ್, ನಿರ್ದೇಶಕರಾದ ಶಶಿಕುಮಾರ್ ರೈ ಬಾಲ್ಯೋಟ್ಟು, ಬ್ಯಾಂಕ್ನ ಎಂಡಿ ರವೀಂದ್ರ ಬಿ., ಬ್ಯಾಂಕ್ ಸಲಹಾ ಸಮಿತಿಯ ವಕೀಲರಾದ ಎಂ.ಪಿ. ಕಿಣಿ, ಮಹಾಪ್ರಬಂಧಕ ಗೋಪಿನಾಥ್ ಭಟ್ ಉಪಸ್ಥಿತರಿದ್ದರು.
ಮಂಗಳೂರಿನ ಅಳಕೆಯ ಉಳ್ಳಾಲ ನರ್ಸಿಂಗ್ ಹೋಂನ್ನು ಸ್ಥಳೀಯ ಶಾಸಕರ ಕೋರಿಕೆಯ ಮೇರೆಗೆ ಅದನ್ನು ಮೂರು ತಿಂಗಳ ಮಟ್ಟಿಗೆ ಖರೀದಿಸಿ ಅದನ್ನು 50 ಹಾಸಿಗೆಗಳ ಸುಸಜ್ಜಿತ ಕೋವಿಡ್ ಕೇರ್ ಸೆಂಟರ್ ಆಗಿ ಸಜ್ಜುಗೊಳಿಸಲು ತೀರ್ಮಾನಿಸಿದೆ. ಈ ಸಲುವಾಗಿ ಈಗಾಗಲೇ ಆಸ್ಪತ್ರೆಗೆ ಭೇಟಿ ನೀಡಿ ಆಸ್ಪತ್ರೆಯನ್ನು ಎಸ್ಸಿಡಿಸಿಗೆ ಹಸ್ತಾಂತರಿಸುವ ಪ್ರಕ್ರಿಯೆ ನಡೆದಿದೆ. ಇದೇ ವೇಳೆ ನಗರಕ್ಕೆ ಕೋವಿಡ್ ರೋಗಿಗಳ ಸಾಗಾಟಕ್ಕೆ ಸಂಬಂಧಿಸಿ ಸುಸಜ್ಜಿತ ಆ್ಯಂಬುಲೆನ್ಸ್ ಉಚಿತವಾಗಿ ಒದಗಿಸಲಾಗುತ್ತಿದೆ ಎಂದು ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ನಿರ್ದೇಶಕರಾದ ದೇವಿಪ್ರಸಾದ್ ಶೆಟ್ಟಿ ಬೆಳಪು ಮಾಹಿತಿ ನೀಡಿದರು.