ಚಿಕಿತ್ಸೆಗೆಂದು ಆಸ್ಪತ್ರೆಗೆ ಹೋಗುತ್ತಿದ್ದ ವಾಹನಕ್ಕೆ ಪೊಲೀಸರಿಂದ ತಡೆ | ಸಕಾಲದಲ್ಲಿ ಚಿಕಿತ್ಸೆ ಸಿಗದೆ ಯುವತಿ ಮೃತ್ಯು | ಎಲ್ಲೆಡೆ ಕೇಳಿ ಬರುತ್ತಿದೆ ಆಕ್ರೋಶ !
ಎದೆನೋವು ಮತ್ತು ಉಸಿರಾಟದ ತೊಂದರೆಯೆಂದು ಕಾರ್ಕಳ ಸರಕಾರಿ ಆಸ್ಪತ್ರೆಗೆ ದಾಖಲಾದ ಮಹಿಳೆಯೊಬ್ಬರು ಮೃತಪಟ್ಟಿದ್ದು, ಪೊಲೀಸರ ನಿರ್ಲಕ್ಷ್ಯ ಮತ್ತು ಆಸ್ಪತ್ರೆಯಲ್ಲಿ ಸಕಾಲದಲ್ಲಿ ಚಿಕಿತ್ಸೆ ಲಭಿಸದೆ ಈ ಸಾವು ಸಂಭವಿಸಿದೆ ಎಂದು ಮೃತರ ಬಂಧುಗಳು ಆಪಾದಿಸಿದ್ದಾರೆ.
ಕಾರ್ಕಳ ತಾಲೂಕು ನಲ್ಲೂರು ಗ್ರಾಮದ ಪರಪ್ಪಾಡಿ ಮಂಜುಳಾ(38) ಎಂಬವರಿಗೆ ಸೋಮವಾರ ಬೆಳಗ್ಗೆ ಎದೆನೋವು ಕಾಣಿಸಿಕೊಂಡಿದ್ದರಿಂದ ಅವರನ್ನು ಕಾರ್ಕಳ ಸರಕಾರಿ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದ ವೇಳೆ ಬಜಗೋಳಿ ಸಮೀಪದ ಚೆಕ್ ಪೋಸ್ಟ್ನಲ್ಲಿ ಪೊಲೀಸರು ಲಾಕ್ಡೌನ್ ನೆಪವೊಡ್ಡಿ ವಾಹನವನ್ನು ತಡೆದು ವಾಪಸ್ ಕಳುಹಿಸಿದರು.
ಬಳಿಕ ಒಳರಸ್ತೆಯ ಮೂಲಕ ಕರೆದೊಯ್ದು ಆಸ್ಪತ್ರೆಗೆ ದಾಖಲಿಸಿದರು. ಪೊಲೀಸರಿಂದಾಗಿ ಮೊದಲೇ ತಡವಾಗಿದ್ದು, ಆಸ್ಪತ್ರೆಯಲ್ಲೂ ವೈದ್ಯರಿಲ್ಲ ಎಂಬ ಕಾರಣ ನೀಡಿದ್ದರಿಂದ ಮಂಜುಳಾರಿಗೆ ತಕ್ಷಣಕ್ಕೆ ಚಿಕಿತ್ಸೆ ಲಭಿಸಿಲ್ಲ.ಈ ಕಾರಣದಿಂದ ಮಂಜುಳಾ ಅವರು ಮೃತಪಟ್ಟಿರುವುದಾಗಿ ಮೃತರ ಸಂಬಂಧಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಾರ್ಕಳ ತಾಲೂಕಿನ ಬಜಗೋಳಿ ಸಮೀಪದ ಚೆಕ್ ಪೋಸ್ಟ್ನಲ್ಲಿ ಕರ್ತವ್ಯನಿರ್ವಹಿಸುತ್ತಿರುವ ಪೊಲೀಸರು ನಮ್ಮ ವಾಹನವನ್ನು ತಡೆದು ನಿಲ್ಲಿಸಿ, ಹಿಂದಿರುಗುವಂತೆ ಸೂಚಿಸಿದರು. ಆ ವೇಳೆ ಮಂಜುಳಾರಿಗೆ ತೀವ್ರ ಎದೆನೋವು ಇದೆ ಮತ್ತು ಉಸಿರಾಟದ ತೊಂದರೆಯಾಗುತ್ತಿದೆ. ಹೀಗಾಗಿ ಕಾರ್ಕಳ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದೇವೆ. ದಯವಿಟ್ಟು ಅವಕಾಶ ಕೊಡುವಂತೆ ಮನವಿ ಮಾಡಿಕೊಂಡೆವು. ಆದರೂ ಪೊಲೀಸರು ಅವಕಾಶ ನೀಡಲಿಲ್ಲ.
ಬೇಕಾದರೆ 108 ಆ್ಯಂಬುಲನ್ಸ್ ಗೆ ಕರೆ ಮಾಡಿ, ಅದರಲ್ಲಿ ಕರೆದುಕೊಂಡು ಹೋಗಿ, ಯಾವುದೇ ಕಾರಣಕ್ಕೂ ನಿಮ್ಮ ವಾಹನವನ್ನು ಬಿಡಲು ಸಾಧ್ಯವಿಲ್ಲ ಎಂದರು. ಆನಂತರ ನಾವು ಹಿಂದಿರುಗಿ ಬೇರೆ ಒಳರಸ್ತೆಯಾಗಿ ಕಾರ್ಕಳ ತಲುಪಿದೆವು. ಆಸ್ಪತ್ರೆಗೆ ಬರುವುದು ತಡವಾದ್ದರಿಂದಲೇ ಮಂಜುಳಾರನ್ನು ನಾವು ಕಳೆದುಕೊಂಡೆವು ಎಂದು ದುಃಖತಪ್ತ ಕುಟುಂಬಸ್ಥರು ಆರೋಪಿಸಿದ್ದಾರೆ.
ಅಕ್ಕ ಮೃತಪಟ್ಟಳೆಂದು ತಿಳಿದ ಆಕೆಯ ತಂಗಿಯ ಆಕ್ರಂದನ ಮುಗಿಲು ಮುಟ್ಟಿತು. ಅಕ್ಕನನ್ನು ತಾನು ನೋಡಬೇಕು ಎಂದು ಐಸಿಯು ಬಾಗಿಲು ಬಡಿದ ತಂಗಿ, ನನ್ನ ಅಕ್ಕನಿಗೆ ಯಾವುದೇ ತೊಂದರೆಯಿರಲಿಲ್ಲ. ಎದೆನೋವು ಕಾಣಿಸಿಕೊಂಡಿತ್ತಾದರೂ ಗಂಭೀರ ಸಮಸ್ಯೆಯಾಗಿರಲಿಲ್ಲ. ನಾವು ಮಾತನಾಡಿಕೊಂಡೇ ಬರುತ್ತಿದ್ದೆವು.
ಇಲ್ಲಿ ಬಂದರೆ ವೈದ್ಯರು ಸರಿಯಾಗಿ ಚಿಕಿತ್ಸೆ ನೀಡದೇ ಅಕ್ಕನನ್ನು ಕೊಂದೇ ಬಿಟ್ಟರು ಎಂದು ಗೋಗರೆದರು. ನನ್ನ ಅಕ್ಕನನ್ನು ನೋಡಲೇ ಬೇಕು. ನನ್ನ ಅಕ್ಕ ಜೀವಂತ ಇದ್ದಾಳೆ.
ನನ್ನನ್ನು ಒಳಗೆ ಬಿಡಿ ಎಂದು ಪರಿಪರಿಯಾಗಿ ಮಂಜುಳಾ ಅವರ ತಂಗಿ ಬೇಡುವ ದೃಶ್ಯ ಮನಕಲುಕುವಂತಿತ್ತು.
ಈ ಕುರಿತು ಎಲ್ಲೆಡೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದ್ದು,ವಸ್ತು ಸ್ಥಿತಿ ಅರಿಯದೆ ತುರ್ತು ಸೇವೆಗೂ ತಡೆಯೊಡ್ಡಿದ್ದರಿಂದ ಅಮಾಯಕ ಜೀವವೊಂದು ಬಲಿಯಾದಂತಾಗಿದೆ.