ಧರ್ಮಸ್ಥಳ | ಇನ್ನೋವಾ ಕಾರಿನಲ್ಲಿ ಬಂದು ಚಿನ್ನ ಎಗರಿಸಿದ ದಂಪತಿ ಅರೆಸ್ಟ್
ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿಯ ದರ್ಶನಕ್ಕೆಂದು ಬಂದ ಭಕ್ತೆ ಒಬ್ಬರ ವ್ಯಾನಿಟಿ ಬ್ಯಾಗ್‌ನಲ್ಲಿದ್ದ ಸುಮಾರು 3.20 ಲಕ್ಷ ಮೌಲ್ಯದ ಚಿನ್ನವನ್ನು ಕಳ್ಳರು ಕಳವುಗೈದ ಘಟನೆ ಎ.1 ರಂದು ನಡೆದಿದ್ದು, ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಕಳ್ಳರನ್ನು ಪತ್ತೆಹಚ್ಚಿ ವಶಕ್ಕೆ ಪಡೆದ ಘಟನೆ ಧರ್ಮಸ್ಥಳದಲ್ಲಿ ನಡೆದಿದೆ.
ಕಳ್ಳರನ್ನು ಬಂಧಿಸಿದ ಧರ್ಮಸ್ಥಳ ಪೊಲೀಸರು, ಆರೋಪಿಗಳು ಕೃತ್ಯಕ್ಕೆ ಬಳಸಿದ ಇನ್ನೋವಾ ಕಾರು ಮತ್ತು 85 ಗ್ರಾಮಿನ ಚಿನ್ನದ ಸರವನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಶಿರಸಿ ತಾಲೂಕಿನ ಚಿಪಗಿ ಗ್ರಾಮದ ಕಲ್ಪನಾ ಚಂದ್ರಶೇಖರ ನಾಯ್ಕ ಎಂಬವರು ಎ.1 ರಂದು ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡಿದ್ದರು. ಬೆಳಿಗೆ 7 ಗಂಟೆಗೆ ಶ್ರೀ ಮಂಜುನಾಥ ಸ್ವಾಮಿಯ ದರ್ಶನ ಮಾಡಲು ಅವರು ದೇವಸ್ಥಾನದ ಒಳಗೆ ಪ್ರವೇಶಿಸಿದ್ದಾರೆ. ದೇವರ ದರ್ಶನ ಮುಗಿಸಿಕೊಂಡು ಹೊರ ಬಂದಾಗ ಅವರ ತಾಯಿ ಭವಾನಿಯವರು ಹಿಡಿದುಕೊಂಡಿದ್ದ ವ್ಯಾನಿಟಿ ಬ್ಯಾಗ್ ನಲ್ಲಿದ್ದ ಒಡವೆ ಮಾಯವಾಗಿತ್ತು. ಅದರಲ್ಲಿ ಸುಮಾರು
ರೂ.3.20 ಲಕ್ಷ ಬೆಲೆಬಾಳುವ 40 ಗ್ರಾಂ ತೂಕದ ಗಣಪತಿ ದೇವರ ಮೂರ್ತಿಯ ಪೆಂಡೆಂಟ್ ಇರುವ ಚಿನ್ನದ ಸರ -1 ಮತ್ತು 40 ಗ್ರಾಂ ತೂಕದ ಚಿನ್ನದ ಬ್ರೇಸ್ಲೆಟ್ ಇರುವ ಸ್ಟೀಲ್ ಕರಡಿಗೆಯ ಸಮೇತ ನಾಪತ್ತೆಯಾಗಿತ್ತು.
ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆಗೆ ದೂರು ನೀಡಲಾಗಿತ್ತು. ಕ್ಷಿಪ್ರ ಕಾರ್ಯಾಚರಣೆಗೆ ಹೊರಟ ಕಾರ್ಯಪ್ರವೃತ್ತರಾದ ಧರ್ಮಸ್ಥಳ ಪೊಲೀಸ್ ಠಾಣಾ ಪಿ.ಎಸ್.ಐ ಪವನ್ ನಾಯಕ್ ಮತ್ತು ಸಿಬ್ಬಂದಿಗಳಾದ ಬೆನ್ನಿಚ್ಚನ್, ಪ್ರಶಾಂತ, ರಾಹುಲ್ ರಾವ್, ರವೀಂದ್ರ ಇವರುಗಳ ತಂಡ ಆರೋಪಿಗಳ ಇರುವಿಕೆಯನ್ನು ಪತ್ತೆ ಮಾಡಿದ್ದರು. ನಂತರ ಗದಗ ಜಿಲ್ಲೆಯ ಸಿದ್ಧಾರ್ಥ ಹಾಗೂ ದಾಕ್ಷಾಯಿಣಿಯವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕೃತ್ಯಕ್ಕೆ ಬಳಸಿದ ಇನ್ನೋವಾ ಕಾರು, ಹಾಗೂ ಕಳವಾದ ಒಟ್ಟು 85 ಗ್ರಾಂ ಚಿನ್ನಾಭರಣಗಳನ್ನು ಸ್ವಾಧೀನಪಡಿಸಿಕೊಂಡು ಆರೋಪಿಗಳನ್ನು ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.