ಪುತ್ತೂರು ಎಸಿ ಕಚೇರಿಯಲ್ಲಿ ಕಂಬಳ,ಯಕ್ಷಗಾನ ತುಳು ಸಂಸ್ಕೃತಿಯ ಅನಾವರಣ
ಪುತ್ತೂರು ಸಹಾಯಕ ಆಯುಕ್ತರ ಕಚೇರಿ ಈಗ ಕಂಬಳ,ಯಕ್ಷಗಾನ,ಆಟಿಕಳಂಜ ಸೇರಿದಂತೆ ಜಾನಪದೀಯ ತುಳು ಸಂಸ್ಕೃತಿಯನ್ನು ಬಿಂಬಿಸುವ ಕಲೆಯೊಂದಿಗೆ
ಕಂಗೊಳಿಸುತ್ತಿದೆ.
ಪುತ್ತೂರಿನ ಶಾಲಾ ಶಿಕ್ಷಕರ ತಂಡವೊಂದು ಈ ಕಚೇರಿಯನ್ನು ವರ್ಲಿ ಕಲೆಯ ಮೂಲಕ ಅಲಂಕರಿಸುವ ಕಾರ್ಯದಲ್ಲಿ ನಿರತವಾಗಿದೆ.
ಪುತ್ತೂರಿನ ಮಿನಿ ವಿಧಾನ ಸೌಧದ ಒಳಭಾಗದ ಮಹಡಿಯಲ್ಲಿರುವ ಪುತ್ತೂರು ಉಪವಿಭಾಗಾಧಿಕಾರಿಯವರ ಕಚೇರಿಗೆ ಪ್ರತಿನಿತ್ಯ ಸಾರ್ವಜನಿಕರು ಹೆಚ್ಚು ಹೆಚ್ಚು ಬರುತ್ತಾರೆ. ಈ ಕಚೇರಿಯು ಪುತ್ತೂರು, ಸುಳ್ಯ ಮತ್ತು ಬೆಳ್ತಂಗಡಿ ವ್ಯಾಪ್ತಿಯನ್ನು ಒಳಗೊಂಡಿದ್ದು,
ಈ ನಿಟ್ಟಿನಲ್ಲಿ ಜನತೆಗೆ ಕಂದಾಯ ಇಲಾಖೆಯ ಮಾಹಿತಿಯನ್ನು ತಿಳಿಸಲು ವರ್ಲಿ ಕಲೆಯ ಮೊರೆಹೋಗುವ ಚಿಂತನೆ ಪುತ್ತೂರು ಎಸಿ ಡಾ.ಯತೀಶ್ ಉಳ್ಳಾಲ್ ಹಾಗೂ ಅವರ ತಂಡದ್ದಾಗಿದೆ.
ಈ ಚಿಂತನೆಗೆ ಶಿಕ್ಷಕರ ತಂಡ ವರ್ಲಿ ಕಲೆಯ ಮೂಲಕ ಗೋಡೆ ಸೌಂದರ್ಯವನ್ನು ಇಮ್ಮಡಿಗೊಳಿಸುವ ಕಾರ್ಯದಲ್ಲಿ ನಿರತವಾಗಿದೆ.
ಸುಮಾರು 5 ದಿನಗಳ ಕಾಲ 10 ಶಿಕ್ಷಕರ ತಂಡ ಈ ಕಾಯಕಕ್ಕೆ ಮುಂದಾಗಿದೆ. ಕಂದಾಯ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳಿಗೆ ಸಂಬಂಧಿಸಿದ ವಿವಿಧ ಸೌಲಭ್ಯಗಳು, ಮಳೆಕೊಯ್ಲು, ಶೈಕ್ಷಣಿಕ ವಿಚಾರಕ್ಕೆ ಸಂಬಂಧಿಸಿದ ಚಿತ್ರಗಳನ್ನೂ ವರ್ಲಿ ಕಲೆಯ ಮೂಲಕ ಅನಾವರಣ ಮಾಡಲಿದ್ದಾರೆ.
ಈ ತಂಡದಲ್ಲಿ ಕಲಾ ಶಿಕ್ಷಕ ತಾರನಾಥ್ ಕೈರಂಗಳ ವಿಟ್ಲ ಅವರ ವಿನ್ಯಾಸದಲ್ಲಿ ಕಲಾಶಿಕ್ಷಕ ಶ್ರೀಕಾಂತ್ ನಾಯಕ್ ಕಂಬಳಕೋಡಿ ಅವರ ನೇತೃತ್ವದಲ್ಲಿ ಸುಭೋದ ಪ್ರೌಢ ಶಾಲೆಯ ಕಲಾ ಶಿಕ್ಷಕಿ ಶಾರದಾ, ಸಾಲ್ಮರ ಪ್ರೌಢಶಾಲಾ ಕಲಾ ಶಿಕ್ಷಕಿ ಜಯಲಕ್ಷ್ಮಿ, ಕೊಂಬೆಟ್ಟು ಕಲಾಶಿಕ್ಷಕ ಜಗನ್ನಾಥ್ ಅರಿಯಡ್ಕ, ಕೆಪಿಎಸ್ ಕುಂಬ್ರದ ಕಲಾಶಿಕ್ಷಕ ಪ್ರಕಾಶ್ ವಿಟ್ಲ, ಕೆಪಿಎಸ್ ಕೆಯ್ಯೂರು ಕಲಾಶಿಕ್ಷಕ ಎನ್.ಎಚ್,ಗೌಂಡಿ,ನರಿಮೊಗರು ಸಾಂದೀಪನಿಯ ಕಲಾಶಿಕ್ಷಕ ಸುಚೇತ್, ಮುಕ್ವೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕ ಚರಣ್ ಕುಮಾರ್ ಪುದು, ಕೇಶವ ಮೊಟ್ಟೆತ್ತಡ್ಕ ಅವರು ತೊಡಗಿಸಿಕೊಂಡಿದ್ದಾರೆ.