ಕೋವಿಡ್ ನಿಯಮ ಉಲ್ಲಂಘನೆ | ಹಸಿ ಮೀನು ವ್ಯಾಪಾರಿಗಳ ವಿರುದ್ಧ ಪ್ರಕರಣ ದಾಖಲು
ಬಂಟ್ವಾಳ ತಾಲೂಕಿನ ಫರಂಗಿಪೇಟೆ ಮೀನು ಮಾರುಕಟ್ಟೆಯಲ್ಲಿ ಸುರಕ್ಷಿತ ಅಂತರ ಕಾಯ್ದುಕೊಳ್ಳದೆ ವ್ಯಾಪಾರ ನಡೆಸುತ್ತಿದ್ದ ಮೀನು ವ್ಯಾಪಾರಿಗಳ ವಿರುದ್ಧ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಂಟ್ವಾಳ ತಾಲೂಕಿನ ವಿವಿಧೆಡೆ ಬೆಳಗ್ಗೆಯಿಂದ ಕಾರ್ಯಾಚರಣೆ ನಡೆಸುತ್ತಿರುವ ಪೊಲೀಸರು ಬಾಗಿಲು ತೆರೆದಿದ್ದ ಅಗತ್ಯ ವಸ್ತುಗಳು ಅಲ್ಲದ ಅಂಗಡಿಗಳನ್ನು ಬಂದ್ ಮಾಡಿಸುತ್ತಿದ್ದಾರೆ. ಕಾರ್ಯಾಚರಣೆ ವೇಳೆ ಫಂರಗಿಪೆಟೆ ಮೀನು ಮಾರುಕಟ್ಟೆಯಲ್ಲಿ ಗ್ರಾಹಕರ ನಡುವೆ ಯಾವುದೇ ಸುರಕ್ಷಿತ ಅಂತರ ಇಲ್ಲದೆ ವ್ಯಾಪಾರ ನಡೆಸುತ್ತಿರುವುದು ಕಂಡು ಬಂದ ಹಿನ್ನೆಲೆಯಲ್ಲಿ ಬಂಟ್ವಾಳ ಗ್ರಾಮಾಂತರ ಎಸ್.ಐ. ಪ್ರಸನ್ನ ಕೋವಿಡ್ ನಿಯಮ ಉಲ್ಲಂಘಿಸಿದ ಆರೋಪದಲ್ಲಿ ಮೀನು ಮಾರುಕಟ್ಟೆಯ ಮಾಲಕರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಕೊರೋನ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಹೊಸ ಮಾರ್ಗಸೂಚಿಯನ್ನು ಜಾರಿ ಮಾಡಿದ್ದು ಅದರಂತೆ ಬಹುತೇಕ ಅಂಗಡಿಗಳು ಶುಕ್ರವಾರ ಬಂದ್ ಆಗಿವೆ. ಮೀನು ವ್ಯಾಪಾರವು ದಿನಬಳಕೆಯ ಅಗತ್ಯ ವಸ್ತುಗಳ ಅಡಿಯಲ್ಲಿ ಬರುವು ದರಿಂದ ಮೀನು ಮಾರಾಟಕ್ಕೆ ಸರಕಾರ ಅನುಮತಿ ನೀಡಿದೆ. ಆದರೆ ಕೋವಿಡ್ ನಿಯಂತ್ರಣದ ಎಲ್ಲಾ ಮಾರ್ಗಸೂಚಿಯನ್ನು ಪಾಲಿಸಿ ವ್ಯಾಪಾರ ನಡೆಸುವಂತೆ ಎಚ್ಚರಿಕೆ ನೀಡಿದೆ.