ಆಕ್ಸಿಜನ್ ಕೊರತೆ ತಡೆಯಲು ಸರ್ಕಾರದಿಂದ ಸೂಕ್ತ ಕ್ರಮ : ಪುತ್ತೂರಿನಲ್ಲಿ ಸಚಿವ ಅರವಿಂದ ಲಿಂಬಾವಳಿ ಹೇಳಿಕೆ
ರಾಜ್ಯದಲ್ಲಿ ಕೊರೋನ ಸೋಂಕಿನ ಪ್ರಮಾಣ ವ್ಯಾಪಕವಾಗಿ ವೃದ್ಧಿಸುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಆಕ್ಸಿಜನ್ ಕೊರತೆ ಉಂಟಾಗದಂತೆ ತಡೆಯಲು ಸರಕಾರ ಎಲ್ಲ ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದು ಎಂದು ರಾಜ್ಯ ಅರಣ್ಯ ಖಾತೆಯ ಸಚಿವ ಅರವಿಂದ ಲಿಂಬಾವಳಿ ತಿಳಿಸಿದರು.
ಅವರು ಶುಕ್ರವಾರ ಪುತ್ತೂರಿಗೆ ಆಗಮಿಸಿದ್ದ ಸಂದರ್ಭದಲ್ಲಿ ಇಲ್ಲಿನ ಪ್ರವಾಸಿ ಮಂದಿರದಲ್ಲಿ ಮಾದ್ಯಮಗಳೊಂದಿಗೆ ಮಾತನಾಡಿದರು. ಆಕ್ಸಿಜನ್ ಖರೀದಿಗೆ ಸಂಬಂಧಿಸಿ ಸಚಿವ ಜಗದೀಶ್ ಶೆಟ್ಟರ್ ಈಗಾಗಲೇ ಜಿಂದಾಲ್ ಸೇರಿದಂತೆ ನಾನಾ ಕಂಪನಿಗಳ ಜತೆ ಮಾತುಕತೆ ನಡೆಸಿದ್ದು, ಖರೀದಿಸಲು ಕ್ರಮ ಕೈಗೊಂಡಿದ್ದಾರೆ.
ಆಕ್ಸಿಜನ್, ವೆಂಟಿಲೇಟರ್ ವ್ಯವಸ್ಥೆ ಇರುವುದಕ್ಕಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಇದರಿಂದಾಗಿ ಹೆಚ್ಚುವರಿ ಆಕ್ಸಿಜನ್ ನೀಡುವಂತೆ ಕೇಂದ್ರ ಸರಕಾರಕ್ಕೆ ಮನವಿ ಸಲ್ಲಿಸಿದೆ. ಸರಕಾರ ತನ್ನ ಇತಿಮಿತಿಯಲ್ಲಿ ಎಲ್ಲ ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದರು.
ಸರಕಾರ ತನ್ನ ಕೋವಿಡ್ ಮಾರ್ಗದರ್ಶಿ ಸೂತ್ರಗಳನ್ನು ಪದೇ ಪದೇ ಬದಲಾಯಿಸುವ ಮೂಲಕ ಜನರನ್ನು ಗೊಂದಲ ಮತ್ತು ಆತಂಕಕ್ಕೆ ತಳ್ಳುತ್ತಿದೆ ಎಂಬ ಪ್ರತಿಪಕ್ಷಗಳ ಆರೋಪಗಳ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಕೊರೊನಾ ಕೂಡ ನಮ್ಮನ್ನು ಗೊಂದಲಕ್ಕೆ ದೂಡುತ್ತಿದೆ. ದಿನ ದಿನಕ್ಕೆ ಪ್ರಮಾಣ ಹೆಚ್ಚುತ್ತಿರುವ ಕಾರಣ ಸರಕಾರ ಅನಿವಾರ್ಯವಾಗಿ ನಿಯಮಗಳಲ್ಲಿ ಬದಲಾವಣೆ ಮಾಡಬೇಕಾಗಿ ಬಂದಿದೆ. ಜನರು ಇದನ್ನು ಅರ್ಥ ಮಾಡಿಕೊಳ್ಳಬೇಕು. ಎಲ್ಲರೂ ನಿಯಮಗಳನ್ನು ಪಾಲನೆ ಮಾಡುವ ಮೂಲಕ ಸರಕಾರದ ಜತೆ ಕೈಜೋಡಿಸಬೇಕು. ಸಮಾಜದ ಆರೋಗ್ಯದ ದೃಷ್ಟಿಯಿಂದ ಇದು ಅಗತ್ಯವಾಗಿದೆ ಎಂದು ಹೇಳಿದರು.
ಕುದುರೆಮುಖ ವನ್ಯಜೀವಿ ವಲಯ ಪ್ರದೇಶದಲ್ಲಿ ವಾಸ ಮಾಡುತ್ತಿರುವ ಕುಟುಂಬಗಳನ್ನು ಮನವೊಲಿಸುವ ಕೆಲಸ ನಡೆಯುತ್ತಿದೆ. ಈಗಾಗಲೇ 624 ಕುಟುಂಬಗಳು ಅರಣ್ಯ ಬಿಟ್ಟು ಹೊರಬರಲು ಒಪ್ಪಿದ್ದಾರೆ. ಇನ್ನೂ 760 ಕುಟುಂಬಗಳು ಬಾಕಿ ಇದೆ. ಇವರ ಮನವೊಲಿಕೆ ಕಾರ್ಯ ನಡೆಯುತ್ತಿದೆ ಹೊರ ಬರುವ ಕುಟುಂಬಗಳಿಗೆ ಉತ್ತಮ ಪರಿಹಾರ, ನಿವೇಶನ ಪ್ಯಾಕೇಜ್ ಇದೆ. ವನ್ಯಧಾಮದಿಂದ ಹೊರ ಬರುವ ಮೂಲಕ ಪ್ರಾಣಿಗಳಿಗೆ ಬದುಕಲು ಬಿಡಬೇಕೆಂಬುದು ನಮ್ಮ ಮನವಿಯಾಗಿದೆ ಎಂದರು.
ರಾಜ್ಯದಲ್ಲಿರುವ ಡೀಮ್ಡ್ ಫಾರೆಸ್ಟ್ ಬಗ್ಗೆ ಮತ್ತೊಮ್ಮೆ ವೈಜ್ಷಾನಿಕವಾಗಿ ಸಮೀಕ್ಷೆ ಮಾಡಿ ಸಮಗ್ರ ವರಿದಯನ್ನು ಸಲ್ಲಿಸಲು ಇಲಾಖೆಗೆ ಸೂಚಿಸಿದ್ದೇನೆ. ಅಂತಿಮ ವರದಿ ಬಂದ ಮೇಲೆ ಅದನ್ನು ಸುಪ್ರೀಂ ಕೋರ್ಟ್ಗೆ ಅಫಿದವಿತ್ ಮೂಲಕ ಸಲ್ಲಿಸಲಾಗುವುದು. ಡೀಮ್ಡ್ ಫಾರೆಸ್ಟ್ನಲ್ಲಿ ಎಷ್ಟು ಭಾಗದಲ್ಲಿ ವಸತಿ, ಕೃಷಿ ಇತ್ಯಾದಿ ಇದೆ ಮತ್ತು ಸಾರ್ವಜನಿಕ ವ್ಯವಸ್ಥೆಗಾಗಿ ಎಷ್ಟು ಪ್ರದೇಶ ಬೇಕು ಎಂಬುದನ್ನು ನೋಡಿಕೊಂಡು ಅರಣ್ಯ ವ್ಯಾಪ್ತಿಯಲ್ಲಿ ಎಷ್ಟನ್ನು ಉಳಿಸಿಕೊಳ್ಳಹುದು ಎಂಬದನ್ನು ವರದಿಯಲ್ಲಿ ದಾಖಲಿಸಲಾಗುತ್ತದೆ. ಡೀಮ್ಡ್ ಫಾರೆಸ್ಟ್ನಲ್ಲಿ ಎಷ್ಟನ್ನು ಅರಣ್ಯಕ್ಕಾಗಿ ಉಳಿಸಿಕೊಳ್ಳುತ್ತೀರಿ ಎಂದು ನ್ಯಾಯಾಲಯ ಕೇಳಿರುವ ಕಾರಣ ಈ ವರದಿ ಮಹತ್ವದ್ದು ಎಂದರು.
ದ.ಕ., ಉಡುಪಿ ಮತ್ತು ಕಾರವಾರ ಜಿಲ್ಲೆಗಳ ಕಾಂಡ್ಲಾ ಪ್ರದೇಶದಲ್ಲಿ ಅರಣ್ಯ ನಶಿಸುತ್ತಿರುವ ಬಗ್ಗೆ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸುತ್ತಿದ್ದೇವೆ. ಕೇಂದ್ರ ಪರಿಸರ ಸಚಿವ ಪ್ರಕಾಶ್ ಜಾವ್ಡೇಕರ್ ಜತೆ ಮಾತುಕತೆ ನಡೆಸಲಿದ್ದೇವೆ ಎಂದು ಹೇಳಿದ ಸಚಿವರು, ಕರ್ನಾಟಕ ಗೇರು ಅಭಿವೃದ್ಧಿ ನಿಗಮ ಮತ್ತು ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮದಿಂದ ಕೆಲವೊಂದು ಬೇಡಿಕೆಗಳು ಬಂದಿವೆ.
ಇವುಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಸಚಿವ ಎಸ್. ಅಂಗಾರ, ಶಾಸಕ ಸಂಜೀವ ಮಠಂದೂರು, ಎಪಿಎಂಸಿ ಅಧ್ಯಕ್ಷ ದಿನೇಶ್ ಮೆದು ಉಪಸ್ಥಿತರಿದ್ದರು.