ಗ್ರಾಮೀಣ ಭಾಗದ ಜನರಿಗೆ ಶುದ್ಧ ಕುಡಿಯುವ ನೀರು ಪೂರೈಕೆಗೆ ಆದ್ಯತೆ: ಜಿಪಂ ಸಿಇಒ ಡಾ.ಕುಮಾರ್

ಮಂಗಳೂರು : ದ.ಕ. ಜಿಲ್ಲೆಯಲ್ಲಿ ಗ್ರಾಮೀಣ ಭಾಗದ ಜನರಿಗೆ ಶುದ್ಧ ಕುಡಿಯುವ ನೀರು ಪೂರೈಕೆ ಮಾಡಲು ಜಲ ಜೀವನ್ ಮಿಷನ್ ಯೋಜನೆಯಡಿ ಬಹು ಗ್ರಾಮ ಕುಡಿಯುವ ನೀರಿನ ಯೋಜನೆಗಳ ಸಹಿತ ನಳ್ಳಿ ನೀರಿನ ಸಂಪರ್ಕ ಕಲ್ಪಿಸುವ ಕಾಮಗಾರಿಗಳನ್ನು ಕೈಗೊಳ್ಳಲಾಗುವುದು ಎಂದು ಜಿಪಂ ಸಿಇಒ ಡಾ. ಕುಮಾರ್ ತಿಳಿಸಿದರು.

ದ.ಕ.ಜಿ.ಪಂ.ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದ ಜಿಲ್ಲಾ ನೀರು ಮತ್ತು ನೈರ್ಮಲ್ಯ ಮಿಷನ್ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಕಳೆದ ಸಾಲಿನಲ್ಲಿ ಶುದ್ಧ ಕುಡಿಯುವ ನೀರು ಗ್ರಾಮೀಣ ಭಾಗದ 53,774 ಮನೆಗಳಿಗೆ ನಳ್ಳಿ ನೀರಿನ ಸಂಪರ್ಕ ಕಾಮಗಾರಿಗಳನ್ನು ಕೈಗೊಳ್ಳಲು 149 ಕೋ.ರೂ. ಮಂಜೂರಾಗಿ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತದೆ. ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಸುಸ್ಥಿರ ನೀರಿನ ಮೂಲಗಳು, ಡ್ಯಾಮ್‌ಗಳು ಹಾಗೂ ವರ್ಷಪೂರ್ತಿ ನೀರಿನ ಲಭ್ಯತೆ ಹೊಂದಿರುವ ಭಾಗಗಳನ್ನು ಗುರುತಿಸುವುದರೊಂದಿಗೆ ಹೊಸ 7 ಬಹುಗ್ರಾಮ ಕುಡಿಯುವ ನೀರಿನ ಯೋಜನೆಯನ್ನು 450 ಕೋ. ರೂ. ವೆಚ್ಚದಲ್ಲ್ಲಿ ಕೈಗೊಂಡು ನಂತರ 2023-24ನೇ ಸಾಲಿನಲ್ಲಿ 32 ಸಾವಿರ ಮನೆಗಳಿಗೆ ನಳ್ಳಿ ಸಂಪರ್ಕ ಕಲ್ಪಿಸುವ ಕಾಮಗಾರಿಗಳನ್ನು ಕೈಗೊಳ್ಳಲಾಗುವುದು ಎಂದರು.

ಅಂತರ್ಜಲವನ್ನು ಹೆಚ್ಚಿಸಲು ಮಹಾತ್ಮಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿ ಜಲ ಪೂರ್ಣ ಘಟಕಗಳ ಅಭಿವೃದ್ಧಿ, ಕಲ್ಯಾಣಿ ಮತ್ತು ಕೆರೆಗಳ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದ ಅವರು ಸರಕಾರಿ ಕಟ್ಟಡಗಳ ಸಹಿತ ಖಾಸಗಿ ಕಟ್ಟಡಗಳಲ್ಲಿ ಮಳೆನೀರು ಕೊಯ್ಲು ಘಟಕಗಳನ್ನು ಸ್ಥಾಪಿಸಿ ನೀರನ್ನು ಇಂಗಿಸುವುದರಿಂದ ಅಂತರ್ಜಲ ವೃದ್ಧಿಸಲು ಸಾಧ್ಯವಾಗುತ್ತದೆ. ಇದಕ್ಕೆ ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದರು.

ಸಭೆಯಲ್ಲಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಕಾರ್ಯನಿರ್ವಾಹಕ ಇಂಜಿನಿಯರ್ ನರೇಂದ್ರ ಬಾಬು, ಸಮಗ್ರ ಗಿರಿಜನ ಅಭಿವೃದ್ಧಿ ಯೋಜನಾ ಇಲಾಖೆಯ ಯೋಜನಾ ನಿರ್ದೇಶಕಿ ಹೇಮಲತಾ ಬಿ.ಎಸ್, ಜಂಟಿ ಕೃಷಿ ನಿರ್ದೇಶಕಿ ಸೀತಾ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಸಹಾಯಕ ಇಂಜಿನಿಯರ್ ಗೋಪಿ ಆರ್. ಮತ್ತಿತರರು ಉಪಸ್ಥಿತರಿದ್ದರು.

1 Comment
  1. Zubair says

    ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ನರಿಮೊಗರು ಗ್ರಾಮದ ವಾರ್ಡ್ ನಂಬರ್ 1 ರಲ್ಲಿ ಮನೆ ಮನೆಗೆ ಗ್ರಾಮ ಪಂಚಾಯತ್ ಕೊಡುತ್ತಿರುವ ಕುಡಿಯುವ ನೀರನ್ನು ಒಮ್ಮೆ ನೋಡಿ ಅದನ್ನ ನೀವುಗಳು ಕುಡಿಯಿರಿ ನೀವು ಕುಡಿದರೆ ಅದಕ್ಕೆನು ಸಮಸ್ಯೆ ಇಲ್ಲ ಎಂದು ಪರಿಗಣಿಸೊಣ ಇಲ್ಲವಾದಲ್ಲಿ ದಯವಿಟ್ಟು ಸ್ವಚ್ಛ ಯೋಗ್ಯವಾದ ಕುಡಿಯುವ ನೀರನ್ನು ಒದಗಿಸಿ….ಯಾಕೆಂದರೆ ಕಳೆದ ಎಷ್ಟೊ ವರುಷಗಳಿಂದ ಈ ವಾರ್ಡಿನ ಜನರು ಕುಡಿಯುತ್ತಿರುವ ನೀವು ಹಳದಿ ಬಣ್ಣದ್ದಾಗಿದೆ….ಅದರ ದಪ್ಪ ಕೂಡ ಪೈಂಟ್ ತರ ಇದೆ ಇದು ಪ್ರಾಣಿಗಳು ಕೂಡ ಕುಡಿಯಲು ಯೋಗ್ಯವಲ್ಲದ ನೀರಾಗಿದೆ…ದಯವಿಟ್ಟಯ ಮೊದಲು ಇಲ್ಲಿಗೆ ಬೇಟಿ ಕೊಡಿ ಗಮನ ಅರಿಸಿ….ಇದೇ ಊರಿಂದ ಬಿಂದು ಮಿನರಲ್ ವಾಟರ್ ದೇಶಾದ್ಯಂತ ಮಾರಟವಗುತ್ತದೆ ಆದರೆ ಈ ಊರಿನ ಜನರು ಕುಡಿಯುವ ನೀರು ಮಾತ್ರ ಹಳದಿ ಬಣ್ಣದ ಪೈಂಟ್ ರೀತಿಯದ್ದಾಗಿದೆ.

Leave A Reply

Your email address will not be published.