ಬೇರೆ ಸಮಾಜಗಳಂತೆ ಶಿವಳ್ಳಿ ಬ್ರಾಹ್ಮಣ ಸಂಘಟನೆಯೂ ಬಲಿಷ್ಠವಾಗಬೇಕು: ವೇದಬ್ರಹ್ಮ ಶ್ರೀ ಗೋಪಾಲಕೃಷ್ಣ ತಂತ್ರಿ
ಬೇರೆ ಸಮಾಜದ ಸಂಘಟನೆಗಳ ಹಾಗೆ ಶಿವಳ್ಳಿ ಬ್ರಾಹ್ಮಣ ಸಂಘಟನೆ ಕೂಡ ಬಲಿಷ್ಠವಾಗಿ ಬೆಳೆದು ಸರಕಾರದ ಎಲ್ಲ ಸವಲತ್ತುಗಳನ್ನು ಪಡೆದು, ನಮ್ಮ ಸಮಸ್ಯೆಯನ್ನು ಸರಕಾರ ಮುಂದೆ ತಿಳಿಸುವಂತೆ ಆಗಬೇಕು. ನಮ್ಮೊಳಗಿನ ಒಗ್ಗಟ್ಟು ಗಟ್ಟಿಯಾಗಿ ಮತ್ತಷ್ಟು ಅಭಿವೃದ್ಧಿಯಾಗಲಿ ಎಂದು ತಂತ್ರಿ ವೇದಬ್ರಹ್ಮ ಶ್ರೀ ಗೋಪಾಲಕೃಷ್ಣತಂತ್ರಿಯವರು ಹೇಳಿದ್ದಾರೆ.
13 ವಲಯವನ್ನು ಒಳಗೊಂಡ ಶಿವಳ್ಳಿ ಸ್ವಂದನ(ರಿ), ಮಂಗಳೂರು ಇವರ ಮುಂದಾಳ್ವದಲ್ಲಿ ಶಿವಳ್ಳಿ ಸ್ವಂದನ ಕಾರ್ಯಕ್ರಮವು ತಲಪಾಡಿ ವಲಯದ ಸಹಕಾರದಲ್ಲಿ ತಲಪಾಡಿ ಶ್ರೀ ದುರ್ಗಾ ಪರಮೇಶ್ವರಿ ಮೈದಾನದಲ್ಲಿ ನಡೆದ ಕ್ರೀಡೋತ್ಸವ 2021 ಅನ್ನು ಮುನ್ನೂರು ತಂತ್ರಿ ವೇದಬ್ರಹ್ಮ ಶ್ರೀ ಗೋಪಾಲಕೃಷ್ಣತಂತ್ರಿಯವರು ಉದ್ಘಾಟಿಸಿ ಮಾತನಾಡಿದರು. ಮೊದಲು ತಲಪಾಡಿ ಶ್ರೀ ದುರ್ಗಾಪರಮೇಶ್ವರಿ ದೇವಿಯ ಸಾನಿಧ್ಯದಲ್ಲಿ ಮಹಾಗಣಪತಿ ಹೋಮ, ಕ್ರೀಡಾಕೂಟವು ಯಶಸ್ವಿಯಾಗಿ ನಡೆಯಲೆಂದು ಸಾಮೂಹಿಕ ಪ್ರಾರ್ಥನೆ ನಡೆಸಲಾಯಿತು.
ಈ ಸಂದರ್ಭದಲ್ಲಿ ಶಿವಳ್ಳಿ ಬ್ರಾಹ್ಮಣರ ಇತಿಹಾಸವನ್ನು ಮೆಲುಕು ಹಾಕಲಾಯಿತು.
ರಾಜ ಮಯೂರವರ್ಮನ ಕಾಲದಲ್ಲಿ ಉಳ್ಳಾಲಕ್ಕೆ ಬಂದು ನೆಲೆಸಿದ ಶಿವಳ್ಳಿ ಬಾಹ್ಮಣರ ಮೊದಲ ಕುಟುಂಬ ಎನ್ನುವ ಹೆಗ್ಗಳಿಕೆಯ, ಉಳ್ಳಾಲ ಪರಿಸರದ ಅದೆಷ್ಟೋ ಕ್ಷೇತ್ರಗಳ ತಂತ್ರ ಸ್ಥಾನಮಾನವನ್ನು ಪಡೆದ ಮುನ್ನೂರು ತಂತ್ರಿ ಮನೆತನದ ವೇದಮೂರ್ತಿ ಬ್ರಹ್ಮಶ್ರೀ ಗೋಪಾಲಕೃಷ್ಣ ತಂತ್ರಿಯವರು ಕ್ರೀಡಾ ಜ್ಯೋತಿಯನ್ನು ಬೆಳಗಿಸಿ ಶಿವಳ್ಳಿ ಸ್ವಂದನ ಒಕ್ಕೂಟದ ಅಧ್ಯಕ್ಷ ಕೃಷ್ಣಭಟ್ ಕದ್ರಿಯವರಿಗೆ ಹಸ್ತಾಂತರಿಸಿದರು.
ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದ ಶಾರದ ಸಮೂಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಪ್ರೊ. ಎಂ.ಬಿ ಪುರಾಣಿಕ್, ಶಿವಳ್ಳಿ ಬ್ರಾಹ್ಮಣ ಸಂಘಟನೆಗೆ ಇಂತಹ ಕ್ರೀಡಾಕೂಟಗಳು ಅಗತ್ಯ, ಸಂಘಟನೆಯು ಬಲಿಷ್ಟವಾಗಿ, ಸಮಸ್ಯೆಗಳನ್ನು ಪರಿಹಾರ ಮಾಡುವಲ್ಲಿ ಯಶಸ್ವಿಯಾಗಲಿ ಎಂದು ಕ್ರೀಡಾಕೂಟಕ್ಕೆ ಶುಭ ಹಾರೈಸಿದರು. ಮುನ್ನೂರು ಮನೆತನದ ವೇದಮೂರ್ತಿ ಬ್ರಹ್ಮಶ್ರೀ ಗೋಪಾಲಕೃಷ್ಣ ತಂತ್ರಿವರೇಣ್ಯರು, ತಲಪಾಡಿ ಶ್ರೀ ದುರ್ಗಾಪರಮೇಶ್ವರಿ ದೇವಾಸ್ಥಾನದ ಪ್ರಧಾನ ಅರ್ಚಕರಾದ ವೇದಮೂರ್ತಿ ಶ್ರೀ ಗಣೇಶ್ ಭಟ್ ಇವರನ್ನು ಶಿವಳ್ಳಿ ಸ್ವಂದನ ವತಿಯಿಂದ ಸನ್ಮಾನಿಸಲಾಯಿತು.
ಕಪ್ಪೆ ಜಿಗಿತ, ಬಾಲ್ ಪಾಸಿಂಗ್, ಒಂಟಿ ಕಾಲು ಓಟ, ಬಕೆಟ್ ಮತ್ತು ಬಾಲ್, ಹಿಮ್ಮಖ ಓಟ, ಗುಂಡೆಸತ, ಗೋಣಿ ಚೀಲ ಓಟ, ಹಗ್ಗ ಜಗ್ಗಾಟ, ಸಂಗೀತ ಕುರ್ಚಿ, ರಿಲೇ,ಮಡಕೆ ಒಡೆಯುವುದು, ತ್ರೋ ಬಾಲ್, ಕ್ರಿಕೆಟ್ ಮುಂತಾದ ಕ್ರೀಡೆಗಳನ್ನು ಮಹಿಳೆಯರಿಗೆ ಪುರುಷರಿಗೆ ಹಾಗೂ ಮಕ್ಕಳಿಗೆ ನಡೆಸಲಾಯಿತು.
ಡಾ ಎಂ. ಸದಾಶಿವ ಪೊಳ್ನಾಯ. ಎಸ್.ಕೆ ಕ್ಲಿನಿಕ್ ಉಳ್ಳಾಲ, ಧಾರ್ಮಿಕ ಪರಿಷತ್ ಸದಸ್ಯರಾದ ಪೊಳಲಿ ಗಿರೀಶ್ ತಂತ್ರಿ, ಶಿವಳ್ಳಿ ಸ್ವಂದನ ಒಕ್ಕೂಟದ ಅಧ್ಯಕ್ಷ ಕೃಷ್ಣಭಟ್ ಕದ್ರಿ, ಕಾರ್ಯದರ್ಶಿ ಗಣೇಶ್ ಹೆಬ್ಬಾರ್, ವಲಯ ಪ್ರಭಾರಿ ಸುಬ್ರಹ್ಮಣ್ಯ ಭಟ್ ಮೊದಲಾದವರು ಉಪಸ್ಥಿತರಿದ್ದರು. ಕುಮಾರಿ ಸೌಜನ್ಯ ಪ್ರಾರ್ಥಿನೆಗೈದರು. ತಲಪಾಡಿ ವಲಯದ ಅಧ್ಯಕ್ಷ ಹರಿ ಭಟ್ ಸ್ವಾಗತಿಸಿದರು, ಚಂದ್ರಿಕಾ ಸುರೇಶ್ ಕಾರ್ಯಕ್ರಮ ನಿರೂಪಿಸಿದರು, ತಲಪಾಡಿ ವಲಯ ಕಾರ್ಯದರ್ಶಿ ಗೋಪಾಲಕೃಷ್ಣ ಪೆಜೆತ್ತಾಯ ವಂದಿಸಿದರು.