ಮಂಡೆಕೋಲಿನಲ್ಲಿ ರಡ್ಮಂಡೆಯ ಹಾವು (ಇಡ್ತಲೆ ) ಕಳ್ಳ ಸಾಗಾಟಕ್ಕೆ ಯತ್ನ | ಐದು ‘ಮಂಡೆ ‘ಗಳ ಬಂಧನ !
ಕೇರಳದಿಂದ ಸುಳ್ಯ ಕಡೆಗೆ ಪ್ರಯಾಣಿಸುತ್ತಿದ್ದ ಕಾರಿನಲ್ಲಿ ಇಡ್ತಲೆ ಹಾವು ಮಾರಾಟ ಮಾಡಲು ಸಾಗಾಟ ಮಾಡುತ್ತಿದ್ದ ಐವರನ್ನು ಮಂಡೆಕೋಲು ಗ್ರಾಮದ ಮುರೂರು ರಾಜ್ಯ ಹೆದ್ದಾರಿಯಲ್ಲಿ ವಶಪಡಿಸಿಕೊಂಡ ಘಟನೆ ಮೇ.4 ರಂದು ವರದಿಯಾಗಿದೆ.
ಕೇರಳದ ಕಾಸರಗೋಡಿನಿಂದ ಸುಳ್ಯಕ್ಕೆ ಸ್ವಿಫ್ಟ್ ಕಾರಿನಲ್ಲಿ ಸುಮಾರು 8 ಕೆ.ಜಿ.ತೂಕದ ಇಡ್ತಲೆ ಹಾವನ್ನು ಸಾಗಿಸುತ್ತಿದ್ದಾಗ ಮುರೂರು ಚೆಕ್ ಪೋಸ್ಟ್ ಬಳಿ ವಾಹನ ತಪಾಸಣೆ ನಡೆಸುತ್ತಿರುವುದನ್ನು ಗಮನಿಸಿದ ಆರೋಪಿಗಳು ತಕ್ಷಣ ತಮ್ಮ ಕಾರನ್ನು ಅರಣ್ಯ ಪ್ರದೇಶದೊಳಗೆ ಚಲಾಯಿಸಿದನ್ನು ಗಮನಿಸಿದ ಪೋಲೀಸರ ತಂಡ ಅವರನ್ನು ಚೇಸ್ ಮಾಡಿ ನಿಲ್ಲಿಸಿ ಪರಿಶೀಲಿಸಿದ ಸಂದರ್ಭ ಹಾವನ್ನು ಮಾರಾಟ ಮಾಡುವ ಉದ್ದೇಶದಿಂದ ಕೊಂಡೊಯ್ಯುತ್ತಿರುವ ವಿಷಯ ಬೆಳಕಿಗೆ ಬಂದಿದೆ.
ಕಾರಿನಲ್ಲಿದ್ದ ಐವರನ್ನು ಪೋಲೀಸರು ವಶಕ್ಕೆ ಪಡೆದು ಕಾರಿನಲ್ಲಿದ್ದ ನೋಟ್ ಕೌಂಟಿಂಗ್ ಮೆಷಿನ್ ಹಾಗೂ 2 ಸ್ವಿಫ್ಟ್ ಕಾರನ್ನು ವಶಪಡಿಸಿಕೊಂಡು ಹೆಚ್ಚಿನ ತನಿಖೆಗಾಗಿ ಆರೋಪಿಗಳಾದ ಕೇರಳ ಪಯ್ಯನೂರಿನ ಜಬ್ಬಾರ್, ಅಶ್ರಫ್, ರಾಜೇಶ್, ರಮೇಶನ್, ಬಿಪಿನ್ ಎಂದು ಗುರುತಿಸಲಾಗಿದೆ.
ಪುತ್ತೂರು ಪೋಲೀಸ್ ಅರಣ್ಯ ಸಂಚಾರಿ ದಳದ ಅಧಿಕಾರಿಗಳಾದ ಎಸ್.ಐ.ಜಾನಕಿ, ಸುಂದರ ಶೆಟ್ಟಿ, ವಿಜಯ ಸುವರ್ಣ, ಉದಯ್ , ಸಂತೋಷ್, ಸರಸ್ವತಿ ಯವರು ಕಾರ್ಯಾಚರಣೆಯಲ್ಲಿದ್ದರು.