ಪುಂಜಾಲಕಟ್ಟೆ | ಆಶಾ ಕಾರ್ಯಕರ್ತೆಗೆ ನಿಂದನೆ ಮತ್ತು ಕೊಲೆ ಬೆದರಿಕೆ ಆರೋಪ | ಇಬ್ಬರ ಬಂಧನ
ಕೊರೋನಾ ಕುರಿತು ಜಾಗೃತಿ ಮೂಡಿಸಲು ತೆರಳಿದ್ದ ಆಶಾ ಕಾರ್ಯಕರ್ತೆಯ ಮೇಲೆ ಹಲ್ಲೆ ಮತ್ತು ಕೊಲೆ ಬೆದರಿಕೆ ಹಾಕಿರುವ ಪ್ರಕರಣದಡಿ ಇಬ್ಬರನ್ನು ಬಂಧಿಸಿರುವ ಘಟನೆ ಬಂಟ್ವಾಳ ತಾಲೂಕಿನಲ್ಲಿ ನಡೆದಿದೆ.
ಬಂಟ್ವಾಳ ತಾಲೂಕಿನ ಸರಪಾಡಿ ಗ್ರಾಮದ ನಿವಾಸಿಗಳಾದ ಸಂದೀಪ್ ಮತ್ತು ಸಂತೋಷ ಬಂಧಿತ ಆರೋಪಿಗಳಾಗಿದ್ದಾರೆ. ಸರಪಾಡಿಯಲ್ಲಿ ಆಶಾ ಕಾರ್ಯಕರ್ತೆಯೊಬ್ಬರು ಕೊರೋನಾ ಪಾಸಿಟಿವ್ ಬಂದ ಮನೆಯ ಭೇಟಿ ಮಾಡಿ ಕೊರೋನಾ ಪಾಸಿಟಿವ್ ಬಂದ ವ್ಯಕ್ತಿಯ ಆರೋಗ್ಯ ವಿಚಾರಿಸಿಕೊಂಡು ಅವರಿಗೆ ಹೊರಗೆ ತಿರುಗಾಡದಂತೆ ತಿಳಿಸಿ ವಾಪಸ್ಸು ತಮ್ಮ ಮನೆ ಕಡೆ ಬರುತ್ತಿದ್ದರು. ಆಗ ದಾರಿ ಮಧ್ಯೆ ಸೋಂಕಿತೆಯ ಸಂಬಂಧಿಕರಾದ ಸರಪಾಡಿಯ ಸಂದೀಪ್ ಮತ್ತು ಸಂತೋಷ ಎಂಬ ವ್ಯಕ್ತಿಗಳು ಆಶಾ ಕಾರ್ಯಕರ್ತೆಯ ಜತೆ ವಾಗ್ವಾದಕ್ಕಿಳಿದು, ‘ ನನ್ನ ಅತ್ತೆಗೆ ಟೆಸ್ಟ್ ಮಾಡಿಸಿ ಪಾಸಿಟಿವ್ ಬರಿಸಿದ್ದೇ ನೀನು, ನಿನಗೆ ಪಾಸಿಟಿವ್ ಬರಿಸಿದರೆ ಬಾರಿ ಹಣ ಬರುತ್ತದೆ ‘ ಎಂದು ಹೇಳಿದ್ದಾರೆ ಮತ್ತು ಅವರ ಮೇಲೆ ಹಲ್ಲೆ ಮಾಡಲು ಮುಂದಾಗಿ ಕೊಲೆ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ.
ಆರೋಪಿಗಳ ವಿರುದ್ಧ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಐ.ಪಿ.ಸಿ ಕಲಂ 354, 506, 269, 270 ಮತ್ತು ಕಲಂ 5 [1] ಕರ್ನಾಟಕ ಸಾಂಕ್ರಾಮಿಕ ರೋಗಗಳ ಅಧಿನಿಯಮ 2020 ರಂತೆ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದಿರುತ್ತಾರೆ.