2550 ಮಂದಿ ಕೋವಿಡ್ ಸೋಂಕಿತರು ಹೋಂ ಐಸೊಲೇಶನ್ನಲ್ಲಿ ; ಬಿಕ್ಕಟ್ಟು ಎದುರಾದರೂ ಸಮರ್ಥವಾಗಿ ನಿರ್ವಹಿಸಲು ಜಿಲ್ಲಾಡಳಿತ ಸಿದ್ದ : ಡಾ.ಕೆ.ವಿ.ರಾಜೇಂದ್ರ
ಜಿಲ್ಲೆಯಲ್ಲಿ 2550 ಮಂದಿ ಕೋವಿಡ್ ಸೋಂಕಿತರು ಹೋಂ ಐಸೊಲೇಶನ್ನಲ್ಲಿದ್ದಾರೆ. 642 ಮಂದಿ ಆಸ್ಪತ್ರೆಯಲ್ಲಿ ದ್ದಾರೆ.
ಆಸ್ಪತ್ರೆಗಳಲ್ಲಿ ನಮ್ಮಲ್ಲಿರುವ 4800 ಬೆಡ್ಗಳಲ್ಲಿ 642 ಬೆಡ್ಗಳು ಮಾತ್ರ ಬಳಕೆಯಾಗಿವೆ. 15 ದಿನಗಳ ಬಳಿಕ ಜಿಲ್ಲೆಯಲ್ಲಿ ಇದೇ ರೀತಿ ಸೋಂಕಿತರ ಸಂಖ್ಯೆ ಹೆಚ್ಚಳಗೊಂಡು ಬಿಕ್ಕಟ್ಟು ಎದುರಾದರೂ ಸಮರ್ಥವಾಗಿ ನಿರ್ವಹಿಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದು ದ.ಕ. ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ತಿಳಿಸಿದ್ದಾರೆ.
ಮಂಗಳೂರಿಗೆ ಭೇಟಿ ನೀಡಿದ ದ.ಕ. ಮತ್ತು ಉಡುಪಿ ಜಿಲ್ಲೆಯ ಕೋವಿಡ್ ನಿರ್ವಹಣೆಯ ಪೊಲೀಸ್ ಮೇಲುಸ್ತುವಾರಿ ಹಾಗೂ ನೋಡಲ್ ಅಧಿಕಾರಿಯಾಗಿರುವ ಐಜಿಪಿ ಹೇಮಂತ್ ನಿಂಬಾಳ್ಕರ್ರವರು ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಪೊಲೀಸ್ ಆಯುಕ್ತರು ಸೇರಿ ದಂತೆ ಜಿಲ್ಲಾಡಳಿತದ ಅಧಿಕಾರಿಗಳ ಜತೆ ಕೋವಿಡ್ ನಿರ್ವಹಣೆ, ಕರ್ಫ್ಯೂ ಕುರಿತಂತೆ ಚರ್ಚೆ ನಡೆಸಿ ಮಾಹಿತಿಯನ್ನು ಪಡೆದರು. ಬಳಿಕ ಜಿಲ್ಲಾಧಿಕಾರಿ ಮಾಧ್ಯಮಗಳಿಗೆ ಈ ಮಾಹಿತಿಯನ್ನು ನೀಡಿದರು.ಪ್ರಸ್ತುತ ಜಿಲ್ಲೆಯಲ್ಲಿ ಯಾವ ರೀತಿಯಲ್ಲಿ ಕೋವಿಡ್ ನಿರ್ವಹಣೆ ಮಾಡಲಾಗುತ್ತಿದೆ. ಬೆಡ್ಗಳ ಸಂಖ್ಯೆ ಸೇರಿದಂತೆ ಸಮಗ್ರ ಮಾಹಿತಿಯನ್ನು ಪಡೆದುಕೊಳ್ಳುವ ಜತೆಗೆ ಸಮಸ್ಯೆ ಎದುರಾದಲ್ಲಿ ಹೇಗೆ ಬೆಡ್ಗಳನ್ನು ಕಲ್ಪಿಸುವುದು, ಯಾವ ರೀತಿ ಯೋಜನೆ ರೂಪಿಸಬೇಕೆಂದು ಐಜಿಪಿ ಹೇಮಂತ್ ನಿಂಬಾಳ್ಕರ್ ಮಾರ್ಗದರ್ಶನ ನೀಡಿದ್ದಾರೆ. ಅದನ್ನು ಕಾರ್ಯಗತಗೊಳಿಸ ಲಾಗುವುದು ಎಂದು ಜಿಲ್ಲಾಧಿಕಾರಿ ಡಾ. ರಾಜೇಂದ್ರ ಹೇಳಿದರು.
15 ದಿನಗಳ ಬಳಿಕ ಬಿಕ್ಕಟ್ಟಿನ ಪರಿಸ್ಥಿತಿ ಎದುರಾದಲ್ಲಿ ಅದನ್ನು ಎದುರಿಸಲು ಈಗಾಗಲೇ ಮಂಗಳೂರು ನಗರದಲ್ಲಿಯೇ ನಾಲ್ಕು ಕೋವಿಡ್ ಸೆಂಟರ್ಗಳನ್ನು ಗುರುತಿಸಲಾಗಿದೆ.
ಪ್ರತಿ ತಾಲೂಕಿನಲ್ಲಿ ಐದು ವೆಂಟಿಲೇಟರ್ಗಳ ಜತೆಗೆ ತಲಾ 25 ಹಾಸಿಗೆಗಳು, ಪ್ರತಿಯೊಂದು ಮೊರಾರ್ಜಿ ದೇಸಾಯಿ ಹಾಸ್ಟೆಲ್ಗಳಲ್ಲಿ ತಲಾ 50 ಹಾಸಿಗೆಗಳನ್ನು ತಯಾರು ಮಾಡಲು ಕ್ರಮ ವಹಿಸಲಾಗಿದೆ. ಬಳಿಕ ಮತ್ತೆ ಮುಂದಿನ ದಿನಗಳಲ್ಲಿ ಅಗತ್ಯ ಬಿದ್ದಲ್ಲಿ ಪ್ರತಿಯೊಂದು ಆಸ್ಪತ್ರೆ ಜತೆಗೆ ಒಂದೊಂದು ಲಾಡ್ಜ್ ಅಥವಾ ರೆಸ್ಟೋರೆಂಟ್ ಗಳನ್ನು ಒಗ್ಗೂಡಿಸಿಕೊಂಡು ಹಾಸಿಗೆಗಳನ್ನು ಹಾಕುವ ಕ್ರಮ ಕೈಗೊಳ್ಳಲಾಗುವುದು. ಸದ್ಯದ ಮಟ್ಟಿಗೆ ನಮ್ಮಲ್ಲಿ ಸಾಕಷ್ಟು ಹಾಸಿಗೆಗಳು ಲಭ್ಯವಿದೆ ಎಂದರು.
ನಾವೆಲ್ಲರೂ ಭಾರತೀಯರು. ನಮ್ಮಲ್ಲಿ ವೈದ್ಯಕೀಯ ಸೌಲಭ್ಯಗಳು ಸುಸಜ್ಜಿತವಾಗಿವೆ. ಹಾಗಾಗಿ ಬೇರೆ ಜಿಲ್ಲೆಗಳಿಂದ ಬರುವ ರೋಗಿಗಳು ಬರುವುದು ಸಹಜ. ನಮ್ಮ ಜಿಲ್ಲೆಯವರಿಗೆ ಆದ್ಯತೆಯೊಂದಿಗೆ ಸುರಕ್ಷತೆಯನ್ನು ಒದಗಿಸಲಾಗುವುದು. ನಮ್ಮ ಸೌಲಭ್ಯಗಳ ಮೂಲಕ ಇನ್ನೊಂದು ಜೀವ ಉಳಿಸುವಲ್ಲಿ ನಾವು ಸಹಕಾರ ನೀಡಲಿದ್ದೇವೆ. ಸದ್ಯಕ್ಕೆ ನಮಗೆ ಅಂತಹ ಯಾವುದೇ ತೊಂದರೆ ಇಲ್ಲ. ಮುಂದೆ ಆ ಬಗ್ಗೆ ಸಮಸ್ಯೆ ಎದುರಾದಲ್ಲಿ ನಾವು ಸರಕಾರದ ನಿರ್ದೇಶನದ ಪ್ರಕಾರ ಕಾರ್ಯ ನಿರ್ವಹಿಸಲಿದ್ದೇವೆ ಎಂದು ಪತ್ರಕರ್ತರ ಪ್ರಶ್ನೆಯೊಂದಕ್ಕೆ ಜಿಲ್ಲಾಧಿಕಾರಿ ಪ್ರತಿಕ್ರಿಯಿಸಿದರು.
ದ.ಕ. ಜಿಲ್ಲೆಯ ಜನರಿಂದ ಉತ್ತಮ ಸಹಕಾರಕಳೆದ ಒಂದೆರಡು ದಿನಗಳಲ್ಲಿ ಜನಸಾಮಾನ್ಯರಲ್ಲಿ ಕೆಲವೊಂದು ಗೊಂದಲವಿತ್ತು. ಆದರೆ ವೀಕೆಂಡ್ ಕರ್ಪ್ಯೂ ಬಗ್ಗೆ ಎಲ್ಲರಿಗೂ ಸ್ಪಷ್ಟತೆ ಇದ್ದ ಕಾರಣ ಜಿಲ್ಲೆಯಲ್ಲಿ ಉತ್ತಮ ಸಹಕಾರ ದೊರಕಿದೆ. ಅಧಿಕಾರಿಗಳಿಗೆ ಅತ್ಯಂತ ಸೂಕ್ಷ್ಮವಾಗಿ ವರ್ತಿಸುವಂತೆ ಸೂಚಿಸಲಾಗಿದೆ. ನಾಳೆ ಮತ್ತು ನಾಡಿದ್ದು ಪೂರ್ವ ನಿಗದಿತ ಸಾಕಷ್ಟು ಮದುವೆಗಳಿವೆ.
ಸಾಕಷ್ಟು ಸೂಚನೆಗಳನ್ನು ಅಧಿಕಾರಿಗಳಿಗೆ ನೀಡಲಾಗಿದೆ. ಸರಕಾರದ ಕರ್ಫ್ಯೂ ನಿರ್ದೇಶನಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಜತೆಗೆ ಜನರಿಗೆ ತೊಂದರೆ ಆಗದಂತೆ ಕ್ರಮ ವಹಿಸುವಂತೆ ಸೂಚಿಸಲಾಗಿದೆ. 50 ಜನಕ್ಕೆ ಮೀರದಿರುವಂತೆ ಪೂರ್ವನಿಗದಿತ ಮದುವೆಗೆ ಸ್ಥಳೀಯಾಡಳಿತಗಳಿಂದ ಅನುಮತಿಯನ್ನು ಪಡೆದು, ಆಹ್ವಾನಿತರ ಪಟ್ಟಿಯನ್ನು ಸ್ಥಳೀಯಾಡಳಿತ ಪ್ರಮಾಣೀಕರಿಸಿಕೊಂಡು ಐಡಿ ಕಾರ್ಡ್ ಹಾಗೂ ಆಹ್ವಾನ ಪತ್ರಿಕೆಯನ್ನು ತೋರಿಸಿದ್ದಲ್ಲಿ ಅನುಮತಿ ನೀಡಲು ಪೊಲೀಸ್ ಆಯುಕ್ತರು ನೀಡಿದ್ದಾರೆ. ಸರಕಾರದ ನಿರ್ದೇಶನದ ಪ್ರಕಾರ ಸದ್ಯಕ್ಕೆ ಪೂರ್ವ ನಿಗದಿತ ಮದುವೆ ಹಾಗೂ ಅಂತ್ಯ ಸಂಸ್ಕಾರಕ್ಕೆ 20 ಮಂದಿಯೊಂದಿಗೆ ಕಾರ್ಯಕ್ರಮಕ್ಕೆ ಮಾತ್ರ ಅವಕಾಶವಿದೆ ಎಂದು ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಸ್ಪಷ್ಟಪಡಿಸಿದ್ದಾರೆ.