ಕಟೀಲು | ಕೊಲೆ ಪ್ರಕರಣ|ಐವರ ಬಂಧನ

ಕಟೀಲು ಸಮೀಪದ ದೇವರಗುಡ್ಡೆ ಎಂಬಲ್ಲಿ ಮೇ 31ರಂದು ರಾತ್ರಿ ನಡೆದ ಕರಂಬಾರು ನಿವಾಸಿ ಕೀರ್ತನ್(20) ಎಂಬವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಐವರು ಆರೋಪಿಗಳನ್ನು ಬಂಧಿಸುವಲ್ಲಿ ಮಂಗಳೂರು ಪೊಲೀಸರು ಯಶಸ್ವಿಯಾಗಿದ್ದಾರೆ.


ಬಜ್ಪೆ ಠಾಣಾ ಪೊಲೀಸರು ಮತ್ತು ಮಂಗಳೂರು ಉತ್ತರ ಉಪ ವಿಭಾಗದ ರೌಡಿ ನಿಗ್ರಹ ದಳದವರು ನಡೆಸಿದ ಜಂಟಿ ಕಾರ್ಯಚರಣೆಯಲ್ಲಿ ದೀಪೇಶ್, ಸುಹಾಸ್ ಶೆಟ್ಟಿ, ಪ್ರಶಾಂತ್ ಯಾನೆ ಪಚ್ಚು, ಮೋಕ್ಷಿತ್ ಮತ್ತು ಧನರಾಜ್ ಎಂಬವರನ್ನು ಬಂಧಿಸಿದ್ದಾರೆ.

ಘಟನೆ

ದೀಪೇಶ್ ಎಂಬಾತನ ಗೆಳೆಯ ಪ್ರಶಾಂತ್ ಕೆಲಸ ಮಾಡುತ್ತಿದ್ದಾಗ ಬಿದ್ದು ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ. ಈ ವಿಚಾರದಲ್ಲಿ ಕೀರ್ತನ್, ನಿತಿನ್, ಮಣೇಶ್ ಎಂಬವರು ತಮಾಷೆ ಮಾಡಿ, ಆತ ಬಿದ್ದದ್ದು ಒಳ್ಳೆಯದೇ ಆಯಿತು ಎಂದು ಹೇಳಿದ್ದರು. ಇದು ದೀಪೇಶ್ ಮತ್ತು ತಂಡದ ಕಿವಿಗೆ ಬಿದ್ದಿದ್ದು, ಅವರು ಫೋನ್ ಮೂಲಕ ಕೀರ್ತನ್, ನಿತಿನ್, ಮಣೇಶ್‌ನನ್ನು ಪ್ರಶ್ನಿಸಿದ್ದು, ಕೀರ್ತನ್ ಮತ್ತು ತಂಡ ಸಮರ್ಥಿಸಿದೆ.

ಇದೇ ವಿಚಾರದಲ್ಲಿ ಎರಡು ತಂಡಗಳ ಮಧ್ಯೆ ವಾಗ್ವಾದ ನಡೆದಿದೆ. ಬಳಿಕ ದಿಪೇಶ್ ಮತ್ತಿತರರು ಸೇರಿ ಕೀರ್ತನ್ ಮತ್ತು ತಂಡವಿದ್ದ ದೇವರಗುಡ್ಡೆ ಪ್ರದೇಶಕ್ಕೆ ತೆರಳಿದೆ.

ಈ ಸಂದರ್ಭ ಎರಡೂ ತಂಡಗಳ ಮಧ್ಯೆ ಮತ್ತೆ ವಾಕ್ಸಮರ ನಡೆದು ದೀಪೇಶ್ ಮತ್ತು ತಂಡವು ಕೀರ್ತನ್, ನಿತಿನ್, ಮಣೇಶ್ ಮೇಲೆ ತಲವಾರು ದಾಳಿ ನಡೆಸಿದೆ. ಇದರಿಂದ ಕೀರ್ತನ್ ಮೃತಪಟ್ಟರೆ, ನಿತಿನ್ ಮತ್ತು ಮಣೇಶ್ ಗಾಯಗೊಂಡು ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

Leave A Reply

Your email address will not be published.