ತೀವ್ರಗಾಮಿ ಇಸ್ಲಾಮಿಕ್ ಪಕ್ಷವೊಂದರ ಮುಂದೆ ಅಡ್ಡ ಮಲಗಿದ ಪಾಕ್ ಸರ್ಕಾರ
ಪಾಕಿಸ್ತಾನದ ತೀವ್ರಗಾಮಿ ಇಸ್ಲಾಮಿಕ್ ಪಕ್ಷವೊಂದರ ಮುಂದೆ ಪಾಕ್ ಸರ್ಕಾರ ಅಡ್ಡ ಬಿದ್ದಿದೆ. ಆ ಪಕ್ಷದ ಹಠಭರಿತ ಬೇಡಿಕೆಗೆ ಪಾಕ್ ಸರ್ಕಾರ ಒಪ್ಪಿಗೆ ಸೂಚಿಸಿದೆ.
ಫ್ರಾನ್ಸ್ ನಲ್ಲಿ ಪ್ರವಾದಿ ಮೊಹಮ್ಮದ್ ರ ಬಗ್ಗೆ ವ್ಯಂಗ್ಯ ಚಿತ್ರ ಬರೆಯಲಾಗಿತ್ತು. ಅದನ್ನು ವಿರೋಧಿಸಿ ತೆಹ್ರೀಕ್-ಎ- ಲಬ್ಬೈಕ್ ಪಾಕಿಸ್ತಾನ್ (ಟಿಎಲ್ ಪಿ) ಎಂಬ ಪಕ್ಷವು ಪಾಕಿಸ್ತಾನದಲ್ಲಿರುವ ಫ್ರಾನ್ಸ್ ನ ರಾಯಭಾರಿಯನ್ನು ಉಚ್ಚಾಟಿಸಬೇಕು ಎಂದು ಆಗ್ರಹಿಸಿತ್ತು. ಅಲ್ಲದೆ ತನ್ನ ವಿರುದ್ಧ ದಾಖಲಾಗಿರುವ ಎಲ್ಲಾ ಪ್ರಕರಣಗಳನ್ನೂ ಕೂಡಾ ರದ್ದುಗೊಳಿಸಬೇಕೆಂದು ಆಗ್ರಹಿಸಿತ್ತು.
ಹಲವು ಸುತ್ತಿನ ಮಾತುಕತೆಯ ಬಳಿಕ ಪಾಕಿಸ್ತಾನ ಸರ್ಕಾರ ತೀವ್ರಗಾಮಿ ಪಕ್ಷವೊಂದರ ಬೇಡಿಕೆಗಳಿಗೆ ಮಂಡಿ ಊರಿದೆ. ಅಂತೆಯೇ ಫ್ರೆಂಚ್ ರಾಯಭಾರಿಯನ್ನು ವಾಪಸ್ ಕಳಿಸುವುದಾಗಿ ಸಂಸತ್ ನಲ್ಲಿ ಪಾಕ್ ಸರ್ಕಾರ ಘೋಷಿಸಿದೆ.
“ಟಿಎಲ್ ಪಿ ಜೊತೆಗೆ ಹಲವು ಸುತ್ತಿನ ಮಾತುಕತೆ ಬಳಿಕ ಫ್ರಂಚ್ ರಾಯಭಾರಿಯನ್ನು ವಾಪಸ್ ಕಳಿಸಲು ನಿರ್ಧರಿಸಲಾಗಿದೆ. ಈ ಸಂಬಂಧ ನಿರ್ಣಯವನ್ನು ರಾಷ್ಟ್ರೀಯ ಅಸೆಂಬ್ಲಿಯಲ್ಲಿ ಮಂಡಿಸಲಾಗುತ್ತದೆ” ಎಂದು ಆಂತರಿಕ ಸಚಿವ ಶೇಖ್ ರಶೀದ್ ವಿಡಿಯೋ ಸಂದೇಶದಲ್ಲಿ ತಿಳಿಸಿದ್ದಾರೆ. ಅಲ್ಲದೆ, ಟಿಎಲ್ ಪಿ ಕಾರ್ಯಕರ್ತರ ವಿರುದ್ಧ ಭಯೋತ್ಪಾದನೆ ಆರೋಪದ ಅಡಿಯಲ್ಲಿ ದಾಖಲಿಸಲಾಗಿರುವ ಪ್ರಕರಣಗಳನ್ನೂ ವಾಪಸ್ ಪಡೆಯಲು ಪಾಕಿಸ್ತಾನ ಸರ್ಕಾರ ತೀರ್ಮಾನಿಸಿದೆ. ಪಾಕಿಸ್ತಾನ ಸರ್ಕಾರದ ಈ ನಡೆಯನ್ನು ತೀವ್ರಗಾಮಿಗಳ ಕೈಗೆ ಪಾಕ್ ಸರ್ಕಾರ ಸಿಕ್ಕಿ ಹಾಕಿಕೊಂಡಿದೆ ಎಂದು ತೀವ್ರವಾಗಿ ಟೀಕಿಸಲಾಗುತ್ತಿದೆ.