ಪುಣೆಯಿಂದ ಬಂದು ಕ್ವಾರಂಟೈನ್ ಆಗಿದ್ದ ಯುವಕ ನೇಣು ಬಿಗಿದುಕೊಂಡು ಆತ್ಮಹತ್ಯೆ…ಮುರ್ಡೇಶ್ವರದ ಲಾಡ್ಜ್ ನಲ್ಲಿ ನಡೆದ ಘಟನೆ…
ದೂರದ ಪುಣೆಯಿಂದ ಊರಿಗೆ ಮರಳಿ ಮುರುಡೇಶ್ವರದ ಲಾಡ್ಜ್ ಒಂದರಲ್ಲಿ ಕ್ವಾರಂಟೈನ್ ಗೆ ಒಳಗಾಗಿದ್ದ ಯುವಕನೊಬ್ಬ ಮಾನಸಿಕ ಒತ್ತಡದಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ಭಟ್ಕಳ ತಾಲೂಕಿನ ಬೆಂಗ್ರೆ ನಿವಾಸಿ 28 ವರ್ಷದ ವೆಂಕಟೇಶ ಸುಕ್ರಯ್ಯ ದೇವಾಡಿಗ ಎಂಬವನೇ ಮೃತ ದುರ್ದೈವಿ. ಈತ ಕಳೆದ 13 ವರ್ಷಗಳಿಂದ ಪುಣೆಯ ಹೋಟೆಲ್ವೊಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದ.ಊರಿನಲ್ಲಿ ನಡೆಯುತ್ತಿದ್ದ ಕೆಲವೊಂದು ಕಾರ್ಯಕ್ರಮಕ್ಕೆ ವರ್ಷಕ್ಕೆ ಒಂದು ಬಾರಿ ಬಂದು ಹೋಗುತಿದ್ದನಂತೆ.ವೆಂಕಟೇಶ 5-6 ದಿನಗಳ ಹಿಂದೆ ಪುಣೆಯಿಂದ ಮುರ್ಡೇಶ್ವರಕ್ಕೆ ಬಂದಿದ್ದನು .
ಪುಣೆಯಲ್ಲಿ ಕೊರೊನಾ ಹೆಚ್ಚಾಗಿರುವುದರಿಂದ ಮನೆಗೆ ಹೋಗದೆ ಇಲ್ಲಿನ ಪೆಟ್ರಿಶಿಯಾ ಲಾಡ್ಡಿನಲ್ಲಿ ರೂಮ್ ಮಾಡಿಕೊಂಡು ಕ್ವಾರಂಟೈನ್ ಆಗಿದ್ದ. ಈ ನಡುವೆ ಯಾವುದೋ ವಿಷಯವನ್ನು ಮನಸ್ಸಿಗೆ ಹಚ್ಚಿಕೊಂಡು ರಾತ್ರಿ ಲಾಡ್ಡಿನ ಕೊಠಡಿಯ ಕಿಟಕಿಗೆ ಟವೆಲ್ ಕಟ್ಟಿ ಆತ್ಮಹತ್ಯೆಗೆ ಶರಣಾಗಿದ್ದಾನೆ ಎನ್ನಲಾಗಿದೆ.ಈ ಬಗ್ಗೆ ಮೃತನ ಸಹೋದರ ಗಣಪತಿ ಸುಕ್ರಯ್ಯ ದೇವಾಡಿಗ ಮುರುಡೇಶ್ವರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.ಆತ್ಮಹತ್ಯೆಗೆ ನೈಜ ಕಾರಣ ತಿಳಿದು ಬಂದಿಲ್ಲ.