ಉಪ್ಪಿನಂಗಡಿ : ಸ್ಟೇಟ್ ಬ್ಯಾಂಕ್ ಇಂಡಿಯಾದ ಎಟಿಎಂಗೆ ನುಗ್ಗಿದ ಕಳ್ಳತನಕ್ಕೆ ಯತ್ನ ಪ್ರಕರಣ | ಆರೋಪಿ ಸವಣೂರಿನ ಮಾಂತೂರಿನ ಸಮೀರ್ ಬಂಧನ

ಉಪ್ಪಿನಂಗಡಿಯ ಭಾರತೀಯ ಸ್ಟೇಟ್ ಬ್ಯಾಂಕ್‌ನ ಎಟಿಎಂಗೆ ಎ.28ರಂದು ಕಳ್ಳತನಕ್ಕೆ ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಸವಣೂರಿನ ಶಾಂತಿನಗರ ಮಾಂತೂರಿನ ಸಮಿರ್ ಯಾನೆ ಅಮ್ಮಿ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

ಎ.28ರಂದು ತಡರಾತ್ರಿ ೧೨ಗಂಟೆಯ ಬಳಿಕ ಈ ಘಟನೆ ನಡೆದಿದ್ದು, ಮುಸುಕುಧಾರಿ ಕಳ್ಳನೋರ್ವ ಇಲ್ಲಿನ ಪೃಥ್ವಿ ಕಾಂಪ್ಲೆಕ್ಸ್ ಲ್ಲಿರುವ ಎಟಿಎಂಗೆ ಆಗಮಿಸಿ, ಇಲ್ಲಿನ ಹಾಗೂ ಅದರ ಬಳಿಯಲ್ಲೇ ಇರುವ ಮುತ್ತೂಟ್ ಫೈನಾನ್ಸ್ ಸಿಸಿ ಕ್ಯಾಮರಾಗಳನ್ನು ಒಡೆದು ಹಾಕಿ ಒಳಪ್ರವೇಶಿಸಿದ್ದಾನೆ. ಈತನ ಈ ಕೃತ್ಯಗಳು ಸಮೀಪದ ಸಿಸಿ ಕ್ಯಾಮರಾಗಳಲ್ಲಿ ಸೆರೆಯಾಗಿತ್ತು.

ತರಕಾರಿ ಅಂಗಡಿಯಲ್ಲೂ ಕಳವು: ಬಸ್ ನಿಲ್ದಾಣದ ಬಳಿಯಲ್ಲಿ ಇಸಾಕ್ ಎಂಬವರಿಗೆ ಸೇರಿದ ತರಕಾರಿ ಅಂಗಡಿಗೂ ಕಳ್ಳ ನುಗ್ಗಿದ್ದು, ಅಂಗಡಿಯ ಸುತ್ತ ಇದ್ದ ಸುಮಾರು ೧೦ರಷ್ಟು ಬಲ್ಫ್ಗಳನ್ನು ಬಿಚ್ಚಿಸಿ ಅಂಗಡಿಯ ಎದುರು ರಾಶಿ ಹಾಕಿದ್ದಾನೆ. ಅಲ್ಲದೇ, ಅಂಗಡಿಯೊಳಗೆ ಇಟ್ಟಿದ್ದ ಅಳತೆ ಮಾಪಕವನ್ನು ಅಂಗಡಿಯ ಹೊರಗೆ ತಂದಿಟ್ಟಿದ್ದಾನೆಯಲ್ಲದೆ, ಅಂಗಡಿಯೊಳಗಿದ್ದ ಹರಕೆ ಡಬ್ಬಿಯಲ್ಲಿದ್ದ ಸುಮಾರು ಆರು ಸಾವಿರದಷ್ಟು ಹಣವನ್ನು ಕಳವುಗೈಯಲಾಗಿತ್ತು.

ಅಲ್ಲದೇ, ಪೃಥ್ವಿ ಕಾಂಪ್ಲೆಕ್ಸ್ ಹಿಂಬದಿಯಲ್ಲಿರುವ ಮುಹಮ್ಮದ್ ಕಮಾಲ್ ಎಂಬವರ ಮನೆಯೆದುರು ನಿಲ್ಲಿಸಿದ್ದ ಡಿಯೋ ದ್ವಿಚಕ್ರವಾಹನದ ಸೀಟಿನ ಅಡಿಯಲ್ಲಿಟ್ಟಿದ್ದ ಅವರ ವಾಹನದ ಕೀ, ವಾಹನದ ದಾಖಲೆ ಪತ್ರಗಳು ಮತ್ತು ಹೆಲ್ಮೆಟನ್ನು ಕದ್ದೊಯ್ದಿದ್ದನು.

ಇದೀಗ ಎಸ್ಪಿ ಸೋನಾವಣೆ ಋಷಿಕೇಶ್ ಅವರ ಮಾರ್ಗದರ್ಶನದಲ್ಲಿ ಎಡಿಷನಲ್ ಎಸ್ಪಿ ಭಾಸ್ಕರ ಒಕ್ಕಲಿಗ ಅವರ ನೇತೃತ್ವದಲ್ಲಿ ಪುತ್ತೂರು ಡಿವೈಎಸ್ಪಿ ಡಾ. ಗಾನ ಪಿ. ಕುಮಾರ್, ಪುತ್ತೂರು ಗ್ರಾಮಾಂತರ ವೃತ್ತ ನಿರೀಕ್ಷಕ ಉಮೇಶ್ ಉಪ್ಪಳಿಕೆ, ಉಪ್ಪಿನಂಗಡಿ ಠಾಣಾ ಪ್ರೊಬೆಷನರಿ ಎಸೈ ಅನೀಲ ಕುಮಾರ ಅವರ ತಂಡ ಆರೋಪಿಯನ್ನು ಬಂಧಿಸಿದ್ದಾರೆ‌.

Leave A Reply

Your email address will not be published.