ಕರಾವಳಿಯಲ್ಲಿ ಜೂನ್ 5 ಕ್ಕೆ ಮುಂಗಾರು ಮಳೆ ಪ್ರಾರಂಭ
ಬೆಂಗಳೂರು: ನೈರುತ್ಯ ಮುಂಗಾರು ಮಳೆಯು ಸೋಮವಾರ ಕೇರಳವನ್ನು ಪ್ರವೇಶಿಸಿದೆ. ಆದುದರಿಂದ ಜೂನ್ 5 ರಂದು ಮಾನ್ಸೂನ್ ಮಾರುತಗಳು ಕರ್ನಾಟಕವನ್ನು ಪ್ರವೇಶಿಸಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.
ಜೂನ್ 5 ರಂದು ಮುಂಗಾರು ಕರಾವಳಿಯ ಮೂಲಕ ಕರ್ನಾಟಕವನ್ನು ಪ್ರವೇಶಿಸುವ ನಿರೀಕ್ಷೆ ಇದೆ. ಆದರೆ ಇದಕ್ಕೂ ಮುನ್ನ ರಾಜ್ಯದ ಬಹುತೇಕ ಎಲ್ಲೆಡೆ ಮಳೆಯಾಗುವ ನಿರೀಕ್ಷೆ ಇದೆ. ವಾಯುಭಾರ ಕುಸಿದಿರುವ ಕಾರಣ ಅರಬ್ಬಿ ಸಮುದ್ರದಲ್ಲಿ ಜೂನ್ 2 ಮತ್ತು 3 ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಅದರಂತೆಯೇ ಎಲ್ಲೆಡೆ ದೊಡ್ಡ ಮಳೆಯಾಗುತ್ತಿದೆ.
ನಿನ್ನೆ ಕೇರಳದ ಹಲವೆಡೆ ಸೋಮವಾರ ಭಾರಿ ಮಳೆಯಾಗಿದೆ. ದೊಡ್ದ ಮಳೆಯ ಕಾರಣ ಅಲ್ಲಿ, ಕೋಯಿಕ್ಕೋಡ್ನಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಕರ್ನಾಟಕದ ಹಲವೆಡೆಯೂ ಉತ್ತಮ ಮಳೆಯಾಗಿದೆ. ಉಡುಪಿ ಜಿಲ್ಲೆಯ ಕೋಟದಲ್ಲಿ ಗರಿಷ್ಠ ಸೋಮವಾರ 10 ಸೆಂ.ಮೀ ಮಳೆಯಾಗಿದೆ. ಕಾರವಾರ 7 ಸೆಂ.ಮೀ, ಬೆಳಗಾವಿ, ಪಾವಗಡ 6 ಸೆಂ.ಮೀ, ಹೊನ್ನಾವರ, ನರಗುಂದ 5 ಸೆಂ.ಮೀ , ಚಿಕ್ಕೋಡಿ, ಗೋಕರ್ಣ, ಕೊಲ್ಲೂರು, ಸಿಂಧನೂರು, ಹೊಸಪೇಟೆ, ಕೊಪ್ಪ, ತುಮಕೂರಿನಲ್ಲಿ ತಲಾ 3 ಸೆಂ.ಮೀ, ನಿಪ್ಪಾಣಿ, ಕಲಬುರ್ಗಿ, ತೀರ್ಥಹಳ್ಳಿ, ರಾಯಚೂರು, ಮುಧೋಳದಲ್ಲಿ ತಲಾ 2 ಸೆಂ.ಮೀ.ಮಳೆಯಾಗಿದೆ.
ಈ ಸಲ ಮುಂಗಾರು ಉತ್ತಮವಾಗಿರಲಿದ್ದು, ವಾಡಿಕೆಯಷ್ಟು ಮಳೆಯಾಗಲಿದೆ ಎಂದು ಅಂದಾಜಿಸಲಾಗಿದೆ. 1961-2010 ರ ಈ 50 ವರ್ಷಗಳ ದೀರ್ಘಾವಧಿ ಸರಾಸರಿ ಮಳೆಯ ಪ್ರಮಾಣ 88 ಸೆಂ.ಮೀ ಆಗಿದೆ. ಆದರೆ ಈ ಭಾರಿ ದೀರ್ಘಾವಧಿ ಸರಾಸರಿಯ ಶೇ 103 ರಷ್ಟು ಮಳೆಯಾಗಲಿದೆ. ಇದರಲ್ಲಿ ಶೇ 8 ರಷ್ಟು ವ್ಯತ್ಯಾಸ ಆದರೂ ಆದೀತು. ಉತ್ತರ ಭಾರತದ ಹಲವು ರಾಜ್ಯಗಳಲ್ಲಿ ವಾಡಿಕೆಗಿಂತ ಅಧಿಕ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.
ಬಿಹಾರ, ಜಾರ್ಖಂಡ್, ಪಶ್ಚಿಮ ಬಂಗಾಳ ಮತ್ತು ಈಶಾನ್ಯ ಭಾರತದ ರಾಜ್ಯಗಳಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗುವ ನಿರೀಕ್ಷೆ ಇದೆ. ಆದರೆ ದೇಶದ ಯಾವ ರಾಜ್ಯಗಳಲ್ಲೂ ಬರದ ಸ್ಥಿತಿ ನಿರ್ಮಾಣವಾಗುವ ಸಾಧ್ಯತೆ ಇಲ್ಲ ಎಂದು ಹವಾಮಾನ ಇಲಾಖೆ ಹೇಳಿದೆ.
ನೈರುತ್ಯ ಮುಂಗಾರು ಮಳೆಯು ಜೂನ್ನಿಂದ ಸೆಪ್ಟೆಂಬರ್ವರೆಗೂ ಇರಲಿದೆ. ದೇಶದ ಶೇ 75 ರಷ್ಟು ಮಳೆ ಈ ಅವಧಿಯಲ್ಲೇ ಆಗಲಿದೆ. ದೇಶದ ಬಹುತೇಕ ಜಲಾಶಯಗಳು ಈ ಅವಧಿಯಲ್ಲಿ ಭರ್ತಿಯಾಗಲಿದೆ. ಉತ್ತಮ ಮಳೆಯಾದರೆ ಕೃಷಿ ಮತ್ತು ಆರ್ಥಿಕ ಚಟುವಟಿಕೆಗೆ ಚುರುಕು ದೊರೆಯಲಿದೆ ಎಂದು ಹವಾಮಾನ ಇಲಾಖೆ ನಿರ್ದೇಶಕ ಮೃತ್ಯುಂಜಯ ಮೋಹಪಾತ್ರ ಹೇಳಿದ್ದಾರೆ.