ಮಂಗಳೂರು ಕಮಿಷನರ್ ಶಶಿಕುಮಾರ್ ಅವರ ಮೇಲೆಯೇ ಜೈಲಿನಲ್ಲಿ ನಡೆಯಿತು ಮಾರಣಾಂತಿಕ ಹಲ್ಲೆ !
ಮಂಗಳೂರು ಕಮಿಷನರ್ ಶಶಿಕುಮಾರ್ ಅವರ ಮೇಲೆ ಜೈಲಿನಲ್ಲಿ ಮಾರಣಾಂತಿಕ ಹಲ್ಲೆ ನಡೆದ ಬಗ್ಗೆ ತಡವಾಗಿ ಕೆಲವು ವೆಬ್ ನ್ಯೂಸ್ ಸೈಟ್ ನಲ್ಲಿ ಇದು ವರದಿಯಾಗಿದೆ.
ಭಾನುವಾರ ಬೆಳಿಗ್ಗೆ ಮಂಗಳೂರು ಜಿಲ್ಲಾ ಕಾರಾಗ್ರಹದಲ್ಲಿ ಎರಡು ತಂಡಗಳ ನಡುವೆ ಮಾರಾಮಾರಿ ನಡೆದಿತ್ತು. ಹಾಗಾಗಿ ಹಿರಿಯ ಪೊಲೀಸರ ತಂಡ ಜೈಲಿಗೆ ಭೇಟಿ ನೀಡಿತ್ತು. ಘಟನೆ ತಿಳಿದ ತಕ್ಷಣ ಕಮಿಷನರ್ ಶಶಿಕುಮಾರ್, ಡಿಸಿಪಿ ಹರಿರಾಂ ಶಂಕರ್, ಇನ್ಸ್ ಪೆಕ್ಟರ್ ಜ್ಯೋತಿರ್ಲಿಂಗ ಅವರು ಜೈಲಿಗೆ ತೆರಳಿದ್ದರು.
ಕಮಿಷನರ್ ಅವರು ಕೈದಿಗಳನ್ನು ತಮ್ಮ ಎಂದಿನ ರಿಫಾರ್ಮ್ ಮಾಡುವ ವಿಧಾನದಲ್ಲಿ ವಿಚಾರಿಸಲು ಮುಂದಾಗಿದ್ದಾರೆ. ಸೆಲ್ ಒಳಗಡೆ ಹೋಗಿ ತೆರಳಿ ಸಮೀರ್ ಎಂಬಾತನನ್ನು ವಿಚಾರಣೆ ನಡೆಸಿದ್ದಾರೆ. ಈ ವೇಳೆ ಆರೋಪಿ ಸೇರಿ 15ಕ್ಕೂ ಅಧಿಕ ಮಂದಿಯ ತಂಡ ಕಮಿಷನರ್ ಮೇಲೆ ಹಲ್ಲೆ ನಡೆಸಿದೆ ಎನ್ನಲಾಗಿದೆ.
ಇದರಿಂದಾಗಿ ಕಮಿಷನರ್ ಮೂಗಿನಿಂದ ರಕ್ತ ಸುರಿದಿದೆ. ಘಟನೆಯಲ್ಲಿ ಜೈಲರ್ ಚಂದನ್ ಪಾಟೀಲ್ ಗೆ ಗಂಭೀರವಾದಂತಹ ಗಾಯಗಳಾಗಿದೆ. ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಘಟನೆ ಕುರಿತು ಎಡಿಜಿಪಿ ವಿವರಣೆಯನ್ನು ಕೇಳಿದ್ದಾರೆ ಎನ್ನಲಾಗಿದೆ.
ಹಲ್ಲೆಗೊಳಗಾದ ಕಮಿಷನರ್ ಅವರು ಕೂಡಲೇ ಸಿಬ್ಬಂದಿ ಮೂಲಕ ತನ್ನ ಯೂನಿಫಾರಂ ತರಿಸಿಕೊಂಡಿದ್ದಾರೆ. ಬಳಿಕ ಜೈಲ್ ಸೂಪರಿಂಡೆಂಟ್ ಕಚೇರಿಗೆ ತೆರಳಿ ಮುಖ ತೊಳೆದು ಸಮವಸ್ತ್ರವನ್ನು ಹಾಕಿ ಹೊರಬಂದಿದ್ದಾರೆ ಎಂದು ಜೈಲಿನ ಮೂಲಗಳು ತಿಳಿಸಿವೆ. ಈ ಬಗ್ಗೆ ಬರ್ಕೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿವರಣೆ ಕೇಳಿದ ಎಡಿಜಿಪಿ, ಆಯೋಗ:
ಜೈಲಿನಲ್ಲಿ ನಡೆದ ದಾಂಧಲೆ, ಪೊಲೀಸ್ ಕಮಿಷನರ್ ಶಶಿಕುಮಾರ್ ಅವರ ಮೇಲೆ ಹಲ್ಲೆ ನಡೆಸಿದ ಪ್ರಕರಣ ಸುದ್ದಿಯಾಗುತ್ತಿದ್ದಂತೆ ರಾಜ್ಯ ಕಾನೂನು ಸುವ್ಯವಸ್ಥಾ ವಿಭಾಗದ ಎಡಿಜಿಪಿ ಮತ್ತು ರಾಜ್ಯ ಬಂಧೀಖಾನೆ ವಿಭಾಗದ ಎಡಿಜಿಪಿಯವರು ಘಟನೆಯ ವರದಿ ಕೇಳಿದ್ದಾರೆ. ಇದು ಮಾತ್ರವಲ್ಲದೆ ಕಮಿಷನರ್ ಅವರಿಗೆ ಮಾನವ ಹಕ್ಕು ಆಯೋಗದ ಸದಸ್ಯರು ಕರೆ ಮಾಡಿ ಘಟನೆಯ ವಿವರ ಕೇಳಿದ್ದಾರೆ ಎನ್ನಲಾಗಿದೆ. ಆಸ್ಪತ್ರೆಯಲ್ಲಿ ಸಣ್ಣಪುಟ್ಟಚಿಕಿತ್ಸೆ ಪಡೆದ ಬಳಿಕ ಪೊಲೀಸ್ ಕಮಿಷನರ್ ಅವರು ಕೂಡಲೇ ಕರ್ತವ್ಯಕ್ಕೆ ಹಾಜರಾಗಿದ್ದರು.
ಈ ಹಿಂದೆಯೇ ಕಮಿಷನರ್ ಅವರಿಗೆ ಸೋಶಿಯಲ್ ಮೀಡಿಯಾ ಎಚ್ಚರಿಸಿತ್ತು. ನಿಮ್ಮ ಸ್ಮೂತ್ ಕಾರ್ಯಶೈಲಿ ಇಲ್ಲಿಯ ಕೆಲವರಿಗೆ ನಡೆಯುವುದಿಲ್ಲ. ಖಡಕ್ ಖಾಕಿ ಖದರು ಮಾತ್ರ ಇಲ್ಲಿಯ ಕಾನೂನು ಮೀರುವವರಿಗೆ ಬೇಕಾಗುತ್ತದೆ ಎಂದು ಹೇಳಿತ್ತು. ಕಮಿಷನರ್ ಅವರ ಮೇಲೆಯೇ ಈ ರೀತಿ ಹಲ್ಲೆಗಳು ಉಂಟಾದರೆ ಜನಸಾಮಾನ್ಯರ ಪಾಡೇನು ಎಂಬುದು ಈಗ ಉಳಿದಿರುವ ಪ್ರಶ್ನೆ.