ಮೀನುಗಾರಿಕಾ ಬೋಟ್ ಡೀಸೆಲ್ ಸಬ್ಸಿಡಿ ಸಮಸ್ಯೆಗೆ ಶೀಘ್ರದಲ್ಲೇ ಪರಿಹಾರ: ಸಚಿವ ಅಂಗಾರ
ಕಳೆದ ನಾಲ್ಕು ತಿಂಗಳಿನಿಂದ ಮೀನುಗಾರಿಕೆಗೆ ತೆರಳುತ್ತಿದ್ದ ಬೋಟ್‌ಗಳಿಗೆ ಡೀಸೆಲ್ ಸಬ್ಸಿಡಿ ಬಾರದಿರುವುದು ತನ್ನ ಗಮನಕ್ಕೆ ಬಂದಿದೆ. ಈ ನಿಟ್ಟಿನಲ್ಲಿ ಎ.18ರಂದು ಬೆಂಗಳೂರಿನಲ್ಲಿ ಅಧಿಕಾರಿಗಳ ಜೊತೆ ಚರ್ಚಿಸಿ ಮುಖ್ಯಮಂತ್ರಿಯ ಗಮನ ಸೆಳೆಯುತ್ತೇನೆ. ಸುಮಾರು 75 ಕೋ.ರೂ.ಸಬ್ಸಿಡಿ ಬರಲು ಬಾಕಿ ಇದ್ದು, ಶೀಘ್ರದಲ್ಲೇ ಅದು ಮೀನುಗಾರರ ಬ್ಯಾಂಕ್ ಖಾತೆಗೆ ಸೇರುವಂತೆ ಬರುವಂತೆ ಪ್ರಯತ್ನ ಮಾಡುತ್ತೇನೆ. ಆ ಮೂಲಕ ಸಬ್ಸಿಡಿ ಸಮಸ್ಯೆಗೆ ಪರಿಹಾರ ಕಲ್ಪಿಸಲಾಗುವುದು ಎಂದು ರಾಜ್ಯ ಮೀನುಗಾರಿಕಾ ಹಾಗೂ ಬಂದರುಗಳು ಮತ್ತು ಒಳನಾಡು ಜಲಸಾರಿಗೆ ಸಚಿವ ಎಸ್. ಅಂಗಾರ ಹೇಳಿದರು.
ಮಂಗಳೂರು ಮೀನುಗಾರಿಕಾ ದಕ್ಕೆ ಹಾಗೂ ಕಚೇರಿಗೆ ಬುಧವಾರ ಭೇಟಿ ನೀಡಿದ ಅವರು ಸುದ್ದಿಗಾರರ ಜೊತೆ ಮಾತನಾಡಿದರು.
ಕೋವಿಡ್ ಕಾರಣದಿಂದ ಸಬ್ಸಿಡಿ ಜಮೆಯಾಗಲು ವಿಳಂಬವಾಗಿದೆ.ಇದರಿಂದ ಮೀನುಗಾರಿಕೆ ಮಾಡುವವರಿಗೆ ಸಮಸ್ಯೆಯಾಗಿದೆ. ಇದಕ್ಕೆ ಪರಿಹಾರ ಕಂಡುಕೊಂಡು ಮೀನುಗಾರರ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲಾಗುವುದು ಎಂದು ಸಚಿವ ಅಂಗಾರ ಹೇಳಿದರು.
ಮಂಗಳೂರು ಬಂದರಿನಲ್ಲಿ ಮೂರನೇ ಜೆಟ್ಟಿ ಕಾಮಗಾರಿ ವಿಸ್ತರಣೆ ಕುರಿತು ಮೀನುಗಾರಿಕೆ ಮುಖಂಡರ ಜೊತೆ ಮಾತನಾಡಿದ ಅವರು ಬೋಟ್‌ಗಳು ನಿಲ್ಲಲು ಸೂಕ್ತ ಜೆಟ್ಟಿ ಅತ್ಯಗತ್ಯ. ಈ ನಿಟ್ಟಿನಲ್ಲಿ ಅಧಿಕಾರಿಗಳ ಜೊತೆ ಮಾತನಾಡಿ ಕಾಮಗಾರಿ ಆರಂಭಿಸುವ ಕುರಿತು ಪ್ರಯತ್ನ ಮಾಡುತ್ತೇನೆ ಎಂದರು.
ಬೆಂಗ್ರೆಯ ಕೋಸ್ಟಲ್ ಬರ್ತ್ ವಿಚಾರದಲ್ಲಿ ಸ್ಥಳೀಯರು ವಿರೋಧದ ಕುರಿತು ಪ್ರತಿಕ್ರಿಯಿಸಿದ ಅವರು ಯೋಜನೆ ಅನುಷ್ಠಾನಕ್ಕೆ ವಿರೋಧ ಮಾಡುವ ಬದಲು ಅದರ ಸಾಧಕ ಬಾಧಕಗಳನ್ನು ಅರಿಯುವ ಕಾರ್ಯವಾಗಬೇಕು ಎಂದರು.
ಈ ಸಂದರ್ಭ ಮೀನುಗಾರರ ಸಂಘಟನೆಗಳ ಮುಖಂಡರಾದ ಶಶಿಕುಮಾರ್ ಬೆಂಗ್ರೆ, ಮೋಹನ್ ಬೆಂಗ್ರೆ, ಇಬ್ರಾಹಿಂ, ರಾಜೇಶ್ ಪುತ್ರನ್, ಮೀನುಗಾರಿಕಾ ಇಲಾಖೆಯ ಉಪನಿರ್ದೇಶಕ ಪ್ರಭಾರ ಹರೀಶ್ ಕುಮಾರ್, ಸಹಾಯಕ ನಿರ್ದೇಶಕ ದಿಲೀಪ್ ಕುಮಾರ್, ನಿಗಮದ ಅಧ್ಯಕ್ಷ ನಿತಿನ್ ಕುಮಾರ್ ಬೆಂಗ್ರೆ, ಕೆ ಎಂಡಿ ಎಂ.ಎಲ್. ದೊಡ್ಡಮನಿ ಉಪಸ್ಥಿತರಿದ್ದರು.