ತನ್ನ ಕೋಳಿ ಮೊಟ್ಟೆ ಇಡಲಿಲ್ಲ ಎಂದು ಪೊಲೀಸ್ ಠಾಣೆಗೆ ಕಂಪ್ಲೇಂಟ್ ಕೊಟ್ಟ ವ್ಯಕ್ತಿ, ಮುಂದೇನಾಯ್ತು ?!

Share the Article

ಬೇರೆಯವರಿಂದ ಮೋಸ ಹೋದಾಗ, ಕಳ್ಳತನ ಅಥವಾ ಅಪಘಾತ ಮುಂತಾದುವುಗಳು ಆದಾಗ ಪೊಲೀಸ್ ಠಾಣೆಯ ಮೆಟ್ಟಿಲೇರುವುದು ಸಹಜ. ಆದರೆ ಇಲ್ಲೊಬ್ಬ ತಾನು ಸಾಕಿರುವ ಕೋಳಿ ಮೊಟ್ಟೆ ಇಟ್ಟಿಲ್ಲ ಎನ್ನುವ ಕಾರಣಕ್ಕೆ ಪೊಲೀಸ್ ಠಾಣೆಗೆ ಕಂಪ್ಲೇಂಟ್ ಕೊಟ್ಟಿದ್ದಾನೆ!. ಕೇಳಲು ವಿಚಿತ್ರವೆನಿಸಿದರೂ ಇದು ಮಹಾರಾಷ್ಟ್ರದ ಪುಣೆಯಲ್ಲಿ ನಡೆದ ನೈಜ ಘಟನೆ.

ವ್ಯಕ್ತಿಯೊಬ್ಬ ತನ್ನ ಸಾಕಾಣಿಕಾ ಕೇಂದ್ರದ ಕೋಳಿಗಳಿಗೆ ಕೋಳಿ ಆಹಾರ ಉತ್ಪಾದನಾ ಘಟಕದಿಂದ ಆಹಾರ ತಂದು ಹೊಟ್ಟೆ ತುಂಬಾ ತಿನ್ನಿಸಿದ್ದ. ಅದನ್ನು ತಿಂದ ನಂತರ ಕೋಳಿಯ ತೂಕ ಹೆಚ್ಚಾಯಿತೆ ವಿನಹ ಇಲ್ಲಿರುವ ಒಂದೇ ಒಂದು ಹೆಣ್ಣು ಕೋಳಿಯ ಹೊಟ್ಟೆಯಲ್ಲಿ ಮೊಟ್ಟೆ ಮೂಡಿಲ್ಲ. ಮೊಟ್ಟೆ ಇವತ್ತು ಇಡುತ್ತದೆ, ನಾಳೆ ಇಡುತ್ತದೆ ಎಂದು ಆ ಕುಕ್ಕುಟ ರೈತ ಕೋಳಿಗೂಡಿನಲ್ಲಿ ಕಾದದ್ದೇ ಬಂತು. ಒಂದೇ ಒಂದು ಕೋಳಿ ಕೂಡ ಮೊಟ್ಟೆಯನ್ನು ಹೊರಗಡೆ ಬಿಟ್ಟು ಕೊಟ್ಟಿಲ್ಲ!!

ಹಾಗಾಗಿ ಆ ರೈತ ವಿಧಿ ಇಲ್ಲದೆ ಆ ನಿರ್ದಿಷ್ಟ ಆಹಾರ ಉತ್ಪಾದನಾ ಕಂಪನಿಯ ವಿರುದ್ಧ ದೂರು ನೀಡಿದ್ದಾನೆ.

ಈ ಕುರಿತು ಪೊಲೀಸರು ಮತ್ತಷ್ಟು ಮಾಹಿತಿ ಕಲೆ ಹಾಕಿದಾಗ ಆ ಉತ್ಪಾದನ ಕಂಪೆನಿಯ ಆಹಾರವನ್ನು ಕೋಳಿಗಳಿಗೆ ನೀಡಿದ ಪರಿಣಾಮ ಇತರ ಕೋಳಿ ಸಾಕಾಣಿಕಾ ಕೇಂದ್ರದ ಮಾಲೀಕರ ಕೋಳಿಗಳು ಕೂಡ ಮೊಟ್ಟೆ ಇಟ್ಟಿಲ್ಲ ಎಂದು ತಿಳಿದುಬಂದಿದೆ. ಅವರು ಕೂಡ ಇದನ್ನೇ ಖಚಿತಪಡಿಸಿದ್ದಾರೆ.

ರೈತ ದೂರು ನೀಡಿದ್ದ ಬೆನ್ನಲ್ಲೇ, ಪೊಲೀಸರು ಅಹ್ಮದ್‌ ನಗರದ ಪಶುಸಂಗೋಪನಾ ಅಧಿಕಾರಿಯನ್ನು ಭೇಟಿ ಮಾಡಿದ್ದರು. ಆ ಆಹಾರವನ್ನು ಇನ್ನೊಮ್ಮೆ ಪರೀಕ್ಷೆ ಕೂಡ ಮಾಡಲಾಗಿದೆ. ಕೆಲವು ಆಹಾರಗಳು ನಿರ್ದಿಷ್ಟ ತಳಿಯ ಕೋಳಿಗಳಿಗೆ ಹೊಂದಾಣಿಕೆ ಆಗುವುದಿಲ್ಲ. ಇದೊಂದು ಸಾಮಾನ್ಯ ವಿದ್ಯಮಾನ ಎಂದು ಪಶುಸಂಗೋಪನಾ ಅಧಿಕಾರಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಅಷ್ಟೇ ಅಲ್ಲ, ಮೊದಲು ಯಾವ ಆಹಾರ ಕೊಡುತ್ತಿದ್ದೀರೋ, ಅದನ್ನೇ ಕೊಟ್ಟರೆ ಮತ್ತೆ ಮೊಟ್ಟೆ ಇಡುತ್ತವೆ ಎಂದೂ ಸ್ಪಷ್ಟವಾಗಿ ವಿವರಿಸಿದ್ದಾರೆ.

ಇನ್ನು ಘಟನೆಗೆ ಸಂಬಂಧಪಟ್ಟಂತೆ ಕಂಪನಿಯ ಮಾಲೀಕರನ್ನು ಸಂಪರ್ಕಿಸಿದಾಗ, ಅವರೂ ಸಹ ಅದೇ ಆಹಾರ ನೀಡಲು ಒಪ್ಪಿಕೊಂಡಿದ್ದಾರೆ. ಹಲವು ಕೋಳಿಸಾಕಾಣಿಕಾ ಕೇಂದ್ರದ ಮಾಲೀಕರು ಸಹ ದೂರು ನೀಡಿದ್ದಾಗಿ ಹೇಳಿಕೊಂಡಿದ್ದಾರೆ. ಹಾಗೇ ರೈತರಿಗಾದ ನಷ್ಟ ಪರಿಹಾರ ನೀಡಲೂ ಒಪ್ಪಿಕೊಂಡಿದ್ದಾರೆ.

ಒಟ್ಟಿನಲ್ಲಿ ರೈತನ ಈ ದೂರಿನಿಂದಾಗಿ ಒಂದು ಕ್ಷಣ ಪೊಲೀಸರು ಸಹ ಅಚ್ಚರಿಗೊಳಗಾಗಿದ್ದಾರೆ. ಆದರೆ ಯಾವುದೇ ಸಮಸ್ಯೆ ಎದುರಾಗದ ರೀತಿಯಲ್ಲಿ ಪ್ರಕರಣ ಅಂತ್ಯ ಕಂಡಿದ್ದು, ಹೀಗಾಗಿ ಪೊಲೀಸರು ಯಾವುದೇ  ಎಫ್‌ಐಆರ್ ದಾಖಲಿಸಿಕೊಳ್ಳದೆ ಚಾಣಾಕ್ಷತನದಿಂದ ಮಾತುಕತೆಯಲ್ಲಿ ಸಮಸ್ಯೆ ಬಗೆಹರಿಸಿ ಕೋಳಿಯ ಹೊಟ್ಟೆಯಲ್ಲಿ ಮತ್ತೆ ಮೊಟ್ಟೆ ಮೂಡುವಂತೆ ಮಾಡಿದ್ದಾರೆ!!

Leave A Reply

Your email address will not be published.