ಭರದಿಂದ ಸಾಗುತ್ತಿದೆ ಹೊಸಮಠ ಹಳೇ ಸೇತುವೆ ತೆರವು ಕಾರ್ಯ..ದಶಕಗಳ ಇತಿಹಾಸವಿರುವ ಮುಳುಗು ಸೇತುವೆ ಇನ್ನು ಬರೀ ನೆನಪು..ಮುಳುಗು ಸೇತುವೆಯ ಮೇಲೊಂದು ನೋಟ
ತುಳುನಾಡಿನ ಹೆಸರಾಂತ ಮುಳುಗು ಸೇತುವೆ ಎಂದೇ ಪ್ರಸಿದ್ಧಿ ಪಡೆದ ಹೊಸ್ಮಠ ಮುಳುಗು ಸೇತುವೆ. ಉಪ್ಪಿನಂಗಡಿ-ಕಡಬ-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಹೊಸಮಠದಲ್ಲಿ ಗುಂಡ್ಯ ಹೊಳೆಗೆ ಅಡ್ಡಲಾಗಿ ಕಟ್ಟಿದ ಮುಳುಗು ಸೇತುವೆ.ಈ ಸೇತುವೆಯ ಪಕ್ಕದಲ್ಲೇ ಹೊಸ ಸೇತುವೆ ನಿರ್ಮಾಣವಾದ ಬಳಿಕ ಉಪಯೋಗಕ್ಕೆ ಬಾರದೇ ಇಂದು ಮುಳುಗು ಸೇತುವೆಯ ತೆರವು ಕಾರ್ಯ ಆರಂಭ ಗೊಂಡಿದೆ.ಅನೇಕ ಅನಾಹುತ, ಅನೇಕ ನೆನಪನ್ನು ಮರುಕಳಿಸುವ ಹಳೇ ಸೇತುವೆ (ಹೊಸ್ಮಠ ಸಂಕ)ಇನ್ನು ಬರೀ ನೆನಪು ಮಾತ್ರ.
ಆರು ದಶಕಗಳ ಇತಿಹಾಸವಿರುವ ಮುಳುಗು ಸೇತುವೆಯ ಮೇಲೊಂದು ನೋಟ :
ಸುಮಾರು ಆರು ದಶಕಗಳ ಇತಿಹಾಸವಿರುವ ಹೊಸ್ಮಠ ಮುಳುಗು ಸೇತುವೆ ಅನೇಕ ನೆನಪುಗಳನ್ನು ಮರುಕಳಿಸುತ್ತಿದೆ. ಮಳೆಗಾಲದಲ್ಲಿ ಅನೇಕ ಚಟುವಟಿಕೆಗಳಿಗೆ ತೊಂದರೆಯಾಗಿ ಕಾಡಿದ್ದ ದಶಕಗಳ ಇತಿಹಾಸವಿರುವ ಸೇತುವೆ ಇಂದು ತೆರವುಗೊಳಿಸುತ್ತಿದ್ದಾರೆ ಎಂದಾಗ ಹಿರಿಯ ತಲೆಮಾರಿನ ಜೀವಗಳು ನಮ್ಮ ಜೊತೆ ಕೆಲ ನೆನಪನ್ನು ಹಂಚಿಕೊಂಡಿದ್ದಾರೆ.ಮುಳುಗು ಸೇತುವೆ ನಿರ್ಮಾಣಕ್ಕೂ ಮೊದಲು ಇಲ್ಲಿ ಹೊಳೆ ದಾಟಲು ತೆಪ್ಪಗಳನ್ನು ಉಪಯೋಗಿಸುತ್ತಿದ್ದರು. ಆ ಕಾಲದಲ್ಲಿ ಮೈಸೂರು ರಾಜ್ಯ.1951-52ರಲ್ಲಿ ಸೇತುವೆ ನಿರ್ಮಾಣ ಮಾಡಬೇಕೆಂಬ ಬೇಡಿಕೆಯನ್ನು ಪರಿಗಣಿಸಿ ಸರ್ಕಾರ ಇಂಜಿನಿಯರ್ ಗಳನ್ನು ಸ್ಥಳ ಪರಿಶೀಲನೆಗೆ ಕಳುಹಿಸುತ್ತಾರೆ. ಬಂದ ಅಧಿಕಾರಿಗಳು ಅಲ್ಲೇ ಇದ್ದ ದಾರಿಹೋಕರನ್ನು ಕರೆದು ಮಳೆಗಾಲದಲ್ಲಿ ಎಷ್ಟೆತ್ತರ ನೀರು ಬರುತ್ತದೆ ಎಂದು ಪ್ರಶ್ನಿಸುತ್ತಾರೆ. ಆಗ ದಾರಿಹೋಕರು ಅಲ್ಲೇ ಇದ್ದ ಅಶ್ವತ್ತ ಮರವೊಂದರ ಅರ್ಧದಷ್ಟಕ್ಕೆ ಬರುತ್ತದೆ ಎಂದು ತಿಳಿಸಿದರು. ಅಷ್ಟು ಎತ್ತರದ ಸೇತುವೆ ನಿರ್ಮಿಸಲು ಆರ್ಥಿಕವಾಗಿ ದುಪ್ಪಟ್ಟು ಆಗಬಹುದೆಂದು ಮುಳುಗು ಸೇತುವೆ ನಿರ್ಮಿಸಲು ಯೋಜನೆ ರೂಪಿಸಲಾಯಿತು. ಅಂತೆಯೇ ಸೇತುವೆ ನಿರ್ಮಾಣವಾಗಿ 1954ರ ಮಳೆಗಾಲದಲ್ಲಿ ಉದ್ಘಾಟನೆಗೊಂಡಿತು. ಅಂದಿನ ಮೈಸೂರು ರಾಜ್ಯ ಲೋಕೋಪಯೋಗಿ ಮಂತ್ರಿ ಶ್ರೀ ಭಕ್ತವತ್ತ್ಸಲಂ ಮಳೆಗಾಲದಲ್ಲಿ ಮುಳುಗಡೆಯಾಗಿದ್ದ ಸೇತುವೆಯನ್ನು ಉದ್ಘಾಟಿಸಿದರು.
ಉದ್ಘಾಟನೆಗೊಂಡ ಸೇತುವೆ ಊರವರಿಗೆ, ಪ್ರಯಾಣಿಕರಿಗೆ ತುಂಬಾ ಅನುಕೂಲವಾಗಿತ್ತು.ಆ ಬಳಿಕ ಮಳೆಗಾಲದಲ್ಲಿ ಅನುಕೂಲಕ್ಕಿಂತ ಅನಾಹುತಗಳೇ ಹೆಚ್ಚಾಗತೊಡಗಿತ್ತು.ಅನೇಕ ಜೀವ ಬಲಿಯಾಯಿತು ಎಂದು ಇಂದಿಗೂ ಜನ ನೆನಪಿಸಿಕೊಳ್ಳುತ್ತಾರೆ.
ಅನೇಕ ಜೀವ ಬಲಿಪಡೆದ ಹೊಸಮಠ ಮುಳುಗು ಸೇತುವೆ ದೊಡ್ಡದೊಂದು ದಾಖಲೆಯನ್ನೇ ನಿರ್ಮಿಸಿದೆ. ಸುಬ್ರಹ್ಮಣ್ಯ ದಿಂದ ಪ್ರಯಾಣಿಕರನ್ನು ಹೊತ್ತು ಹೊರಟ ಬಸ್ಸು ಮುಳುಗಡೆಯಾಗಿದ್ದ ಸೇತುವೆಯಿಂದ ಪ್ರಯಾಣಿಸುವ ವ್ಯರ್ಥ ಪ್ರಯತ್ನ ಮಾಡಿ ನೀರಿನಲ್ಲಿ ಕೊಚ್ಚಿ ಹೋಗಿ ಓರ್ವ ಪ್ರಯಾಣಿಕ ಮೃತಪಟ್ಟಿದ್ದ. ಆ ಬಳಿಕ ಒಂದರ ಮೇಲೊಂದು ಪ್ರಕರಣಗಳು ನಡೆಯುತ್ತಲೇ ಹೋಯಿತು. ಪ್ರವಾಸಿ ಯುವಕರಿಬ್ಬರೂ ನೀರು ಪಾಲಾಗಿದ್ದರು, ತದನಂತರ ಅಡಿಕೆ ಸಸಿ ಸಾಗಿಸುವ ವಾಹನದ ನೆರೆಯ ಊರಿನ ಕೃಷಿಕರೊಬ್ಬರು ನೀರು ಪಾಲಾಗಿದ್ದರು.ಅದಲ್ಲದೇ ಶಾಲೆಯಿಂದ ಮನೆಗೆ ನಡೆದುಕೊಂಡು ಬರುವಾಗ ಸೇತುವೆ ಮೇಲೆ ಕಣ್ಣಮುಚ್ಚಾಲೆ ಆಟವಾಡಲು ಹೋಗಿ ಅದೇ ಊರಿನ ಇಬ್ಬರೂ ವಿದ್ಯಾರ್ಥಿನಿಯರು ನೀರುಪಾಲಾಗಿದ್ದರು. ಇನ್ನು ಅನೇಕ ಜನರು ಸೇತುವೆ ಮೇಲಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಇಂತಹ ಅನೇಕ ಸಂಗತಿಗಳನ್ನು ಊರಿನ ಜನ ಇಂದಿಗೂ ಮಾತನಾಡುತ್ತಿದ್ದಾರೆ ಎಂದರೆ ಸೇತುವೆಯ ಇತಿಹಾಸವಾದರೂ ಹೇಗಿರಬಹುದು.
ಮಳೆಗಾಲದಲ್ಲಿ ಎಲ್ಲಾ ಚಟುವಟಿಕೆಗಳಿಗೆ ಕಂಟಕವಾಗಿದ್ದ ಮುಳುಗು ಸೇತುವೆ ಅನೇಕ ಜನರ ಶಾಪ-ಕೋಪಕ್ಕೂ ಕಾರಣವಾಗಿದೆ ಎಂದರೆ ತಪ್ಪಾಗದು. ಪೇಟೆಗೆ ತೆರಳಿದ ಜನ, ಶಾಲೆಗೆ ತೆರಳಿದ ವಿದ್ಯಾರ್ಥಿ ಸಮೂಹ ಮರಳಿ ಸಂಜೆ ಮನೆಗೆ ಹಿಂದಿರುಗುವಾಗ ಸೇತುವೆ ಮುಳುಗಿರುತ್ತಿತ್ತು. ಈ ಸಂದರ್ಭದಲ್ಲಿ ಜನ ತೊಂದರೆಗೊಳಗಾಗುತ್ತಿದ್ದರು. ಬದಲಿ ಮಾರ್ಗವಿದ್ದರೂ, ವಾಹನವಿಲ್ಲ. ರಾತ್ರಿ ಹೊತ್ತು ಆದುದರಿಂದ ನೀರು ಕಡಿಮೆ ಆಗುವ ವರೆಗೂ ಸೇತುವೆ ಪಕ್ಕದಲ್ಲೇ ದುರುಗುಟ್ಟಿ ನೋಡುತ್ತಿರುವವರೊಂದು ಕಡೆಯಾದರೆ, ಬಸ್ಸ್ಟ್ಯಾಂಡ್, ಅಂಗಡಿಯ ಜಗಲಿಯಲ್ಲಿ ಮಲಗಿದವರು ಅದೆಷ್ಟೋ. ಕಳೆದ ಬಾರಿ ಸುಮಾರು ಒಂದುವಾರಗಳ ಕಾಲ ಮುಳುಗಡೆಯಾಗಿ ಬಾರೀ ಸುದ್ದಿಯಾಗಿತ್ತು. ಜನ ತೊಂದರೆ ಅನುಭವಿಸಲು ಕಾರಣವಾಗಿತ್ತು.ಈ ಮುಳುಗು ಸೇತುವೆ ನಿರ್ಮಾಣ ಸಮಯದಲ್ಲಿ ಕೆಲಸಕ್ಕೆ ಹೋಗಿದ್ದ ಈ ಪರಿಸರದ ಕೆಲ ಹಿರಿಯರು ಇಂದಿಗೂ ಹೊಸಮಠ ಸಂಕ ಕಟ್ಟಿದ ಕಥೆಯನ್ನು, ಖುಷಿಯಿಂದ ಹಂಚಿಕೊಳ್ಳುತ್ತಿದ್ದಾರೆ.
ಅಂತೂ ಕಳೆದ 2-3 ವರ್ಷಗಳ ಹಿಂದೆ ಮುಳುಗು ಸೇತುವೆಯ ಪಕ್ಕದಲ್ಲೇ ಹೊಸ ಸೇತುವೆ ನಿರ್ಮಾಣವಾಗಿ ಎಲ್ಲಾ ತೊಂದರೆಗಳಿಗೆ ತೆರೆ ಎಳೆದು ಜನ ನಿಟ್ಟುಸಿರು ಬಿಡುವಂತಾಯಿತು. ಮುಳುಗು ಸೇತುವೆಯಾದ ಹಳೇ ಸೇತುವೆಗೆ 6 ದಶಕಗಳ ಇತಿಹಾಸವಿದೆ. ಅನೇಕ ಮರುಕಳಿಸುವ ನೆನಪುಗಳಿವೆ, ಕಹಿ ಘಟನೆಗಳಿವೆ. ಮುಂದಿನ ತಲೆಮಾರಿಗೆ ಹಳೇ ಸೇತುವೆ (ಮುಳುಗು ಸೇತುವೆ)ಬರೀ ನೆನಪು ಮಾತ್ರ. ಆ ನೆನಪನ್ನು ನೆನಪಿಸುವ ಸಣ್ಣ ಪ್ರಯತ್ನ.
ಬರಹ :✍️ದೀಪಕ್ ಹೊಸ್ಮಠ