ಕಟೀಲು | ಅರಸುಗುಡ್ಡೆಯಲ್ಲಿ ಯುವಕರ ಮೇಲೆ ತಂಡದಿಂದ ದಾಳಿ : ಒಬ್ಬ ಸಾವು,ಇಬ್ಬರು ಗಂಭೀರ

ಮಂಗಳೂರು : ಎಕ್ಕಾರು ಪಂಚಾಯತ್ ವ್ಯಾಪ್ತಿಯ ಕಟೀಲು ಸಮೀಪದ ಬಜಪೆ ಠಾಣಾ ವ್ಯಾಪ್ತಿಯ ಅರಸುಗುಡ್ಡೆ ಎಂಬಲ್ಲಿ ರವಿವಾರ ರಾತ್ರಿ ತಂಡವೊಂದು ಮೂವರು ಯುವಕರ ಮೇಲೆ ದಾಳಿ ನಡೆಸಿದ್ದು, ಈ ಘಟನೆಯಲ್ಲಿ ಓರ್ವ ಸಾವನ್ನಪ್ಪಿದ್ದರೆ, ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.

 

ತಂಡದ ದಾಳಿಯಿಂದ ಗಂಭೀರವಾಗಿ ಗಾಯಗೊಂಡಿದ್ದ ಮೂವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲು ಯತ್ನಿಸಲಾಗಿದ್ದು ಈ ವೇಳೆ ದಾರಿ ಮಧ್ಯೆ ಯುವಕ ಸಾವನ್ನಪ್ಪಿದ್ದಾನೆ.
ಮೃತಪಟ್ಟ ಯುವಕನನ್ನು ಕಾವೂರು ಮರಕ್ಕಡ ನಿವಾಸಿ ಕೀರ್ತನ್ ಎಂದು ಗುರುತಿಸಲಾಗಿದೆ. ಗಂಭೀರ ಗಾಯಗೊಂಡ ನಿತಿನ್ ಹಾಗೂ ಇನ್ನೋರ್ವನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಕೊಲೆ ನಡೆಸಿದ ತಂಡದವರು ಮತ್ತು ಕೊಲೆಯಾದ ಕೀರ್ತನ್‌ ಹಾಗೂ ಗಾಯಗೊಂಡವರು ಈ ಹಿಂದೆ ಜತೆಯಾಗಿಯೇ ಇದ್ದು ದೋಸ್ತಿಗಳಾಗಿದ್ದರು. ಇತ್ತೀಚೆಗೆ ಕ್ಷುಲ್ಲಕ ಕಾರಣಕ್ಕೆ ಅವರೊಳಗೆ ವೈಮನಸ್ಸು ಬೆಳೆದಿತ್ತು ಎನ್ನಲಾಗಿದೆ.

ರವಿವಾರ ರಾತ್ರಿ ಕೀರ್ತನ್‌, ನಿತಿನ್‌ ಮತ್ತವರ ಇನ್ನೋರ್ವ ಸಹಚರ ಬಜಪೆ ಅರಸುಗುಡ್ಡೆಯಲ್ಲಿ ಒಟ್ಟು ಸೇರಿದ್ದರು. ಈ ಸಂದರ್ಭ ಅವರು ವಿರೋಧಿ ತಂಡವನ್ನು ಅಲ್ಲಿಗೆ ಕರೆಸಿಕೊಂಡಿದ್ದರು ಎನ್ನಲಾಗಿದೆ.
ವಿರೋಧಿ ತಂಡ ಅಲ್ಲಿಗೆ ಆಗಮಿಸಿದಾಗ ಮಾತಿಗೆ ಮಾತು ಬೆಳೆದು ಕೀರ್ತನ್‌ ಮತ್ತು ಆತನ ಸಹಚರರ ಮೇಲೆ ಇನ್ನೊಂದು ತಂಡದವರು ಚೂರಿಯಿಂದ ಹಲ್ಲೆ ನಡೆಸಿದರು.

ಈ ಸಂದರ್ಭ ಕೀರ್ತನ್‌ ತೀವ್ರ ಗಾಯಗೊಂಡು ಬಳಿಕ ಸಾವನ್ನಪ್ಪಿದ್ದಾರೆ. ಗಾಯಾಳು ನಿತಿನ್‌ ಮತ್ತು ಇನ್ನೋರ್ವನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಹಿರಿಯ ಪೊಲೀಸ್‌ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಆರೋಪಿಗಳು ಸ್ಥಳದಿಂದ ಪಾರಾಗಿದ್ದು, ಬಜಪೆ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

Leave A Reply

Your email address will not be published.