ಮಾಸ್ಕ್ ಧರಿಸದಕ್ಕೆ 100 ರೂ. ದಂಡ ತೆರಲು ಅಧಿಕಾರಿಗಳೊಂದಿಗೆ ವಾಗ್ವಾದ | 2400 ರೂ. ಹೆಚ್ಚುವರಿ ದಂಡ ಕಟ್ಟಿಸಿಕೊಂಡ ಯುವಕ
ಕಡಬ: ಮಾಸ್ಕ್ ಧರಿಸದ್ದಕ್ಕೆ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದ ಯುವಕನೊಬ್ಬ 100 ರೂ. ದಂಡ ವಿಧಿಸಿದ್ದಕ್ಕೆ ಕೋವಿಡ್ ಕಾರ್ಯಪಡೆಯ ಅಧಿಕಾರಿಗಳೊಂದಿಗೆ ಅನುಚಿತವಾಗಿ ವರ್ತಿಸಿ ಕೊನೆಗೂ ದುಬಾರಿ ದಂಡ ತೆತ್ತು ತೆರಳಿದ ಘಟನೆ ಕಡಬದಲ್ಲಿ ನಡೆದಿದೆ.
ಬೈಕಿನಲ್ಲಿ ಹೆಲ್ಮೆಟ್ ಧರಿಸದೆ ಕಡಬಕ್ಕೆ ಆಗಮಿಸಿದ ಉಪ್ಪಿನಂಗಡಿಯ ಇರ್ಷಾದ್ ಎಂಬಾತ ಮಾಸ್ಕ್ ಕೂಡ ಹಾಕದೆ ಕಡಬದ ಪೆಟ್ರೋಲ್ ಬಂಕ್ ಒಂದರಲ್ಲಿ ಪೆಟ್ರೋಲ್ ಹಾಕಿಸುತ್ತಿದ್ದ.
ಈ ಸಂದರ್ಭ ಕೋವಿಡ್ ಕಾರ್ಯಪಡೆಯ ಅಧಿಕಾರಿ ಹರೀಶ್ ಬೆದ್ರಾಜೆಯವರು ಆತನನ್ನು ತಡೆದು ನಿಲ್ಲಿಸಿ 100 ರೂ. ದಂಡ ವಿಧಿಸಿದ್ದಾರೆ.
ಈ ವೇಳೆ ಯುವಕ ಅಧಿಕಾರಿಗಳೊಂದಿಗೆ ಗಲಾಟೆ ಮಾಡಿ ದುರ್ವರ್ತನೆ ತೋರಿದ್ದಾನೆ. ಗಲಾಟೆ ಮಾಡಿದ ಬಳಿಕ ಈತ ತನ್ನ ವಾಹನದೊಂದಿಗೆ ಹೊರಡಲು ಅನುವಾಗಿದ್ದಾನೆ. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಕಡಬ ಪೊಲೀಸ್ ಠಾಣಾಧಿಕಾರಿ ರುಕ್ಮ ನಾಯ್ಕ್ ಅವರು ಬೈಕನ್ನು ವಶಪಡಿಸಿಕೊಂಡು ಠಾಣೆಗೆ ತಂದು ಪರಿಶೀಲನೆ ಮಾಡಿದಾಗ ಈತನಿಗೆ ಡ್ರೈವಿಂಗ್ ಲೈಸೆನ್ಸ್, ಹೆಲ್ಮೆಟ್ ಯಾವುದೂ ಇಲ್ಲದ್ದು ತಿಳಿದು ಬಂದಿದೆ. ಇದರಿಂದಾಗಿ ಈತನಿಗೆ ಪರವಾನಗಿ ಇಲ್ಲದೆ ವಾಹನ ಚಾಲನೆ, ಹೆಲ್ಮೆಟ್ ಧರಿಸದೆ ವಾಹನ ಚಾಲನೆ ಸೇರಿದಂತೆ 2500 ರೂ. ದಂಡ ವಿಧಿಸಿದ್ದಾರೆ.
ಕೇವಲ 100 ರೂ. ಕೊಟ್ಟು ತೆರಳುವುದನ್ನು ಬಿಟ್ಟು ಈ ಯುವಕ ತನ್ನ ದುರಹಂಕಾರದಿಂದಾಗಿ 2500 ರೂ. ದಂಡ ಪಾವತಿಸಿ ಮನೆಗೆ ಹೋಗುವಂತಾಯಿತು.