ಡೆಡ್ಲಿ ಕೊರೋನಾ ವೈರಸ್ ವಿರುದ್ಧ ಹೋರಾಟಕ್ಕೆ ಮತ್ತೊಂದು ಅಸ್ತ್ರ | ಝೈಡಸ್ ಕ್ಯಾಡಿಲಾ ಸಂಸ್ಥೆಯ ವಿರಾಫಿನ್ ಗೆ ಡಿಸಿಜಿಐ ಅನುಮತಿ

ಡೆಡ್ಲಿ ಕೊರೋನಾ ವೈರಸ್ ವಿರುದ್ಧ ಹೋರಾಟಕ್ಕೆ ಮತ್ತೊಂದು ಬಲ ಬಂದಿದ್ದು, ಕೋವಿಡ್-19 ಚಿಕಿತ್ಸೆಗೆ ಮತ್ತೊಂದು ಹೊಸ ಅಸ್ತ್ರ ಸೇರ್ಪಡೆಯಾಗಿದೆ.

ಕೊರೊನಾ ಸೋಂಕಿತರ ಚಿಕಿತ್ಸೆಗೆ ಹೊಸ ಔಷಧ ಬಳಸಲು ಭಾರತೀಯ ಔಷಧ ನಿಯಂತ್ರಕ ಮಹಾಮಂಡಳಿ ಅನುಮತಿ ನೀಡಿದ್ದು, ಝೈಡಸ್ ಕ್ಯಾಡಿಲಾ ಸಂಸ್ಥೆಯ ವಿರಾಫಿನ್ ಔಷಧವನ್ನು ಕೊರೊನಾ ಸೋಂಕಿತರ ಚಿಕಿತ್ಸೆಗೆ ಬಳಸಲು ಭಾರತೀಯ ಔಷಧ ನಿಯಂತ್ರಕ ಮಹಾಮಂಡಳಿ (ಡಿಸಿಜಿಐ) ಅನುಮತಿ ನೀಡಿದೆ.

ಲಘು ಕೊರೊನಾ ವೈರಸ್ ಸೋಂಕಿನಿಂದ ಬಳಲುತ್ತಿರುವವರಿಗೆ ಔಷಧದ ರೂಪದಲ್ಲಿ ಝೈಡಸ್ ಕ್ಯಾಡಿಲ್ಲಾ ಸಂಸ್ಥೆಯ ‘ವಿರಾಫಿನ್’ ಔಷಧ ಬಳಸಲು ಅನುಮತಿ ನೀಡಲಾಗಿದೆ. ಈ ಹಿಂದೆ ನಡೆದಿದ್ದ ಈ ಔಷಧದ ಪ್ರಯೋಗ ಯಶಸ್ವಿಯಾಗಿತ್ತು. ಒಂದು ಡೋಸ್ ಔಷಧಿ ಬಳಕೆಯು ಕೊರೊನಾ ಸೋಂಕಿತರಲ್ಲಿ ಚೇತರಿಕೆ ಉಂಟುಮಾಡಿದೆ ಎಂದು ಕಂಪನಿ ತಿಳಿಸಿದೆ. 
ವಿರಾಫಿನ್​ನಲ್ಲಿ PegIFN ಔಷಧವಿದ್ದು, ಈ ಸಿಂಗಲ್ ಡೋಸ್ ಔಷಧಿ ವೈರಾಣು ಸೋಂಕು ನಿರೋಧಕವಾಗಿ ಕಾರ್ಯನಿರ್ವಹಿಸುತ್ತದೆ. ಇದು ಕೊರೊನಾ ಸೋಂಕು ಪ್ರಕರಣಗಳಲ್ಲಿ ಪರಿಣಾಮಕಾರಿ ಎಂದು ಕ್ಲಿನಿಕಲ್ ಪರೀಕ್ಷೆಗಳಲ್ಲಿ ಸಾಬೀತಾಗಿದೆ ಎಂದು ಕಂಪನಿಯು  ಹೇಳಿಕೊಂಡಿದೆ.

ಆಮ್ಲಜನಕ ನೀಡಬೇಕಾದ ಅಗತ್ಯತೆ ಕಡಿಮೆ ಮಾಡುವ ಉತ್ತಮ ಔಷಧಿ !
ಕೋವಿಡ್-19 ರೋಗಿಗಳಿಗೆ ಈ ‘ವಿರಾಫಿನ್’ ಔಷಧಿ ನೀಡಿದಾಗ ಕೃತಕ ಆಮ್ಲಜನಕವನ್ನು ನೀಡಬೇಕಾದ ಅಗತ್ಯವೂ ಹೆಚ್ಚಿನ ಸಂದರ್ಭಗಳಲ್ಲಿ ಬೇಕಿಲ್ಲ. ಕೊರೊನಾ ಸೋಂಕಿನಿಂದ ಉಂಟಾಗುವ ಉಸಿರಾಟದ ಹಲವು ಸಮಸ್ಯೆಗಳನ್ನು ವಿರಾಫಿನ್ ಪರಿಣಾಮಕಾರಿಯಾಗಿ ತಡೆದದ್ದು ಪ್ರಯೋಗಗಳ ವೇಳೆ  ದಾಖಲಾಗಿದೆ. ಕೊರೊನಾದಿಂದ ರೋಗಿಗಳು ಚೇತರಿಸಿಕೊಂಡ ನಂತರ ಕಾಣಿಸುವ ಕೆಲ ಇತರ ಆರೋಗ್ಯದ ಸಮಸ್ಯೆಗಳನ್ನೂ ಇದು ತಡೆಯಬಲ್ಲದು. ವಿರಾಫಿನ್ ಚಿಕಿತ್ಸೆಯ ನಂತರ ಕೊರೊನಾ ಸೋಂಕು ದೃಢಪಟ್ಟಿದ್ದ ಶೇ 91.15 ರಷ್ಟು ರೋಗಿಗಳಲ್ಲಿ ಆರ್​ಟಿ-ಪಿಸಿಆರ್ ಪರೀಕ್ಷೆ ವೇಳೆ 7 ದಿನಗಳಲ್ಲಿ ನೆಗೆಟಿವ್ ವರದಿ ಬಂದಿತ್ತು ಎಂದು ಕಂಪನಿ ಹೇಳಿಕೊಂಡಿದೆ.

Leave A Reply

Your email address will not be published.