ನೇತ್ರಾವತಿಯ ಒಡಲಿಗೆ ಕಸ ಎಸೆದ ಸುಶಿಕ್ಷಿತರು | ಜಾಗೃತ ಪರಿಸರಾಸಕ್ತರ ಕ್ಷಿಪ್ರ ಕಾರ್ಯಾಚರಣೆಗೆ ಕಾರು ಸಮೇತ ಪೊಲೀಸ್ ಠಾಣೆಗೆ
ಇದೀಗ ನೇತ್ರಾವತಿ ನದಿಗೆ ಕಸ ಎಸೆದ ವ್ಯಕ್ತಿಗಳನ್ನು ಪತ್ತೆ ಹಚ್ಚುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ನೇತ್ರಾವತಿ ನದಿ ತೀರವನ್ನು ಮಾಲಿನ್ಯ ಮಾಡುವ ಕಾರ್ಯ ಕಳೆದ ಹಲವು ವರ್ಷಗಳಿಂದ ಎಗ್ಗಿಲ್ಲದೆ ನಡೆಯುತ್ತಿದೆ. ಅದರಲ್ಲೂ ರಾಷ್ಟ್ರೀಯ ಹೆದ್ದಾರಿ 66ರ ಆಡಂಕುದ್ರು ಬಳಿ ಇರುವ ನೇತ್ರಾವತಿ ಸೇತುವೆ ಜನರಿಗೆ ಕಸ, ತ್ಯಾಜ್ಯ ಎಸೆಯಲು ಅತ್ಯಂತ ಸುಲಭ ಜಾಗವಾಗಿತ್ತು. ನೇತ್ರಾವತಿ ಸೇತುವೆಯಲ್ಲಿ ಸರಣಿ ಆತ್ಮಹತ್ಯೆ ಬಳಿಕ ಸೇತುವೆಗೆ ಎತ್ತರದ ತಂತಿ ಬೇಲಿ ಹಾಕಿದ ಬಳಿಕ ಆತ್ಮಹತ್ಯೆ ಪ್ರಮಾಣ ಕಡಿಮೆಯಾದರೂ ಸೇತುವೆ ಮೂಲಕ ನದಿಗೆ ಕಸ ಎಸೆಯುವುದು ಮಾತ್ರ ಇನ್ನೂ ನಿಂತಿಲ್ಲ.
ಸಿಸಿಟಿವಿ ಇದ್ದರೂ ಇಲ್ಲೊಂದು ಕಾರಿನಲ್ಲಿ ಬಂದ ಸುಶಿಕ್ಷಿತರಂತೆ ಕಾಣುವ ಮಹಿಳೆಯರಿಬ್ಬರು ಕಸ ಎಸೆಯುವ ದೃಶ್ಯ ಹಿಂಬದಿಯಲ್ಲಿದ್ದ ಕಾರಿನಲ್ಲಿದ್ದ ಕ್ಯಾಮರದಲ್ಲಿ ಸೆರೆಯಾಗಿದ್ದು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಈ ಇಬ್ಬರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಜಾಲತಾಣದಲ್ಲಿ “ನಮ್ಮ ನೇತ್ರಾವತಿ ನಮ್ಮ ಜವಾಬ್ದಾರಿ’ ಸ್ಲೋಗನ್ ಮೂಲಕ ಅಕ್ರೋಶ ವ್ಯಕ್ತವಾಗಿದೆ.
ಬೆಂಗಳೂರು ನೋಂದಾಯಿತ ಕೆಂಪು ಕಾರಿನಲ್ಲಿ ಬಂದಿದ್ದ ಇಬ್ಬರು ಮಹಿಳೆಯರು ತ್ಯಾಜ್ಯವನ್ನೊಳಗೊಂಡ ಪ್ಲಾಸ್ಟಿಕ್ ಚೀಲವನ್ನು ತಂತಿ ಬೇಲಿ ಮೇಲಿನಿಂದ ನದಿಗೆ ಎಸೆಯುವ 15 ಸೆಕೆಂಡ್ಗಳ ದೃಶ್ಯ ಇದೀಗ ವೈರಲ್ ಆಗುತ್ತಿದೆ. ನೇತ್ರಾವತಿ ನದಿಗೆ ತ್ಯಾಜ್ಯ ಎಸೆಯುವವರ ವಿಡಿಯೋವನ್ನು ಸಂಬಂಧಿತ ಅಧಿಕಾರಿಗಳಿಗೆ ತಲುಪುವ ವರೆಗೆ ಶೇರ್ ಮಾಡಿ ಎಂದು ಸಾಮಾಜಿಕ ಜಾಲತಾಣದಲ್ಲಿ ಪರಿಸರಾಸಕ್ತರು ಮನವಿ ಮಾಡಿದ್ದರು.
ಈಗ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಕಸ ಎಸೆದವರನ್ನು ಪತ್ತೆ ಹಚ್ಚಿದ್ದಾರೆ. ಅವರನ್ನು ತಾನೆಗೆ ಕರೆಸಿಕೊಂಡು ಅಗತ್ಯ ಕ್ರಮ ಕೈಗೊಂಡಿದ್ದಾರೆ.
ಇಂದು ನೇತ್ರಾವತಿ ನದಿಗೆ ಬೆಂಗಳೂರು ನೋಂದಾಯಿತ ವಾಹನದಲ್ಲಿದ್ದ ಇಬ್ಬರು ಮಹಿಳೆಯರು ಕಸವನ್ನು ನದಿಗೆ ಯಾವುದೇ ಮುಲಾಜಿಯಿಲ್ಲದೆ ಎಸೆದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
ಈ ಕುರಿತು ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿ, ತಪಿತಸ್ಥರ ವಿರುದ್ಧ ಕ್ರಮಕೈಗೊಳ್ಳಲು ಆಗ್ರಹಿಸಿದ್ದರು. ಇದೀಗ ಮಂಗಳೂರು ಮಹಾನಗರ ಪಾಲಿಕೆಯ ಹಿರಿಯ ಆರೋಗ್ಯ ನಿರೀಕ್ಷಕರು ನೀಡಿದ ದೂರಿನ ಆಧಾರದ ಮೇಲೆ ಕಂಕನಾಡಿ ನಗರ ಪೋಲಿಸ್ ಠಾಣೆಯಲ್ಲಿ ವಾಹನವನ್ನು ವಶಕ್ಕೆ ಪಡೆದು ,ಕಾರಿನಲ್ಲಿದ್ದವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗಿದೆ.