ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್; ಮಂಗಳೂರಿನಲ್ಲಿ ಆರು ಮಂದಿ ಬುಕ್ಕಿಗಳ ಬಂಧನ
ಮೊಬೈಲ್ ಆ್ಯಪ್‌ಗಳ ಮೂಲಕ ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ ಮಾಡುತ್ತಿದ್ದ ಆರೋಪದಲ್ಲಿ ಆರು ಮಂದಿ ಬುಕ್ಕಿಗಳನ್ನು ಮಂಗಳೂರು ನಗರ ಸಿಸಿಬಿ ಮತ್ತು ಇಕೊನಾಮಿಕ್ ಆ್ಯಂಡ್ ನಾರ್ಕೊಟಿಕ್ ಕ್ರೈಂ ಪೊಲೀಸರು ಬಂಧಿಸಿದ್ದಾರೆ.
ಸೋಮೇಶ್ವರ ಕುಂಪಲದ ವಿಕ್ರಂ, ಕೃಷ್ಣಾಪುರದ ಧನಪಾಲ್ ಶೆಟ್ಟಿ, ಮೂಲತಃ ರಾಜಸ್ಥಾನದ ಪ್ರಸ್ತುತ ಸುರತ್ಕಲ್‌ನಲ್ಲಿ ವಾಸವಾಗಿರುವ ಕಮಲೇಶ್, ಮುಂಬೈಯ ಹರೀಶ್ ಶೆಟ್ಟಿ, ಅಶೋಕ್ ನಗರದ ಪ್ರೀತೇಶ್ ಯಾನೆ ಪ್ರೀತಂ, ಉರ್ವ ಮಾರಿಗುಡಿಯ ಅವಿನಾಶ್ ಬಂಧಿತ ಆರೋಪಿಗಳು ಎಂದು ಪೊಲೀಸರು ತಿಳಿಸಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿದ ಮಂಗಳೂರು ನಗರ ಪೊಲೀಸ್ ಆಯುಕ್ತ ಶಶಿಕುಮಾರ್ ಈ ಬುಕ್ಕಿಗಳು ಬೇರೆಯವರ ಹೆಸರಿನಲ್ಲಿ ನಗರದ ಆಕ್ಸಿಸ್ ಬ್ಯಾಂಕ್, ಕರ್ಣಾಟಕ ಬ್ಯಾಂಕ್, ಎಚ್‌ಡಿಎಫ್‌ಸಿ ಬ್ಯಾಂಕ್‌ಗಳಲ್ಲಿ ಖಾತೆ ತೆರೆದು ಬಾಜಿದಾರರಿಂದ ಆನ್‌ಲೈನ್ ಮೂಲಕ ಬೆಟ್ಟಿಂಗ್ ಹಣವನ್ನು ಸಂಗ್ರಹಿಸುತ್ತಿದ್ದರು.
ಮೊದಲಿಗೆ ಆರೋಪಿ ಕುಂಪಲದ ವಿಕ್ರಂನನ್ನು ಎಪ್ರಿಲ್ 21ರಂದು ವಶಕ್ಕೆ ಪಡೆದು ವಿಚಾರಿಸಲಾಯಿತು. ಆತ ನೀಡಿದ ಮಾಹಿತಿಯಂತೆ ಎಪ್ರಿಲ್ 26ರಂದು ಕೃಷ್ಣಾಪುರದ ಧನಪಾಲ ಶೆಟ್ಟಿ ಮತ್ತು ರಾಜಸ್ಥಾನ ಮೂಲದ ಕಮಲೇಶ್‌ನನ್ನು ಬಂಧಿಸಿ ವಿಚಾರಣೆಗೊಳಪಡಿಸಲಾಯಿತು. ಎಪ್ರಿಲ್ 30ರಂದು ಪ್ರಮುಖ ಆರೋಪಿಗಳಾದ ಹರೀಶ್ ಶೆಟ್ಟಿ, ಪ್ರೀತೇಶ್ ಯಾನೆ ಪ್ರೀತಂ, ಅವಿನಾಶ್‌ರನ್ನು ವಿಶಾಖಪಟ್ಟಣದಲ್ಲಿ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಬಳಿಕ ಪೊಲೀಸ್ ಕಸ್ಟಡಿಗೆ ಪಡೆದು ತನಿಖೆ ಮುಂದುವರಿಸಲಾಯಿತು ಎಂದರು.
ಪ್ರಕರಣಕ್ಕೆ ಸಂಬಂಧಿಸಿ 20 ಬ್ಯಾಂಕ್ ಖಾತೆಗಳನ್ನು ಮುಟ್ಟುಗೋಲು ಹಾಕಿ 20 ಲಕ್ಷ ರೂ. ಮತ್ತು 3 ಲಕ್ಷ ರೂ. ನಗದು ಹಾಗೂ ಆನ್‌ಲೈನ್ ಗೇಮ್‌ಗಾಗಿ ಬಳಸುತ್ತಿದ್ದ 10 ಮೊಬೈಲ್ ಫೋನ್ ವಶಕ್ಕೆ ಪಡೆಯಲಾಗಿದೆ ಎಂದು ಶಶಿಕುಮಾರ್ ತಿಳಿಸಿದ್ದಾರೆ.
ಕಾರ್ಯಾಚರಣೆಯಲ್ಲಿ ಉಪ ಪೊಲೀಸ್ ಆಯುಕ್ತರಾದ ಹರಿರಾಂ ಶಂಕರ್ ಮತ್ತು ವಿನಯ ಗಾಂವ್ಕರ್, ಸಿಸಿಬಿ ಇನ್‌ಸ್ಪೆಕ್ಟರ್ ಮಹೇಶ್ ಪ್ರಸಾದ್, ನಾರ್ಕೊಟಿಕ್ ಕ್ರೈಂ ಠಾಣೆಯ ಎಸ್ಸೈ ಸತೀಶ್ ಎಂಪಿ ಮತ್ತು ಸಿಬ್ಬಂದಿ ವರ್ಗ ಪಾಲ್ಗೊಂಡಿತ್ತು.