ನಾಳೆಯಿಂದ ಎರಡು ವಾರಗಳ ಲಾಕ್ ಡೌನ್, ದ.ಕ.ಜಿಲ್ಲಾಧಿಕಾರಿಯಿಂದ ಮಾರ್ಗ ಸೂಚಿ ಬಿಡುಗಡೆ | ಮದುವೆಗೆ 25 ಜನರಿಗೆ ಅವಕಾಶ, ಅವಶ್ಯ ಸೇವೆಗಳ ಅಂಗಡಿಗಳು ಬೆಳಗ್ಗೆ 6 ರಿಂದ 9 ರವರೆಗೆ
ಕರ್ನಾಟಕ ರಾಜ್ಯದಾದ್ಯಂತ ಮೆ.10ರಿಂದ ಬೆಳಿಗ್ಗೆ 6ರಿಂದ ಮೇ.24ರವರೆಗೆ ಬೆಳಿಗ್ಗೆ 6ರವರೆಗೆ ಲಾಕ್ ಡೌನ್ ಜಾರಿಯಲ್ಲಿರಲಿದೆ.
ಈ ಹಿನ್ನಲೆಯಲ್ಲಿ ದ.ಕ.ಜಿಲ್ಲಾಡಳಿತ ಮಾರ್ಗಸೂಚಿಯನ್ನು ಹೊರಡಿಸಿದ್ದು ಆಹಾರ, ದಿನಸಿ , ಹಣ್ಣುಗಳು ಮತ್ತು ತರಕಾರಿಗಳು ,ಮಾಂಸ ಮತ್ತು ಮೀನು ಮತ್ತು ಪ್ರಾಣಿಗಳ ಮೇವನ್ನು ವ್ಯಾಪಾರ ಮಾಡುವ ಅಂಗಡಿಗಳು ಬೆಳಿಗ್ಗೆ 6 ರಿಂದ ಬೆಳಿಗ್ಗೆ 9 ರವರೆಗೆ ಕಾರ್ಯಾಚರಿಸಲು ಅನುಮತಿ ನೀಡಿದೆ.
ಸ್ವತಂತ್ರ ಮದ್ಯದಂಗಡಿಗಳು ಮತ್ತು ಮಳಿಗೆಗಳಿಂದ
ಬೆಳಿಗ್ಗೆ 6 ರಿಂದ ಬೆಳಿಗ್ಗೆ 9 ರವರೆಗೆ ಮಾತ್ರ ಪಾರ್ಸಲ್ ಕೊಂಡುಹೋಗಲು ಅನುಮತಿಸಲಾಗಿದೆ.
ಬೆಳಿಗ್ಗೆ 9.00 ರಿಂದ ಬೆಳಿಗ್ಗೆ 10.00 ಗಂಟೆಯೊಳಗೆ ಎಲ್ಲಾ ಅಂಗಡಿಗಳನ್ನು ಮುಚ್ಚಿ ಮಾರಾಟಗಾರರು ಹಾಗೂ ಖರೀದಿದಾರರು ಅವರವರ ಮನೆಗೆ ತೆರಳತಕ್ಕದ್ದು , ಈ ಸಮಯದ ನಂತರ ಯಾವುದೇ ಮಾರಾಟಗಾರರು ಅಥವಾ ಖರೀದಿದಾರರು ಓಡಾಡುವುದು ಕಂಡುಬಂದಲ್ಲಿ ಅಂತಹವರ ವಾಹನಗಳನ್ನು ಮುಟ್ಟುಗೋಲು ಹಾಕಲಾಗುವುದು ಎಂದು ಆದೇಶದಲ್ಲಿ ತಿಳಿಸಿದೆ.
ಸಾರ್ವಜನಿಕ ವಿತರಣಾ ವ್ಯವಸ್ಥೆ ಯ ಅಂಗಡಿಗಳಿಗೆ ಬೆಳಿಗ್ಗೆ 6.00 ಗಂಟೆಯಿಂದ ಸಂಜೆ 6.00 ಗಂಟೆಯವರೆಗೆ ಅವಕಾಶವಿದೆ. ತಳ್ಳುವ ಗಾಡಿಗಳ ಮೂಲಕ ತರಕಾರಿ ಮತ್ತು ಹಣ್ಣುಗಳನ್ನು ಮಾರಾಟ ಮಾಡಲು ಅನುಮತಿಸಿದೆ , ಹಾಲಿನ ಬೂತ್‌ಗಳು ಮತ್ತು ಹಾಪ್ ಕಾಮ್ ಗಳು ಮಾತ್ರವೇ ಬೆಳಿಗ್ಗೆ 6.00 ಗಂಟೆಯಿಂದ ಸಂಜೆ 6.00 ಗಂಟೆಯವರೆಗೆ ಕಾರ್ಯಾಚರಿಸಲು ಅನುಮತಿಸಿದೆ.
ಹಾಲಿನ ಬೂತ್ ಗಳಲ್ಲಿ ಹಾಲನ್ನು ಹೊರತುಪಡಿಸಿ ಇತರೆ ಯಾವುದೇ ವಸ್ತುಗಳ ಮಾರಾಟಕ್ಕೆ ಅವಕಾಶವಿರುವುದಿಲ್ಲ ಮತ್ತು ಹಾಪ್ ಕಾಮ್ಸ್ ಗಳಲ್ಲಿ ಹಣ್ಣು ತರಕಾರಿಗಳನ್ನು ಮಾತ್ರ ಮಾರಾಟ ಮಾಡಲು ಅನುಮತಿಸಿದೆ. ಮದುವೆಗಳಿಗೆ ಸಂಬಂಧಿಸಿದಂತೆ ಹೊಸ ಮಾರ್ಗಸೂಚಿಯನ್ನು ಹೊರಡಿಸಿದೆ.
ಹತ್ತಿರದ ಸಂಬಂಧಿಗಳನ್ನು ಮಾತ್ರವೇ ಒಳಗೊಂಡು ಪೂರ್ವನಿಗದಿತ ಮದುವೆಗಳನ್ನು ಗರಿಷ್ಠ 25 ಜನರ ಪರಿಮಿತಿಗೊಳಪಟ್ಟು ಆಯಾ ಮನೆಯಲ್ಲಿ ಮದುವೆ ಷರತ್ತುಗಳಿಗೊಳಪಟ್ಟು ಸರಳವಾಗಿ ಆಯೋಜಿಸಲು ಅನುಮತಿಸಿದೆ. ಹಾಲ್, ಕಲ್ಯಾಣ ಮಂಟಪಗಳಲ್ಲಿ ಮದುವೆಗಳನ್ನು ನಡೆಸುವಂತಿಲ್ಲ.
ಮದುವೆ ಸಮಾರಂಭಗಳನ್ನು ಆಯೋಜಿಸುವವರು ಸಹಿಯುಳ್ಳ ಅರ್ಜಿಯೊಂದಿಗೆ ಮದುವೆ ಆಮಂತ್ರಣ ಪತ್ರಿಕೆ ಅಥವಾ ಇತರ ಯಾವುದೇ ಸಂಬಂಧಿತ ದಾಖಲೆಗಳನ್ನು ಲಗತ್ತಿಸಿ ಮಹಾನಗರ ಪಾಲಿಕೆ ಆಯುಕ್ತರು, ನಗರ ಸ್ಥಳೀಯ ಸಂಸ್ಥೆಗಳಲ್ಲಿ ಮುಖ್ಯಾಧಿಕಾರಿ, ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಪಿ.ಡಿ.ಓ.ಗಳಿಗೆ ಸಲ್ಲಿಸಿ ಪ್ರತೀ ಮದುವೆ ಸಮಾರಂಭಕ್ಕೆ 25 ಪಾಸ್ ಗಳನ್ನು ಮಾತ್ರ ನೀಡುವುದು .
ಪಾಸ್ ಗಳನ್ನು ಹೊಂದಿರುವವರು ಮಾತ್ರ ಮದುವೆ ಸಮಾರಂಭದಲ್ಲಿ ಭಾಗಿಯಾಗಲು ಅವಕಾಶವಿರುತ್ತದೆ ಮತ್ತು ಪಾಸ್ ಗಳನ್ನು ವರ್ಗಾಯಿಸುವಂತಿಲ್ಲ . ಮದುವೆ ಸಮಾರಂಭದಲ್ಲಿ ಭಾಗವಹಿಸುವವರು ಕೋವಿಡ್ ಮಾರ್ಗಸೂಚಿಯನ್ನು ಕಟ್ಟುನಿಟ್ಟಾಗಿ ಅನುಸರಿಸಲು ಸೂಚಿಸಲಾಗಿದೆ.
ಶವಸಂಸ್ಕಾರ, ಅಂತ್ಯಕ್ರಿಯೆ ಕೋವಿಡ್ ಸಮುಚಿತ ವರ್ತನೆಯನ್ನು ಅನುಸರಿಸಿಕೊಂಡು ಗರಿಷ್ಠ 5 ಜನರ ಪರಿಮಿತಿಗೊಳಪಟ್ಟು ಶವಸಂಸ್ಕಾರ, ಅಂತ್ಯಕ್ರಿಯೆಗಳನ್ನು ಅನುಮತಿಸಲಾಗಿದೆ ಎಂದು ಆದೇಶದಲ್ಲಿ ವಿವರಿಸಲಾಗಿದೆ.