ವೀಕೆಂಡ್ ಕರ್ಫ್ಯೂ: ಪುತ್ತೂರು ಸಂಪೂರ್ಣ ಬಂದ್
ಪುತ್ತೂರು: ಕೋವಿಡ್- 19 ನಿಯಂತ್ರಣದ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಜಾರಿಗೊಳಿಸಿದ ವೀಕೆಂಡ್ ಕರ್ಫ್ಯೂ ಶನಿವಾರ ಪುತ್ತೂರು ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ ಯಶಸ್ವಿಯಾಗಿದೆ.
ಬೆಳಗ್ಗೆ 6 ಗಂಟೆಯಿಂದ 10 ಗಂಟೆಗಳ ತನಕ ಅಗತ್ಯ ವಸ್ತುಗಳ ಖರೀದಿಗಳಿಗೆ ಸಾರ್ವಜನಿಕರಿಗೆ ಅವಕಾಶ ಕಲ್ಪಿಸಲಾಗಿತ್ತು. ಅಗತ್ಯ ವಸ್ತುಗಳಾದ ದಿನಸಿ, ಹಣ್ಣು, ತರಕಾರಿ, ಹಾಲು, ಬೇಕರಿ, ಮೆಡಿಕಲ್ ಶಾಪ್, ಪೇಪರ್ ಸ್ಟಾಲ್ ಗಳು ಬೆಳಗ್ಗಿನ ವೇಳೆಗೆ ತೆರೆದಿತ್ತು. 10 ಗಂಟೆಯ ಬಳಿಕ ಎಲ್ಲವೂ ಬಂದ್ ಅಗಿತ್ತು.
ಪ್ರತಿದಿನ ಬೆಳಗ್ಗಿನಿಂದ ರಾತ್ರಿಯ ತನಕ ಜನರ ಓಡಾಟ, ವಾಹನಗಳ ಓಡಾಟಗಳಿಂದ ತುಂಬಿರುತ್ತಿದ್ದ ಪುತ್ತೂರು ನಗರವು ಶನಿವಾರ ಮದ್ಯಾಹ್ನ ಜನ, ವಾಹನ ಸಂಚಾರವಿಲ್ಲದೆ ಬಿಕೋ ಅನ್ನುತ್ತಿತ್ತು.
ಕೆಎಸ್ಸಾರ್ಟಿಸಿ ಬಸ್ಸುಗಳು ಬಸ್ ನಿಲ್ದಾಣದಲ್ಲಿದ್ದರೂ ಪ್ರಯಾಣಿಕರು ಇಲ್ಲದ ಕಾರಣ ಓಡಾಟ ಸ್ಥಗಿತಗೊಳಿಸಲಾಗಿತ್ತು. ಪುತ್ತೂರು ಮಾರ್ಗ ವಾಗಿ ದೂರ ಊರುಗಳಿಗೆ ತೆರಳುವ ಬೆರಳೆಣಿಕೆಯ ಸರ್ಕಾರಿ ಬಸ್ಸುಗಳು ಓಡಾಟ ನಡೆಸುತ್ತಿತ್ತು. ಎಲ್ಲಾ ಪ್ರದೇಶದಲ್ಲಿ ಪೊಲೀಸರು ಬಿಗು ಬಂದೋಬಸ್ತು ನಡೆಸಿದ್ದರು.
10 ಗಂಟೆಯ ಬಳಿಕ ಆಗಮಿಸಿದ ವಾಹನಗಳನ್ನು ಪೊಲೀಸರು ತಪಾಸಣೆ ನಡೆಸಿ ಬಿಡುತ್ತಿದ್ದರು.
ಅನಗತ್ಯವಾಗಿ ಪೇಟೆಗೆ ಬಂದವರಿಗೆ ಎಚ್ಚರಿಕೆಯನ್ನೂ ಪೊಲೀಸರು ನೀಡಿದರು.ಕಳೆದ ಬಾರಿಯ ಲಾಕ್‌ಡೌನ್ ನಿಂದ ಬೇಸತ್ತ ಜನತೆ ಈ ಬಾರಿ ಸ್ವಯಂ ಪ್ರೇರಿತರಾಗಿ ಮನೆಯಲ್ಲೇ ಉಳಿದಿದ್ದಾರೆ.