ನಾಯಿಯನ್ನು ಬೈಕ್ ಗೆ ಕಟ್ಟಿ ಹೆದ್ದಾರಿಯಲ್ಲಿ ಎಳೆದೊಯ್ದು ಪ್ರಕರಣ | ಓರ್ವ ಹಿಂಸಾವಿನೋದಿಯ ಬಂಧನ
ನಾಯಿಯನ್ನು ಬೈಕಿಗೆ ಕಟ್ಟಿ ಎಳ್ಕೊಂಡು ಹೋಗಿರುವ ಸುದ್ದಿಯ ವರದಿ ಪತ್ರಿಕೆಗಳಲ್ಲಿ ಪ್ರಕಟ ಆಗುತ್ತಿದ್ದಂತೆ ಎಚ್ಚೆತ್ತುಕೊಂಡ ಮಂಗಳೂರು ಸುರತ್ಕಲ್ ಪೊಲೀಸರು ತುರ್ತು ಕಾರ್ಯಾಚರಣೆ ನಡೆಸಿ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.
ಆರೋಪಿಗಳು ಕೊಪ್ಪಳದವರಾಗಿದ್ದು ಒಬ್ಬನನ್ನು ಸುರತ್ಕಲ್ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇನ್ನೊಬ್ಬ ಆರೋಪಿ ಪರಾರಿಯಾಗಿದ್ದಾನೆ. ಆತನನ್ನೂ ಶೀಘ್ರ ಬಂಧಿಸುವುದಾಗಿ ಪೊಲೀಸರು ಭರವಸೆ ವ್ಯಕ್ತಪಡಿಸಿದ್ದಾರೆ.
ಏಪ್ರಿಲ್ 15 ರಂದು ರಾತ್ರಿ ನಾಯಿಯನ್ನು ಬೈಕ್ ಗೆ ಕಟ್ಟಿ ಎಳೆದುಕೊಂಡು ಹೋಗುವ ಅಮಾನವೀಯ ಘಟನೆ ಎನ್ಐಟಿಕೆ ಫೈ ಓವರ್ ಬಳಿ ನಡೆದಿದ್ದು ಇದನ್ನು ಇನ್ನೊಂದು ಬೈಕಿನಲ್ಲಿ ತೆರಳುತ್ತಿದ್ದ ಮಂದಿ ವಿಡಿಯೋ ಮಾಡಿದ್ದರು. ಅದನ್ನು ಇನ್ನೊಂದು ವಾಹನದಲ್ಲಿ ಹೋಗುತ್ತಿದ್ದ ಸುರತ್ಕಲ್ ನಿವಾಸಿ ಜೀವನ್ ಎನ್ನುವವರು ವೀಡಿಯೋ ಮಾಡಿದ್ದರು.
ವಿಡಿಯೋವನ್ನು ಮುಂಬೈನ ಅನಿಮಲ್ ಕೇರ್ ಎನ್ ಜಿಓ ಒಂದಕ್ಕೆ ಕಳುಹಿಸಿದ್ದರು. ಅದರ ಪ್ರತಿನಿಧಿಗಳು ಕರೆ ಮಾಡಿ, ಪೊಲೀಸರಿಗೆ ದೂರು ನೀಡಲು ತಿಳಿಸಿದ್ದಾರೆ. ಅದರಂತೆ, ಜೀವನ್ ಸುರತ್ಕಲ್ ಠಾಣೆಗೆ ತೆರಳಿದ್ದು ಅಲ್ಲಿನ ಪೊಲೀಸರು ನಿರ್ಲಕ್ಷ್ಯ ತೋರಿದ್ದಾರೆ ಎನ್ನಲಾಗಿದೆ. “ದಾನೆ ಈರೆಗ್ ಬೇತೆ ಬೇಲೆ ಇಜ್ಜಾ, ನಾಯಿದ ವಿಚಾರ ಪತೊಂದು ಬೈದರ್” ಎಂದು ಸಣ್ಣಗೆ ದಬಾಯಿಸಿ ಕಂಪ್ಲೇಂಟ್ ಸ್ವೀಕರಿಸದೆ ವಾಪಸ್ ಕಳಿಸಿದ್ದರು.
ಆ ನಂತರ ಈ ವಿಷಯ ತಿಳಿದ ಸಾಮಾಜಿಕ ಕಾರ್ಯಕರ್ತ ಸುಹಾನ್ ಆಳ್ವ ಡಿಸಿಪಿ ಹರಿರಾಂಗೆ ವಿಷಯ ತಿಳಿಸಿದ್ದು ಅವರು ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ. ಕಮಿಷನರ್ ಮತ್ತು ಡಿಸಿಪಿಯ ಸೂಚನೆಯಂತೆ ಸುರತ್ಕಲ್ ಪೊಲೀಸರು ಎಲರ್ಟ್ ಆಗಿದ್ದಾರೆ. ಕೂಡಲೇ ಎಫ್ಐಆರ್ ಮಾಡಿದ್ದಾರೆ. ಜೀವನ್ ದೂರುದಾರನಾದರೆ, ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿದ್ದಾರೆ. ಒಬ್ಬ ಹಿಂಸಾವಿನೋದಿಯನ್ನು ಬಂಧಿಸಿದ್ದಾರೆ.