ಕೋವಿಡ್ ನಲ್ಲಿ ಸತ್ತವರ ಹೆಣ ಸಂಸ್ಕಾರಕ್ಕೆ ನಾಯಿಗಳಂತೆ ಕಿತ್ತಾಡಿಕೊಂಡು 30,000 ರೂ. ಪೀಕಿದ್ರು- ಜಗ್ಗೇಶ್ ಕಿಡಿ ಕಿಡಿ
ಕೊರೋನಾ ಹಲವು ಸೆಲೆಬ್ರಿಟಿ ಕುಟುಂಬದವರಿಗೂ ಕಾಡಿದೆ. ಹೀಗಾಗಿ ಹೆಚ್ಚು ಜನ ಸಾಮಾಜಿಕ ಜಾಲತಾಣಗಳ ಮೂಲಕ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇವತ್ತಿನ ಸರದಿ ನಟ ಜಗ್ಗೇಶ್ ಅವರದು. ಅವರಿಂದು ಸರಣಿ ಟ್ವೀಟ್ ಮೂಲಕ ಕಿಡಿಕಾರಿದ್ದಾರೆ.
ಟ್ವೀಟ್ ಮಾಡಿರುವ ಅವರು, ನನ್ನ 2 – 3 ಜನ ಸ್ನೇಹಿತರಿಗೆ ಕೋವಿಡ್ ಬಂದು, ಇಬ್ಬರು ನಿನ್ನೆ, ಮೊನ್ನೆ ತೀರಿಹೋದರು. ಇನ್ನೂ 3 ಜನ ನರಳುತ್ತಿದ್ದಾರೆ. ಎಂತಹ ದರಿದ್ರ ಈ ಖಾಯಿಲೆ ಇದು. ಎದ್ದು ಹೋಗಿ ಸಹಾಯ ಮಾಡೋಣ ಎಂದರೂ ಆಗಲ್ಲ.
ನನ್ನ ಬಂಧುಗಳ ಹೆಣ ಸಂಸ್ಕಾರಕ್ಕೆ ನಾಯಿಗಳಂತೆ 30 ಸಾವಿರ ರೂ. ಹಣ ಪೀಕಿದ್ದಾರೆ. ಅಂಬುಲೆನ್ಸ್ ಹಾಗೂ ಸ್ಮಶಾನದವರನ್ನು ಹೋಗಿ ಚಪ್ಪಲಿಯಲ್ಲಿ ಹೊಡೆಯಬೇಕು ಅನ್ನಿಸಿತು. ಇಂಥವರಿಂದ ಸರ್ಕಾರಕ್ಕೆ ಕೆಟ್ಟ ಹೆಸರು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೋವಿಡ್ ಸಂತ್ರಸ್ತರು ಮುಂದೆ ಬಂದು ನೊಂದು ಟಿವಿಯಲ್ಲಿ ಮಾತಾಡಿದ್ದು ಕೇಳಿ ಸಂಕಟವಾಯಿತು. ಆಸ್ಪತ್ರೆ, ಅಂಬುಲೆನ್ಸ್, ಔಷಧಿ ಅಂಗಡಿ, ಸ್ಮಶಾನ ಕಾರ್ಯಕರ್ತರು ಹಣಕ್ಕಾಗಿ ದಯವಿಟ್ಟು ಸಾಯಬೇಡಿ. ನೊಂದವರ ಪೀಡಿಸಬೇಡಿ, ತಿನ್ನಲು ಅನ್ನ ಸಿಗದೆ ಸಾಯುತ್ತೀರಿ. ನೊಂದವರಿಗೆ ಭುಜ ಕೊಟ್ಟು ಸಹಾಯಮಾಡಿ, ಸತ್ತರೆ ಹಣ ಬರುವುದಿಲ್ಲ. ಪಾಪ, ಪುಣ್ಯ ಮಾತ್ರ ನಮ್ಮ ಹಿಂದೆ ಬರುವುದು. ದೇವನೊಬ್ಬನಿರುವ ಎಲ್ಲ ನೋಡುತಿರುವ ಎಂದು ನೋವು ಮತ್ತು ಅಸಹಾಯಕತೆಯನ್ನೂ ವ್ಯಕ್ತಪಡಿಸಿದ್ದಾರೆ.