ಲಾಕ್ ಡೌನ್ ಭೀತಿಯಿಂದ ಊರು ಸೇರಲು ಕೈಯಲ್ಲಿ ಹಣವಿಲ್ಲದೆ 600 ಕಿ.ಮೀ ನಡೆದರು !
ಇಬ್ಬರು ತಮ್ಮ ಬಳಿ ಹಣವಿಲ್ಲದ ಕಾರಣ ಬರೋಬ್ಬರಿ 600 ಕಿಲೋ ಮೀಟರ್ ದೂರ ಕಾಲ್ನಡಿಗೆಯಲ್ಲಿ ಸಾಗಿ, ಲಾಕ್ ಡೌನ್ ಆಗುವ ಮೊದಲು ಊರು ಸೇರುವ ತವಕದಲ್ಲಿದ್ದರು. ಬೆಂಗಳೂರಿನಿಂದ ಹೊರಟ ಅವರು ಮಧ್ಯಪ್ರದೇಶಕ್ಕೆ ತಲುಪಬೇಕಿತ್ತು.
ದಾರಿಯುದ್ದಕ್ಕೂ ರೈಲ್ವೆ ಟ್ರ್ಯಾಕ್ ಮೂಲಕ ಸಾಗಿ ಬೆಳಗಾವಿ ತಲುಪುವಾಗ ಅವರು ಒಟ್ಟು 600 ಕಿಲೋಮೀಟರ್ ದೂರವನ್ನು ಕ್ರಮಿಸಿದ್ದರು.
ಕಾಲ್ನಡಿಗೆ ಮೂಲಕ ಮಧ್ಯಪ್ರದೇಶಕ್ಕೆ ತೆರಳುತ್ತಿದ್ದ ಕಾರ್ಮಿಕರನ್ನು ದಿಂಡೋರಿ ಜಿಲ್ಲೆ ಪವನ್ ಧುರ್ವೆ ಹಾಗೂ ಅಜ್ವರ್ ರಿಯಾತ್ ಎಂದು ಗುರ್ತಿಸಲಾಗಿದೆ.
ಮಧ್ಯಪ್ರದೇಶದಿಂದ ಬೆಂಗಳೂರಿಗೆ ಬಂದಿದ್ದ ಇಬ್ಬರು ಕಾರ್ಮಿಕರು ಕೊರೋನಾ ಲಾಕ್ಡೌನ್ ಭೀತಿಯಿಂದಾಗಿ ಮರಳಿ ತಮ್ಮ ರಾಜ್ಯಕ್ಕೆ ತೆರಳಲು ಕಾಲ್ನಡಿಗೆ ಮೂಲಕ ಬೆಂಗಳೂರಿನಿಂದ ಬೆಳಗಾವಿವರೆಗೆ 600 ಕಿ.ಮೀ ನಡೆದಿದ್ದಾರೆ.
ಬೆಳಗಾವಿಯ ಗಾಂಧಿನಗರ ರೈಲ್ವೇ ಕ್ರಾಸಿಂಗ್ ಬಳಿಯಿದ್ದ ಗೇಟ್ ಮ್ಯಾನ್ ರಮೇಶ್ ಅವರು ಇಬ್ಬರು ಕಾರ್ಮಿಕರು ರೈಲು ಹಳಿಗಳ ಮೇಲೆ ನಡೆಯುತ್ತಿರುವುದನ್ನು ಗಮನಿಸಿದ್ದಾರೆ. ಈ ವೇಳೆ ಅವರನ್ನು ವಿಚಾರಿಸಿದಾಗ ತಮ್ಮ ಪರಿಸ್ಥಿತಿಯನ್ನು ವಿವರಿಸಿದ್ದಾರೆ. ಅವರು ರೈಲ್ವೇ ಹಳಿ ಪುಣೆ ಸಂಪರ್ಕಿಸುತ್ತದೆಯೇ ಎಂದು ಕೇಳಿದ್ದರು. ಆಗ ಗೇಟ್ ಮನ್ ಗೆ ಆ ಕಾರ್ಮಿಕರ ಪರಿಸ್ಥಿತಿ ಅರ್ಥವಾಗಿದೆ.
ಕಟ್ಟಡ ನಿರ್ಮಾಣ ಕಾರ್ಯಕ್ಕಾಗಿ ನಾವು ಬೆಂಗಳೂರಿಗೆ ಬಂದಿದ್ದೆವು. ನಮ್ಮೊಂದಿಗೆ ಕೆಲಸ ಮಾಡುತ್ತಿದ್ದ ನೌಕರನೊಬ್ಬ ಸಾವನ್ನಪ್ಪಿದ್ದ. ಇದಾದ ಬಳಿಕ ಮಾಲೀಕರ ನಮಗೆ ಹಲವು ವಾರಗಳಿಂದ ಕೂಲಿ ನೀಡಿರಲಿಲ್ಲ. ಬಳಿಕ ನಮ್ಮನ್ನು ಕೆಲಸದಿಂದಲೂ ತೆಗೆದು ಹಾಕಿದ್ದರು. ಹೀಗಾಗಿ ನಾವು ಮಹಾರಾಷ್ಟ್ರ ಮೂಲಕ ನಮ್ಮ ಮನೆಗಳಿಗೆ ತೆರಳಲು ನಿರ್ಧರಿಸಿ ಕಾಲ್ನಡಿಗೆ ಮೂಲಕ ತೆರಳುತ್ತಿದ್ದೇವೆಂದು ಹೇಳಿಕೊಂಡಿದ್ದಾರೆ.
ಬಳಿಕ ಅವರಿಗೆ ತಕ್ಷಣದ ಅಗತ್ಯವಾದ ನೀರು, ಆಹಾರ ನೀಡಿ ಕೂಡಲೇ ಸಹಾಯಕ್ಕಾಗಿ ಸಾಮಾಜಿಕ ಕಾರ್ಯಕರ್ತರಾದ ರವಿ ನಿರ್ಮಲ್ಕರ್, ಸಚಿನ್ ಕೆಲ್ವೇಕರ್ ಮತ್ತು ಸುಭಾಶ ಶೆಲ್ಕೆಯವರನ್ನು ಕರೆಯಲಾಗಿತ್ತು. ಬಳಿಕ ಕಾರ್ಯಕರ್ತರು ಕೇವಲ ಆಹಾರವಷ್ಟೇ ಅಲ್ಲದೆ, ಅವರಿಗೆ ಉಳಿದುಕೊಳ್ಳಲು ರೂಮಿನ ವ್ಯವಸ್ಥೆಯನ್ನೂ ಮಾಡಿದ್ದಾರೆ ಮತ್ತು ಅವರಿಗೆ ತಮ್ಮೂರು ಮಧ್ಯಪ್ರದೇಶಕ್ಕೆ ಸಾಗಲು ಬೇಕಾದ ಟಿಕೆಟ್ ಬುಕ್ ಮಾಡಿಕೊಟ್ಟಿದ್ದರು. ಬಳಿಕ ಕಾರ್ಮಿಕರನ್ನು ಶುಕ್ರವಾರ ಗೋವಾ ಎಕ್ಸ್ ಪ್ರೆಸ್ ಮೂಲಕ ಮಧ್ಯಪ್ರದೇಶಕ್ಕೆ ಕಳಿಸಿಕೊಡಲಾಗಿದೆ.