ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯಿಂದ 1 ಕೋ.ರೂ.ಗಳಲ್ಲಿ 40 ಶ್ಮಶಾನಗಳ ಪುನಶ್ಚೇತನ
ಬೆಳ್ತಂಗಡಿ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಪ್ರಾರಂಭಿಸಲಾಗಿರುವ ಸಾರ್ವಜನಿಕ ಹಿಂದೂ ರುದ್ರಭೂಮಿ ಅಭಿವೃದ್ಧಿ ಕಾರ್ಯ ಕ್ರಮದನ್ವಯ ಈವರೆಗೆ ರಾಜ್ಯಾದ್ಯಂತ 550 ರುದ್ರಭೂಮಿಗಳನ್ನು ಪುನಶ್ಚೇತನ ಗೊಳಿಸಲಾಗಿದೆ. ಪ್ರಸ್ತುತ ಸಾಲಿನಲ್ಲಿ ಈ ಯೋಜನೆಗೆ 1 ಕೋ.ರೂ. ಮೀಸಲಿಟ್ಟಿದ್ದು, 40 ರುದ್ರಭೂಮಿಗಳ ಪುನಶ್ಚೇತನಕ್ಕೆ ಕ್ರಮ ಕೈಗೊಳ್ಳಲಾಗಿದೆ.
ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಅವರು ಹಿಂದೂ ಧರ್ಮೀಯರ ಶವ ಸಂಸ್ಕಾರವನ್ನು ವ್ಯವಸ್ಥಿತವಾಗಿ ನಡೆಸುವುದಕ್ಕೆ ಪ್ರತೀ ಗ್ರಾಮ ದಲ್ಲಿಯೂ ಸೂಕ್ತ ಪರಿಕರಗಳನ್ನು ಕಲ್ಪಿಸುವ ದೃಷ್ಟಿಯಿಂದ ಹಿಂದೂ ರುದ್ರ ಭೂಮಿ ಯೋಜನೆ ಪ್ರಾರಂಭಿಸಿದ್ದರು. ಇದರ ಮೂಲಕ ಕ್ಷೇತ್ರದಿಂದ ಅಗತ್ಯ ಪರಿಕರಗಳಾದ ಶವದಹನ ಚೇಂಬರ್ ಮತ್ತು ಇತರ ಉಪ ಕರಣಗಳನ್ನು ಅಳವಡಿಸಿ ಕೊಳ್ಳಲು 2.50 ಲಕ್ಷ ರೂ. ವರೆಗೆ ನೆರವು ನೀಡಲಾಗುತ್ತಿದೆ.
ದಹನ ಚೌಕಿಯನ್ನು ಮಳೆ, ಬಿಸಿಲು, ಗಾಳಿಯಿಂದ ರಕ್ಷಿಸಲು ಸೂಕ್ತ ಮಾಡು ನಿರ್ಮಿಸಿ, ಕಟ್ಟಿಗೆ ದಾಸ್ತಾನು, ಸ್ನಾನ, ಶೌಚದ ವ್ಯವಸ್ಥೆ, ಪೂಜಾ ಕೊಠಡಿಯ ವ್ಯವಸ್ಥೆ ಮುಂತಾದವುಗಳನ್ನು ಕೂಡ ಈ ಯೋಜನೆಯಲ್ಲಿ ಅಳವಡಿಸಲಾಗುತ್ತದೆ.
ಈ ಕಾರ್ಯಕ್ರಮದನ್ವಯ ಡಾ| ಡಿ. ವೀರೇಂದ್ರ ಹೆಗ್ಗಡೆ ಅವರು ರಾಜ್ಯ ದಾದ್ಯಂತ 550 ರುದ್ರಭೂಮಿಗಳಿಗೆ 6.75 ಕೋ.ರೂ. ವಿನಿಯೋಗಿಸಿರುತ್ತಾರೆ. ಸ್ಥಳೀಯ ಸಹಭಾಗಿತ್ವನ್ನು ಲೆಕ್ಕಕ್ಕೆ ತೆಗೆದು ಕೊಂಡರೆ ಸುಮಾರು 50 ಕೋ.ರೂ. ಮೊತ್ತದ ಆರ್ಥಿಕ ವಿನಿಯೋಗ ಮಾಡಲಾ ಗಿದೆ ಎಂದು ಹೇಳಬಹುದು ಎಂದು ಯೋಜ ನೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ| ಎಲ್.ಎಚ್. ಮಂಜುನಾಥ್ ತಿಳಿಸಿದ್ದಾರೆ.
ಸೌದೆ ಉಳಿತಾಯ, ಸ್ವತ್ಛತೆಗೂ ಸಹಕಾರಿ
ಕ್ಷೇತ್ರದ ನೆರವಿನಿಂದ ಖರೀದಿಸಲಾಗುವ ದಹನ ಚೌಕಿಯನ್ನು ವಿಶೇಷ ಕಬ್ಬಿಣದಿಂದ ಮಾಡಲಾಗಿದ್ದು, 1.2 ಟನ್ ಭಾರ ಇರುತ್ತದೆ. ಈ ಚೇಂಬರನ್ನು ಒಳಬದಿಯಿಂದ ವಿಶೇಷವಾಗಿ ತಯಾರಿಸಿದ ಅಲಾಯ್ಕಾಸ್ಟ್ ಅಯರ್° ಪ್ಲೇಟ್ಗಳಿಂದ ಮುಚ್ಚಲಾಗಿದೆ. ಇದು 1,200 ಕೆ.ಜಿ. ಭಾರವಾಗಿದ್ದು, 74 ಇಂಚು ಉದ್ದ, 39 ಇಂಚು ಅಗಲ ಹಾಗೂ 31 ಇಂಚು ಎತ್ತರವಿರುತ್ತದೆ.ಅಡಿ ಭಾಗದ ಗ್ರೇಟಿಂಗ್ಸ್ ಮೇಲೆ 2 ಸಾಲು ಸೌದೆ, ಅದರ ಮೇಲೆ ಶವ, ಅದರ ಮೇಲೆ ಮೂರು ಸಾಲು ಸೌದೆ ಇಡಲು ಹೆಚ್ಚೆಂದರೆ 250ರಿಂದ 300 ಕೆ.ಜಿ. ಕಟ್ಟಿಗೆ ಸಾಕಾಗುತ್ತದೆ. ಸ್ಥಳೀಯ ಕ್ರಮದಲ್ಲಿ 800ರಿಂದ 1,000 ಕೆ.ಜಿ. ಕಟ್ಟಿಗೆ ಬೇಕಾಗುತ್ತಿದ್ದು, ಸೌದೆಯ ಉಳಿತಾಯ ಮತ್ತು ಸ್ವತ್ಛತೆ ಕಾಪಾಡಲು ಇದು ಸಹಕಾರಿಯಾಗಿದೆ.